ಹಾಸನ | ಬಟ್ಟೆ ಅಂಗಡಿ ಆಫರ್ ಗದ್ದಲ; ಜನದಟ್ಟಣೆ ನಿಯಂತ್ರಿಸಲು ಪೊಲೀಸರಿಂದ ಲಾಠಿ ಪ್ರಹಾರ
ಹಾಸನ : ನಗರದ ರಿಂಗ್ ರಸ್ತೆಯ ಹೌಸಿಂಗ್ ಬೋರ್ಡ್ ಬಳಿಯ ಅರುಣ್ ಅಡ್ಡ ಮೆನ್ಸ್‌ವೇರ್ ಬಟ್ಟೆ ಅಂಗಡಿಯಲ್ಲಿ ರವಿವಾರ ಬೆಳಗ್ಗೆ ಘೋಷಿಸಿದ ವಿಶೇಷ ಆಫರ್ ಗದ್ದಲಕ್ಕೆ ತಿರುಗಿತು. ‘‘1,000 ರೂ. ಗೆ 20 ಶರ್ಟ್’’ ಆಫರ್ ಪ್ರಕಟವಾಗುತ್ತಿದ್ದಂತೆ ಸಾವಿರಾರು ಮಂದಿ ಅಂಗಡಿಗೆ ಆಗಮಿಸಿದ ಪರಿಣಾಮ ನೂಕುನುಗ್ಗಲು ಉಂಟಾಗಿ, ಕೊನೆಗೆ ಪೊಲೀಸರು ಲಾಠಿ ಪ್ರಹಾರಕ್ಕೆ ಮುಂದಾದ ಘಟನೆ ವರದಿಯಾಗಿದೆ.
ಅಂಗಡಿ ತೆರೆದ ತಕ್ಷಣವೇ ಮಹಿಳೆಯರು ಮತ್ತು ಪುರುಷರು ಸರದಿಯಲ್ಲಿ ನಿಂತು ಬಟ್ಟೆ ಖರೀದಿಸಲು ಆರಂಭಿಸಿದರು. ಮೊದಲು ಎಲ್ಲ ನಿಯಮಿತವಾಗಿ ಸಾಗುತ್ತಿದ್ದರೂ, ಅಲ್ಪಕಾಲದಲ್ಲೇ ಜನರ ಸಂಖ್ಯೆ ನಿರೀಕ್ಷೆಗಿಂತ ಹೆಚ್ಚು ಹೆಚ್ಚಾಗತೊಡಗಿತು. ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ಶಿಸ್ತು ಕಾಪಾಡಲು ಹರಸಾಹಸ ಪಟ್ಟರೂ ಜನಸಂದಣಿ ಹೆಚ್ಚಾದ ಕಾರಣ ಪರಿಸ್ಥಿತಿ ನಿಯಂತ್ರಣ ತಪ್ಪಿತು. ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು.
ಅಂಗಡಿ ಮಾಲಕ ಅರುಣ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ನಾನು ಆಲ್ ಇಂಡಿಯಾ ಮಟ್ಟದಲ್ಲಿ ಬಟ್ಟೆ ಅಂಗಡಿ ಮೂಲಕ ಹೆಸರು ಮಾಡಬೇಕು ಎನ್ನುವ ಕನಸು ಹೊಂದಿದ್ದೇನೆ. ಲೋ ಮತ್ತು ಮಿಡಲ್ ಕ್ಲಾಸ್ ಜನತೆಗೆ ಉತ್ತಮ ಬಟ್ಟೆ ತಲುಪಬೇಕೆಂಬ ಉದ್ದೇಶದಿಂದಲೇ ಈ ಆಫರ್ ನೀಡಿದ್ದೇನೆ. ಸಾವಿರ ರೂ. ಗೆ 20 ಶರ್ಟ್ ಆಫರ್ ಮಾಡಿದ್ದರಿಂದ ಜನಸಾಗರವೇ ಹರಿದುಬಂದಿತು ಎಂದು ವಿವರಿಸಿದರು.