Hassan | ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಒಎಂಆರ್ ಸಂಖ್ಯೆ ಗೊಂದಲ: ಪರೀಕ್ಷೆ ಒಂದು ಗಂಟೆ ವಿಳಂಬ
ಹಾಸನ : ರಾಜ್ಯ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ ಹಾಸನ ನಗರದ ಗಂಧದಕೋಠಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಶೀಟ್ ಮತ್ತು ಪ್ರಶ್ನೆಪತ್ರಿಕೆಯ ಕ್ರಮಸಂಖ್ಯೆ ಸಂಬಂಧ ಉಂಟಾದ ಗೊಂದಲದಿಂದ ಎರಡು ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ಸುಮಾರು ಒಂದು ಗಂಟೆ ವಿಳಂಬವಾಗಿ ಆರಂಭವಾದ ಘಟನೆ ರವಿವಾರ ವರದಿಯಾಗಿದೆ.
ಬೆಳಗ್ಗೆ ಪ್ರಶ್ನೆಪತ್ರಿಕೆ ವಿತರಿಸಿದ ಬಳಿಕ ಕೆಲ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ ಹಾಗೂ ಒಎಂಆರ್ ಶೀಟ್‌ನಲ್ಲಿರುವ ಕ್ರಮಸಂಖ್ಯೆಗಳು ಹೊಂದಿಕೆಯಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಪರೀಕ್ಷೆ ಬರೆಯಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳ ವಿರುದ್ಧ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಉಳಿದ ಕೊಠಡಿಗಳಲ್ಲಿಯೂ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ಕೆಲಕಾಲ ವಿಳಂಬ ಉಂಟಾಯಿತು. ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರದ ಅಧಿಕಾರಿಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಭ್ಯರ್ಥಿಗಳಿಗೆ ಪರೀಕ್ಷಾ ವಿಧಾನವನ್ನು ವಿವರಿಸಿ ಮನವರಿಕೆ ಮಾಡಿಕೊಟ್ಟರು. ಸುಮಾರು ಒಂದು ಗಂಟೆ ಕಾಲ ಮುಂದುವರಿದ ಗೊಂದಲದಿಂದ ಪರೀಕ್ಷಾ ಕೇಂದ್ರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ, ಜಿಲ್ಲಾಧಿಕಾರಿ ಹಾಗೂ ಪರೀಕ್ಷಾ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಂಡಿತು. ಬಳಿಕ ಎರಡು ಕೊಠಡಿಗಳ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಲಾಗಿದ್ದು, ಉಳಿದ ಪರೀಕ್ಷೆಗಳು ಯಾವುದೇ ಅಡಚಣೆಯಿಲ್ಲದೆ ಶಾಂತಿಯುತವಾಗಿ ಪೂರ್ಣಗೊಂಡವು.
ಈ ವೇಳೆ ಜಿಲ್ಲಾಧಿಕಾರಿಗಳು ಮಾಧ್ಯಮದೊಂದಿಗೆ ಮಾತನಾಡಿ, ಪ್ರಶ್ನೆಪತ್ರಿಕೆಯಲ್ಲಿರುವ ಕ್ರಮಸಂಖ್ಯೆಯನ್ನು ಅಭ್ಯರ್ಥಿಗಳು ಒಎಂಆರ್ ಉತ್ತರ ಪತ್ರಿಕೆಯಲ್ಲಿರುವ ನಿಗದಿತ ಬಾಕ್ಸ್‌ನಲ್ಲಿ ದಾಖಲಿಸಬೇಕು. ಓಎಂಆರ್‌ನಲ್ಲಿ ಈಗಾಗಲೇ ಮುದ್ರಿತವಾಗಿರುವ ಸಂಖ್ಯೆ ಮತ್ತು ಪ್ರಶ್ನೆಪತ್ರಿಕೆಯ ಸಂಖ್ಯೆ ಒಂದೇ ಇರಬೇಕೆಂಬ ನಿಯಮ ಇಲ್ಲ. ಪರೀಕ್ಷೆಯ ಮೌಲ್ಯಮಾಪನಕ್ಕೆ ಅಗತ್ಯವಾಗಿರುವುದು ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಯ ಕ್ರಮಸಂಖ್ಯೆಯನ್ನು ಸರಿಯಾಗಿ ನಮೂದಿಸುವುದಷ್ಟೇ ಎಂದು ಸ್ಪಷ್ಟಪಡಿಸಿದರು. ಈ ವಿವರಣೆಯ ಬಳಿಕವೂ ಕೆಲ ಅಭ್ಯರ್ಥಿಗಳು ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರೂ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿ ಅದೇ ವಿಧಾನ ಸರಿಯಾಗಿದೆ ಎಂಬುದನ್ನು ದೃಢಪಡಿಸಿದ ನಂತರ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಒಪ್ಪಿಕೊಂಡರು. ಉಳಿದ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಎರಡು ಕೊಠಡಿಗಳ ಅಭ್ಯರ್ಥಿಗಳಿಗೆ ಒಂದು ಗಂಟೆ ಹೆಚ್ಚುವರಿ ಸಮಯ ನೀಡಿ ಪರೀಕ್ಷೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.