ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ, ಸಕಲೇಶಪುರ ತಾಲೂಕಿನ ಯಡಕುಮರಿ–ಶಿರವಾಗಿಲು ನಡುವಿನ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದೆ. ಇದರ ಪರಿಣಾಮವಾಗಿ ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ಇಂದು ಸಂಚರಿಸಬೇಕಿದ್ದ ಎಲ್ಲಾ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಘಟನಾ ಸ್ಥಳಕ್ಕೆ ಧಾವಿಸಿರುವ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ. ಹಳಿ ಸುರಕ್ಷಿತವಾಗಿದೆ ಎಂದು ಖಚಿತವಾದ ಬಳಿಕವೇ ರೈಲು ಸಂಚಾರ ಪುನರಾರಂಭವಾಗಲಿದೆ ಎಂದು ಇಲಾಖೆ ತಿಳಿಸಿದೆ.

ರೈಲುಗಳ ರದ್ದತಿಯಿಂದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನಡುರಾತ್ರಿ ವೇಳೆಯೇ ಪರ್ಯಾಯ ಪ್ರಯಾಣ ವ್ಯವಸ್ಥೆ ಹುಡುಕಲು ಹರಸಾಹಸ ಪಟ್ಟಿದ್ದಾರೆ. ಹಲವರು ನಿನ್ನೆ ರಾತ್ರಿಯಿಂದಲೇ ವಿವಿಧ ನಿಲ್ದಾಣಗಳಲ್ಲಿ ಕಾಯುವಂತಾಗಿದೆ.

ಪ್ರಸ್ತುತ ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಯಾಗಿರುವ ರೈಲುಗಳು:

ಬೆಂಗಳೂರು–ಮುರುಡೇಶ್ವರ, ಬೆಂಗಳೂರು–ಕೋಝಿಕೋಡ್ ಹಾಗೂ ವಿಜಯಪುರ–ಮಂಗಳೂರು ರೈಲುಗಳನ್ನು ಹಾಸನ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.

ಬೆಂಗಳೂರು–ಕಾರವಾರ ಎಕ್ಸ್‌ಪ್ರೆಸ್ ಅನ್ನು ಸಕಲೇಶಪುರ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.

ಮುರುಡೇಶ್ವರ–ಬೆಂಗಳೂರು ಹಾಗೂ ಮಂಗಳೂರು–ವಿಜಯಪುರ ರೈಲುಗಳನ್ನು ಸುಬ್ರಹ್ಮಣ್ಯ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ.

ಕೋಝಿಕೋಡ್–ಬೆಂಗಳೂರು ರೈಲನ್ನು ಪುತ್ತೂರು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.

ರೈಲುಗಳ ರದ್ದತಿ ಹಾಗೂ ಸಂಚಾರ ಸ್ಥಗಿತದ ಕುರಿತು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಮಾಹಿತಿ ನೀಡುತ್ತಿದ್ದು, ಹಳಿ ದುರಸ್ತಿ ಪೂರ್ಣಗೊಳ್ಳುವವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತವಾಗಿರಲಿದೆ. ಪ್ರಯಾಣಿಕರು ತಮ್ಮ ರೈಲುಗಳ ನವೀಕೃತ ಮಾಹಿತಿಯನ್ನು ಪರಿಶೀಲಿಸಿ ನಂತರವೇ ಪ್ರಯಾಣಿಸಲು ಇಲಾಖೆ ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor