Hassan | ವಿದ್ಯಾನಗರದಲ್ಲಿ ಅಕ್ರಮ ಕಾಂಪೌಂಡ್ ಆರೋಪ : ಯಶ್ ತಾಯಿ ಪುಷ್ಪಾ ನಿವಾಸದ ಬಳಿ ತೆರವು ಕಾರ್ಯಾಚರಣೆ
ಹಾಸನ : ನಗರದ ವಿದ್ಯಾನಗರದಲ್ಲಿ ಇರುವ ನಟ ಯಶ್ ಅವರ ತಾಯಿ ಪುಷ್ಪಾ ಅವರ ನಿವಾಸದ ಬಳಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ತೆರವುಗೊಳಿಸುವ ಕಾರ್ಯಾಚರಣೆ ನಡೆದಿರುವುದು ವರದಿಯಾಗಿದೆ.
ಲಕ್ಷ್ಮ್ಮಮ್ಮ ಎಂಬವರಿಗೆ ಸೇರಿರುವ ಜಾಗದಲ್ಲಿ ಅಕ್ರಮವಾಗಿ ಸುಮಾರು ಒಂದೂವರೆ ಸಾವಿರ ಅಡಿ ವ್ಯಾಪ್ತಿಯಲ್ಲಿ ಕಾಂಪೌಂಡ್ ಹಾಕಲಾಗಿದೆ ಎಂದು ಆರೋಪಿಸಲಾಗಿದ್ದು, ಲಕ್ಷ್ಮಮ್ಮ ಅವರ ಜಿಪಿಎ ಹೋಲ್ಡರ್ ದೇವರಾಜು ಅವರು ನ್ಯಾಯಾಲಯದ ಅನುಮತಿಯ ಮೇರೆಗೆ ಈ ಕಾಂಪೌಂಡ್ ಅನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ದೇವರಾಜು ಅವರು ಮಾಧ್ಯಮದೊಂದಿಗೆ ಮಾತನಾಡಿ, ಪುಷ್ಪಾನಿವಾಸದ ಸುತ್ತಲೂ ನಿರ್ಮಿಸಲಾಗಿದ್ದ ಕಾಂಪೌಂಡ್ ನಮ್ಮ ಮೂಲ ಜಮೀನಿನೊಳಗೆ ಅಕ್ರಮವಾಗಿ ನಿರ್ಮಿಸಲಾಗಿತ್ತು. ಈ ಕುರಿತು ಕಾನೂನು ಹೋರಾಟ ನಡೆಸಿದ್ದು, ನ್ಯಾಯಾಲಯದ ಆದೇಶದಂತೆ ರವಿವಾರ ಕಾಂಪೌಂಡ್ ತೆರವು ಕಾರ್ಯ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬೆಳ್ಳಂಬೆಳಗ್ಗೆ ನಡೆದ ಈ ಕಾರ್ಯಾಚರಣೆಯಿಂದ ವಿದ್ಯಾನಗರ ಪ್ರದೇಶದಲ್ಲಿ ಕೆಲಕಾಲ ಗೊಂದಲ ಉಂಟಾಗಿದ್ದು, ಸ್ಥಳಕ್ಕೆ ಸಾರ್ವಜನಿಕರು ಹಾಗೂ ಇತರರು ಆಗಮಿಸಿದ್ದರು. ಈ ಘಟನೆ ನಗರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಗಮನ ಸೆಳೆಯುತ್ತಿದೆ.