Arsikere | ಹಾರನಹಳ್ಳಿ ಮಸೀದಿ ಉದ್ಘಾಟಿಸಿದ ಕೋಡಿಮಠ ಸ್ವಾಮೀಜಿ
ಅರಸೀಕೆರೆ : ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಮಜ್ಜಿದ್ ಎ ಅಕ್ಸಾ ಉದ್ಘಾಟನೆಯನ್ನು ಕೋಡಿಮಠ ಕ್ಷೇತ್ರದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದ್ದಾರೆ. ಗ್ರಾಮದ ಸರ್ವ ಧರ್ಮದವರು ಮಸೀದಿ ದರ್ಶನವನ್ನು ಮಾಡಿ, ಸಹಭೋಜನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಮಠ ಶ್ರೀ ಕ್ಷೇತ್ರದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಮಸೀದಿ, ಮಂದಿರ, ಚರ್ಚ್ ಎಂಬವು ಕೇವಲ ಧಾರ್ಮಿಕ ಕಟ್ಟಡಗಳಲ್ಲ. ಅವು ಮಾನವೀಯತೆಯನ್ನು ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ಧರ್ಮಗಳು ಬೇರೆಬೇರೆ ಇದ್ದರೂ ನಮ್ಮ ಗುರಿ ಒಂದೇ ಶಾಂತಿ, ಸಹಬಾಳ್ವೆ ಮತ್ತು ಮಾನವ ಕಲ್ಯಾಣ. ಹಾರನಹಳ್ಳಿ ಗ್ರಾಮದಲ್ಲಿ ಮಜ್ಜಿದ್ ಎ ಅಕ್ಸಾ ಉದ್ಘಾಟನೆ ಭಾವೈಕ್ಯತೆಗೆ ಹೊಸ ಸಂದೇಶ ನೀಡಿದೆ. ಎಲ್ಲ ಧರ್ಮದವರು ಪರಸ್ಪರ ಗೌರವದಿಂದ ಬದುಕಿದರೆ ಸಮಾಜ ಇನ್ನಷ್ಟು ಬಲಿಷ್ಠವಾಗುತ್ತದೆ’’ ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಶಾಸಕ ಹಾಗೂ ರಾಜ್ಯ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಸಮಿಉಲ್ಲಾ, ಗ್ರಾಮದ ಹಿರಿಯ ಕರೀಂ ಸಾಬ್ ಮಾತನಾಡಿದರು. ಮಸೀದಿ ಅಧ್ಯಕ್ಷ ಮುಹಮ್ಮದ್ ಅತಾವುಲ್ಲಾ ಕಾರ್ಯದರ್ಶಿ ಮುಬಾರಕ್ ಪಾಶ, ಜಂಟಿ ಕಾರ್ಯದರ್ಶಿ ನವಾಸ್, ಮತ್ತು ಪದಾಧಿಕಾರಿಗಳು, ತಾ ಪಂ ಮಾಜಿ ಅಧ್ಯಕ್ಷ ಶಿವಮೂರ್ತಿ, ತಾ ಪಂ ಮಾಜಿ ಸದಸ್ಯ ಧರ್ಮ ಶೇಖರ್, ಮಾಜಿ ಜಿ ಪಂ ಸದಸ್ಯ ಬಿಳಿ ಚೌಡಯ್ಯ, ಶುಂಟಿ ಉದ್ಯಮಿ ಮುನ್ನಾ ಪಿಜಿಡಿ , ಕಾಂಗ್ರೆಸ್ ಹಿರಿಯ ಮುಖಂಡರಾದ ಅಬ್ದುಲ್ ಹಾದಿ, ಖಡಕಡಿ ಪೀರ್ ಸಾಬ್, ಅಬ್ದುಲ್ ಸಮದ್, ಜಮಾಲುದ್ದೀನ್, ಮುಂತಾದವರು ಇದ್ದರು.