ಹಾಸನ | ಮನೆಯಲ್ಲಿ ಅಡುಗೆ ಮಾಡಿರದ ಕಾರಣಕ್ಕೆ ತಾಯಿಯ ಕೊಲೆ: ಆರೋಪಿ ಪುತ್ರನ ಸೆರೆ
Update: 2025-10-03 15:37 IST
ಕೊಲೆ ಆರೋಪಿ ಸಂತೋಷ್
ಹಾಸನ, ಅ.3: ಮನೆಯಲ್ಲಿ ಅಡುಗೆ ಮಾಡಿರದ ಕಾರಣಕ್ಕೆ ಜಗಳಕ್ಕಿಳಿದ ಮಗ ದೊಣ್ಣೆಯಿಂದ ಹೊಡೆದು ತಾಯಿಯನ್ನು ಕೊಲೆಗೈದ ಆಘಾತಕಾರಿ ಘಟನೆ ಆಲೂರು ತಾಲೂಕಿನ ಕದಾಳು ಚನ್ನಾಪುರ ಗ್ರಾಮದಲ್ಲಿ ನಡೆದಿದೆ.
ಪ್ರೇಮಾ(45) ಕೊಲೆಯಾದವರು. ಅವರ ಪುತ್ರ ಸಂತೋಷ್ (19) ಕೊಲೆ ಆರೋಪಿ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ಸಂತೋಷ್, ಅಡುಗೆ ಮಾಡಿರದ ಕಾರಣಕ್ಕೆ ತಾಯಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ಸಂತೋಷ್ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಪ್ರೇಮಾ ಗಂಭೀರವಾಗಿ ಗಾಯಗೊಂಡಿದ್ದರು. ಕುಟುಂಬಸ್ಥರು ಅವರನ್ನು ತಕ್ಷಣ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಪ್ರೇಮಾ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.