ಹಾಸನ | ಮನೆಯಲ್ಲಿ ನಿಗೂಢ ಸ್ಫೋಟ; ದಂಪತಿಗೆ ಗಂಭೀರ ಗಾಯ
ಹಾಸನ : ಪಟ್ಟಣದ ಹಳೇ ಆಲೂರಿನ ರಾಮಕೃಷ್ಣ ಬಡಾವಣೆಯಲ್ಲಿರುವ ಮನೆಯೊಂದರಲ್ಲಿ ಸೋಮವಾರ ರಾತ್ರಿ ನಿಗೂಢ ಸ್ಫೋಟವೊಂದು ಸಂಭವಿಸಿದೆ.
ಈ ಘಟನೆಯಲ್ಲಿ ದಂಪತಿಗಳಾದ ಸುದರ್ಶನ್ ಆಚಾರ್ (32) ಮತ್ತು ಕಾವ್ಯ (28) ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರ ಒಂದು ವರ್ಷದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮನೆಯ ಮಾಲೀಕರಾದ ಮೋಹನ್ ರಾವ್ ಮತ್ತು ಅವರ ಅಣ್ಣನ ಒಂದು ತಿಂಗಳ ಮಗು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಫೋಟದ ತೀವ್ರತೆಯಿಂದ ಮನೆಯ ಕೆಳಗಿನ ಭಾಗದ ಬಾಗಿಲುಗಳು, ಗಾಜಿನ ಕಿಟಕಿಗಳು ಧ್ವಂಸಗೊಂಡಿದ್ದು, ಒಳಗಿನ ಗಾಜಿನ ವಸ್ತುಗಳ ಚೂರುಗಳು ಮನೆಯಾದ್ಯಂತ ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದ ಶಬ್ದವು ಸುತ್ತಮುತ್ತಲಿನ ಪ್ರದೇಶದಲ್ಲಿ ಭಯ ಮೂಡಿಸಿದ್ದು, ನೆರೆಹೊರೆಯವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಗೊಂಡವರಿಗೆ ಸಹಾಯ ಮಾಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಸ್ಫೋಟದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಗ್ಯಾಸ್ ಸಿಲಿಂಡರ್ ಸೋರಿಕೆ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಇತರೆ ಕಾರಣವಿರಬಹುದೇ ಎಂದು ಪೊಲೀಸರು ಶಂಕಿಸಿದ್ದಾರೆ.
ಆಲೂರು ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫಾರೆನ್ಸಿಕ್ ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಸ್ಫೋಟದ ಮೂಲವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ.
ಗಾಯಗೊಂಡ ದಂಪತಿಗಳನ್ನು ತಕ್ಷಣವೇ ಆಲೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಈಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಗಾಯಗಳು ಗಂಭೀರವಾಗಿಲ್ಲವಾದರೂ, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.
ಆಲೂರು ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.