×
Ad

ಹಾಸನ | ಗಣೇಶ ಮೆರವಣಿಗೆ ವೇಳೆ ರಸ್ತೆ ಅಪಘಾತ; ಲಾರಿ ಚಾಲಕ ಗಂಭೀರ

ಗಾಯಗೊಂಡಿದ್ದ ಚಾಲಕನಿಗೆ ಥಳಿಸಿದ ಆಕ್ರೋಶಿತ ಗ್ರಾಮಸ್ಥರು

Update: 2025-09-13 10:04 IST

ಹಾಸನ: ಸೆ, 13: ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ಗಣಪತಿ ಮೆರವಣಿಗೆ ಮೇಲೆ ಲಾರಿ ನುಗ್ಗಿ 9 ಜನ ಪ್ರಾಣ ಕಳೆದುಕೊಂಡ ಭೀಕರ ರಸ್ತೆ ದುರಂತ ಪ್ರಕರಣದಲ್ಲಿ ಲಾರಿ ಚಾಲಕನೂ ಗಂಭೀರ ಗಾಯಗೊಂಡಿರುವುದು ಬೆಳಕಿಗೆ ಬಂದಿದೆ. ದುರಂತಕ್ಕೆ ಬೈಕ್​ ಸವಾರ ಬೇಕಾಬಿಟ್ಟಿಯಾಗಿ ಅಡ್ಡ ಬಂದಿದ್ದು ಹಾಗೂ ಟ್ರಕ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಚಾಲಕನನ್ನು ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಭುವನೇಶ ಎಂದು ಗುರುತಿಸಲಾಗಿದೆ. ಲಾರಿಯು ಮಹಾರಾಷ್ಟ್ರ ನೋಂದಣಿ ಹೊಂದಿದ್ದು, ಚಾಲನೆ ಮಾಡುವ ವೇಳೆ ಭುವನೇಶ್ ಕುಡಿದಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಈ ವಿಚಾರವನ್ನು ಪೊಲೀಸರು ಇನ್ನಷ್ಟೇ ಖಚಿತಪಡಿಸಬೇಕಿದೆ. ಘಟನೆಯಿಂದ ಸಿಟ್ಟಿಗೆದ್ದ ಸ್ಥಳೀಯರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೀಗ ಆತ ತೀವ್ರ ಗಾಯಗೊಂಡಿರುವುದು ಇದೀಗ ಸ್ಪಷ್ಟವಾಗಿದೆ ಎಂದು ತಿಳಿದು ಬಂದಿದೆ.

ಗಾಯಗೊಂಡ ಭುವನೇಶನನ್ನು ಕೂಡಾ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಾಲಕನನ್ನು ಪೊಲೀಸರು ಆಸ್ಪತ್ರೆಯಲ್ಲಿ ವಿಚಾರಣೆ ನಡೆಸಿದ್ದು, ವಶಕ್ಕೆ ಪಡೆದಿಲ್ಲ ಎಂದು ತಿಳಿದು ಬಂದಿದೆ.

ಈ ನಡುವೆ ಮೃತರ ಕುಟುಂಬಗಳು ದುಃಖದ ಮಡುವಿನಲ್ಲಿದ್ದು, ಚಾಲಕನ ನಿರ್ಲಕ್ಷ್ಯಕ್ಕೆ ಗ್ರಾಮದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News