×
Ad

ಹಾಸನ ದುರಂತ | ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತ್ಯು; ಮೃತರ ಸಂಖ್ಯೆ 10ಕ್ಕೆ ಏರಿಕೆ

ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಎಚ್.ಡಿ.ದೇವೇಗೌಡ, ನಿಖಿಲ್‌

Update: 2025-09-13 19:04 IST

ಹಾಸನ : ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಶುಕ್ರವಾರ ಗಣೇಶ ಮೆರವಣಿಗೆ ವೇಳೆ ಟ್ರಕ್‌ ಹರಿದು ಸಂಭವಿಸಿದ ದುರಂತದಲ್ಲಿ 9 ಮಂದಿ ಮೃತಪಟಿದ್ದರು. ಇದೀಗ ಮೃತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.

ಟ್ರಕ್ ಗುದ್ದಿದ ರಭಸಕ್ಕೆ ಗಂಭೀರವಾಗಿ ಗಾಯಗೊಂಡು ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಯ್ಯನ ಕೊಪ್ಪಲು ಗ್ರಾಮದ ಚಂದನ್ (26) ಇಂದು(ಸೆ.13) ಮೃತಪಟ್ಟಿದ್ದಾರೆ.

ಗಾಯಾಳುಗಳು ಇನ್ನೂ ಹಲವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿಯ ಕುರಿತು ವೈದ್ಯರು ನಿಗಾ ವಹಿಸಿದ್ದಾರೆ.

ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಎಚ್.ಡಿ.ದೇವೇಗೌಡ :

ಹಾಸನದ ಟ್ರಕ್ ದುರಂತದ ಹಿನ್ನೆಲೆಯಲ್ಲಿ ಹಾಸನ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಮೃತರ ಕುಟುಂಬಸ್ಥರಿಗೆ ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು. ಅಲ್ಲದೆ, ಜೆಡಿಎಸ್ ಪಕ್ಷದಿಂದಲೂ 1 ಲಕ್ಷ ರೂ. ಪರಿಹಾರವನ್ನು ಘೋಷಿಸಿದರು.

ನಿಖಿಲ್ ಕುಮಾರಸ್ವಾಮಿ ಅವರು, “ಮೃತರ ಕುಟುಂಬದ ನೋವನ್ನು ಯಾರೂ ನಿವಾರಿಸಲು ಸಾಧ್ಯವಿಲ್ಲ, ದೇವರೇ ಅವರಿಗೆ ಶಕ್ತಿ ನೀಡಲಿ” ಮುಖ್ಯಮಂತ್ರಿ ಘೋಷಿಸಿದ 5 ಲಕ್ಷ ರೂ. ಪರಿಹಾರವನ್ನು ಸ್ವಾಗತಿಸಿದ ಅವರು, ಇದು ಸಾಕಾಗುವುದಿಲ್ಲ, ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.

ವಿಪಕ್ಷ ನಾಯಕ ಆರ್.ಅಶೋಕ್ ಬೈಕ್ ಸವಾರ ಬಂಟರಹಳ್ಳಿಯ ಮೃತ ಪ್ರಭಾಕರ್ ಹಾಗೂ ಕಬ್ಬಿನಹಳ್ಳಿಯ ಈಶ್ವರ್ ಅವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

"ಇಂತಹ ಮೆರವಣಿಗೆ ವೇಳೆ ಇನ್ನೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಬೇಕಿತ್ತು. ಕೇಂದ್ರ-ರಾಜ್ಯ ಸರಕಾರಗಳು ಕೂಡಲೇ ಸಂದಿಸಿವೆ. ಮೃತರಲ್ಲಿ ಯುವಕರೇ ಹೆಚ್ಚಿದ್ದಾರೆ. ಅವರ ಕುಟುಂಬ ಬಡತನದಲ್ಲಿವೆ, ನಾನು ಪರಿಹಾರ ವಿಚಾರದಲ್ಲಿ ರಾಜಕೀಯ ಮಾಡಲ್ಲ. ನಾನೂ ರಾಜ್ಯ ಸರಕಾರದ ಜೊತೆ ಮಾತನಾಡುತ್ತೇನೆ, ಮೃತರ ಕುಟುಂಬಗಳಿಗೆ ಇನ್ನೂ ಹೆಚ್ಚಿನ ಪರಿಹಾರ ನೀಡಿ ಎಂದು ಒತ್ತಾಯಿಸುತ್ತೇನೆ"

-ಆರ್.ಅಶೋಕ್, ವಿಪಕ್ಷ ನಾಯಕ

ಸರ್ವಧರ್ಮೀಯರಿಂದ ರಕ್ತದಾನ :

ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ 7ಕ್ಕೂ ಹೆಚ್ಚು ಜನ ಮುಸ್ಲಿಮ್ ಯುವಕರು ಸೇರಿದಂತೆ ವಿವಿಧ ಧರ್ಮೀಯರು ರಕ್ತದಾನ ಮಾಡಿದರು. ಅಗತ್ಯವಿದ್ದರೆ ಮತ್ತಷ್ಟು ಜನರು ರಕ್ತ ನೀಡುವುದಾಗಿ ರಕ್ತದಾನಿಗಳಾದ ಶಫಿವುಲ್ಲಾ, ಅರ್ಷದ್ ಮತ್ತು ನಯಾಝ್ ತಿಳಿಸಿದರು. ಸರಕಾರ ಮೃತರಿಗೆ ಮತ್ತು ಗಾಯಾಳುಗಳಿಗೆ ಅಗತ್ಯ ಸಹಕಾರ ಮತ್ತು ಆರ್ಥಿಕವಾಗಿ ಸಹಾಯ ನೀಡಬೇಕು ಎಂದು ಅವರು ಒತ್ತಾಯಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News