ಹಾಸನ: ಪಾದಯಾತ್ರಿಕರ ಮೇಲೆ ಖಾಸಗಿ ಬಸ್ ಹರಿದು ಇಬ್ಬರು ಮೃತ್ಯು
Update: 2025-02-23 14:00 IST
PC: x.com/tv9kannada
ಹಾಸನ:ಫೆ, 23: ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತಿದ್ದವರ ಮೇಲೆ ಖಾಸಗಿ ಬಸ್ ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹಾಸನ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ಸಂಭವಿಸಿದೆ.
ಮೃತರನ್ನು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಆನಗೋಳ ಗ್ರಾಮದ ಸುರೇಶ್ (60) ಮತ್ತು ಕುಮಾರ್ (55) ಎಂದು ಗುರುತಿಸಲಾಗಿದೆ. ಹಾಸನ ಮಾರ್ಗವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಸಾಗುತ್ತಿರುವಾಗ ಖಾಸಗಿ ಬಸ್ ಅಪಘಾತಕ್ಕೀಡಾಗಿ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು. ಮತ್ತೊಬ್ಬ ಪಾದಯಾತ್ರಿಕ ದಿನೇಶ್ ಗಂಭೀರವಾಗಿ ಗಾಯಗೊಂಡಿದ್ದು, ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.