ನೀಟ್ ಫಲಿತಾಂಶದಲ್ಲಿ ಅಕ್ರಮ: ವಿದ್ಯಾರ್ಥಿನಿಯ ಆರೋಪ

‘ಅಧಿಕೃತ ಒಎಂಆರ್ ಉತ್ತರ ಪತ್ರಿಕೆ ನನ್ನದಲ್ಲ’

Update: 2026-07-26 23:30 IST

ಹಾವೇರಿ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ನಡುವೆಯೇ ಹಾವೇರಿ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಹಾನಗಲ್ ತಾಲೂಕಿನ ವಿದ್ಯಾರ್ಥಿನಿ ಬಿಂದುಶ್ರೀ ಅವರು, ತಮ್ಮ ಅಧಿಕೃತ ಒಎಂಆರ್ (OMR) ಉತ್ತರ ಪತ್ರಿಕೆ ತಾವು ಪರೀಕ್ಷೆಯಲ್ಲಿ ಭರ್ತಿ ಮಾಡಿದ್ದದ್ದಲ್ಲ ಎಂದು ಆರೋಪಿಸಿದ್ದಾರೆ. ಒಎಂಆರ್‌ನಲ್ಲಿ ಬೆರಳಚ್ಚು ಎರಡು ಬಾರಿ ಓವರ್‌ಲ್ಯಾಪ್ ಆಗಿರುವುದು ಸೇರಿದಂತೆ ಹಲವು ಅನುಮಾನಾಸ್ಪದ ಅಂಶಗಳಿವೆ ಎಂದು ಅವರು ತಿಳಿಸಿದ್ದಾರೆ.

ಇನ್ನೂ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಿದ ಸಮಯ ಮಧ್ಯಾಹ್ನ 1:56 ಹಾಗೂ ನಿರ್ಗಮನ ಸಮಯ 1:57 ಎಂದು ಒಎಂಆರ್‌ನಲ್ಲಿ ದಾಖಲಾಗಿದ್ದು, ಕೇವಲ ಒಂದು ನಿಮಿಷದಲ್ಲಿ 41 ಪ್ರಶ್ನೆಗಳಿಗೆ ಉತ್ತರಿಸಿದಂತೆ ದಾಖಲಾಗಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ ಒಎಂಆರ್‌ನಲ್ಲಿ ತಮ್ಮ ಅಂಕಗಳು -14 ಎಂದು ತೋರಿದರೆ, ಅಂತಿಮ ಫಲಿತಾಂಶದಲ್ಲಿ -11 ಎಂದು ನಮೂದಿಸಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಒಟ್ಟು ಮೂರು ಬಾರಿ ನೀಟ್ ಪರೀಕ್ಷೆ ಬರೆದಿದ್ದು, ಪ್ರತಿಬಾರಿಯೂ ಫಲಿತಾಂಶದ ಬಳಿಕ ಒಂದಲ್ಲ ಒಂದು ರೀತಿಯ ಗೊಂದಲ ಉಂಟಾಗುತ್ತಿದೆ. ಈ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಲಿಖಿತ ದೂರು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.

ಜೂ.21ರಂದು ಹಾವೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನೀಟ್ ಪರೀಕ್ಷೆ ಬರೆದಿದ್ದೇನೆ. ಎರಡು ವರ್ಷ ಕಷ್ಟಪಟ್ಟು ಓದಿದ್ದೇನೆ. ನನಗೆ ಬರಬೇಕಾದ ನಿಜವಾದ ಅಂಕಗಳನ್ನು ನೀಡಿ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಅಳುತ್ತಿದ್ದೇನೆ. ನಮ್ಮ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News