×
Ad

ರಾಜ್ಯ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ: ಬಸವರಾಜ ಬೊಮ್ಮಾಯಿ

Update: 2025-08-02 15:56 IST

ಹಾವೇರಿ: ರಾಜ್ಯದಲ್ಲಿ ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತಿದೆ. ರಾಜ್ಯ ಸರ್ಕಾರದ ದುರಾಡಳಿತ ನೋಡಿದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಹಾವೇರಿಯ ಕಾಗಿನೆಲೆ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆ.14ರಂದು ಹಾವೇರಿಯಲ್ಲಿ ನಡೆಯಲಿರುವ ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್ ಸಮಾರಂಭದ ಕಾರ್ಯಕ್ರಮದ ಪೂರ್ವ ಸಿದ್ಧತೆಯ ತಯಾರಿ ಹಾಗೂ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರೊಡನೆ ಸಭೆಯನ್ನು ನಡೆಸಿ ಮಾತನಾಡುತ್ತಿದ್ದರು.

. ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ ಮಿತಿಮೀರಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಪರವಾಗಿ ಹೋರಾಟ ಮಾಡಿದರೆ ಜನರು ನಮ್ಮ ಜೊತೆಗೆ ನಿಲ್ಲುತ್ತಾರೆ. ಜನರು ಬಹಳ ಎಚ್ಚರಿಕೆ ಹೊಂದಿದ್ದಾರೆ. ಕೇವಲ ಆಡಳಿತ ಪಕ್ಷಕ್ಕಷ್ಟೇ ಅಲ್ಲ. ವಿರೋಧ ಪಕ್ಷವನ್ನು ಪ್ರಶ್ನಿಸುತ್ತಾರೆ. ನಮ್ಮನ್ನೂ ಕೂಡ ಜನರು ಬಹಳ ಎಚ್ಚರಿಕೆಯಿಂದ ನೋಡುತ್ತಾರೆ. ಹೀಗಾಗಿ ನಾವು ಸಂಘಟಿತರಾಗಿ ಕೆಲಸ ಮಾಡಬೇಕು ಎಂದರು.

ರಾಜ್ಯದಲ್ಲಿ ಈ ಸರ್ಕಾರ ಜನರ ಪಾಲಿಗೆ ಸತ್ತಿದೆ. ರೈತರ ವಿಚಾರದಲ್ಲಿ ಸಿಎಂ ಅವರಿಗೆ ತಿರಸ್ಕಾರ ಮತ್ತು ತಾತ್ಸಾರ ಇದೆ. ರೈತರಿಗೆ ಬೀಜ ಗೊಬ್ಬರ ಕೊಡುವಲ್ಲಿ ಸಂಪೂರ್ಣ ವಿಫಲ ಆಗಿದ್ದಾರೆ. ಎರಡು ವರ್ಷದಿಂದ ಬೆಳೆನಾಶವಾಗಿದೆ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ನಮ್ಮ ಕಾಲದಲ್ಲಿ ಕೇಂದ್ರ ಸರಕಾರ ನೀಡುವ ಹಣದ ಎರಡು ಪಟ್ಟು ಪರಿಹಾರ ನೀಡಿದ್ದೆವು. ಸುಮಾರು ಏಳು ಸಾವಿರ ಕೋಟಿ ಪರಿಹಾರ ನೀಡಿದ್ದೇವು ಎಂದು ಹೇಳಿದರು.

ರೈತರಿಗೆ ಕಿಸಾನ್ ಸಮ್ಮಾನ್

ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ 20 ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಸುಮಾರು 20 ಸಾವಿರ ಕೋಟಿ ರೂ. 7 ಕೋಟಿ ರೈತರಿಗೆ ಹಣ ಬಿಡುಗಡೆಯಾಗಿದೆ. ಹಾವೇರಿ ಜಿಲ್ಲೆಯ 1. 56 ಲಕ್ಷ ರೈತರಿಗೆ 30.07 ಕೋಟಿ ರೂ. ಹಾಗೂ ಗದಗ ಜಿಲ್ಲೆಯ 1.07 ಲಕ್ಷ ರೈತರಿಗೆ 23 ಕೋಟಿ ರೂ. ಹಣ ಬಿಡುಗಡೆಯಾಗಿದೆ. ನಿರಂತರವಾಗಿ ಹಣ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಮತ್ತು ಕಿಸಾನ್ ಸಮ್ಮಾನ್ ಯೋಜನೆಯಿಂದ ಕರ್ನಾಟಕದಲ್ಲಿ ಬಹಳ ದೊಡ್ಡ ಪ್ರಮಾಣದ ಅನುಕೂಲವಾಗಿದೆ. ನಾವು ರೈತರಿಗೆ ಸಹಾಯ ಮಾಡಿದ್ದರಿಂದ ದೊಡ್ಡ ಮಟ್ಟದ ಪ್ರಯೋಜನ ಆಗಿದೆ. ನಮ್ಮ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಾಧನೆಯನ್ನು ಇಟ್ಟುಕೊಂಡು ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ಕೊಡಬೇಕು. ಯಾರಾದರೂ ಕೇಂದ್ರದ ವಿರುದ್ಧ ಮಾತನಾಡಿದರೆ ಅವರಿಗೆ ತಕ್ಕ ಉತ್ತರ ಕೊಡಬೇಕು ಎಂದರು. ಈಗಿನ ಕಾಂಗ್ರೆಸ್ ಆಡಳಿತ ನೋಡಿದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಮ್ಮ ಕೆಲಸ ನಾವು ಮಾಡಿದರೆ ಖಂಡಿತವಾಗಿ ಯಶಸ್ಸು ಸಿಗಲಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಬಿಜೆಪಿ ಹಾವೇರಿ ಶಹರ ಮಂಡಲದ ಅಧ್ಯಕ್ಷ ಗಿರೀಶ ತುಪ್ಪದ, ಪಕ್ಷದ ಮುಖಂಡರಾದ ಮಂಜುನಾಥ ಓಲೇಕಾರ, ಸಂತೋಷ ಪಾಟೀಲ್, ಲಿಂಗರಾಜ ಚಪ್ಪರದಹಳ್ಳಿ, ಭಾರತಿ ಜಂಬಗಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News