ಸಾಂದರ್ಭಿಕ ಚಿತ್ರ | Photo Credit : magnific

ನಿದ್ರೆ ಮಾಡಲೆಂದು ಹಾಸಿಗೆ ಮೇಲೆ ಮಲಗಿದರೂ ನಿದ್ರೆ ಬಾರದೆ ಬೆಳಗಾಗಲು ಎಷ್ಟು ಸಮಯ ಬಾಕಿ ಇದೆ ಎಂದು ಲೆಕ್ಕಾಚಾರ ಮಾಡುತ್ತೀರಾ? ಇಂತಹ ನಿದ್ರೆಯ ಆತಂಕದ ಬಗ್ಗೆ ವಿವರಿಸಿದ್ದಾರೆ ಡಾ ಕುಣಾಲ್ ಸೂದ್.

ಎಂಟುಗಂಟೆಗಳ ಪೂರ್ಣ ನಿದ್ರೆ ಮಾಡುವ ಭರವಸೆ ಜೊತೆಗೆ ಮಲಗುತ್ತೀರಿ. ಆದರೆ ಹಾಸಿಗೆಯಲ್ಲಿ ಹೊರಳಾಡುತ್ತಾ ಮೇಲ್ಛಾವಣಿ ನೋಡುತ್ತಾ ಎಚ್ಚರವಾಗಿಯೇ ಉಳಿಯುವಿರಿ. ನಿದ್ರೆ ಬರದೆ ಇದ್ದಾಗ ಫೋನ್ ನೋಡಿ ಬೆಳಗಾಗಲು ಎಷ್ಟು ಗಂಟೆ ಬಾಕಿ ಇದೆ ಎಂದು ಪರೀಕ್ಷಿಸುತ್ತೇವೆ. ನಿದ್ರೆ ಮಾಡಿದರೂ ಮೆದುಳು ಏಳಲು ಇನ್ನೆಷ್ಟು ಸಮಯವಿದೆ ಎಂದು ಲೆಕ್ಕಾಚಾರ ಹಾಕಲು ಪ್ರಾರಂಭಿಸುತ್ತದೆ. ಆದರೆ, ಸಂಖ್ಯೆಯ ಮೇಲೆ ಗಮನ ಕೊಟ್ಟಷ್ಟೂ ನಿದ್ರೆ ಕಡಿಮೆ ಬರುತ್ತದೆ.

ಅರಿವಳಿಕೆ ತಜ್ಞ ಮತ್ತು ಇಂಟರ್ವೆನ್ಸನಲ್ ಪೈನ್ ಮೆಡಿಸಿನ್ ತಜ್ಞರಾದ ಡಾ ಕುಣಾಲ್ ಸೂದ್ ಅವರು ಸಮಯಕ್ಕೆ ಸರಿಯಾಗಿ ಮಲಗಿದರೂ ನಿದ್ರೆ ಬಾರದೆ ಇರಲು ಕಾರಣವೇನು ಎಂದು ವಿವರಿಸಿದ್ದಾರೆ. ಸೆಪ್ಟೆಂಬರ್ 14ರಂದು ಇನ್ಸ್ಟಾಗ್ರಾಂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಜನರ ನಿದ್ರೆಗೆ ಸಂಬಂಧಿಸಿದ ಆತಂಕಕ್ಕೆ ಕಾರಣವೇನು ಮತ್ತು ಪರಿಹಾರವೇನು ಎಂಬುದನ್ನು ವಿವರಿಸಿದ್ದಾರೆ.

Full View

ನಿದ್ರೆ ಏಕೆ ಬರುವುದಿಲ್ಲ?

ಸಾಮಾನ್ಯವಾಗಿ ವಯಸ್ಕರಿಗೆ ಶಿಫಾರಸು ಮಾಡಿರುವ 8 ಗಂಟೆಗಳಷ್ಟು ನಿದ್ರೆ ಮಾಡುವುದು ಸರಳವೆಂದು ತೋರುತ್ತದೆ. ಹೀಗೆ ಮಲಗಲು ಸಿದ್ಧರಾಗಿ ಹಾಸಿಗೆಗೆ ಹೋದಾಗ ಹಿಮ್ಮುಖವಾಗಿ ಲೆಕ್ಕ ಹಾಕಲು ಪ್ರಾರಂಭಿಸುತ್ತೀರಿ. ನಿದ್ರೆ ಬರುತ್ತದೆ ಎಂದುಕೊಳ್ಳುತ್ತಲೇ ಗಡಿಯಾರ ನೋಡುತ್ತೀರಿ. ಅಮೂಲ್ಯವಾದ ಎಂಟು ಗಂಟೆಗಳು ಆರು, ಐದು ಮತ್ತು ಅದಕ್ಕಿಂತ ಕಡಿಮೆಗೆ ಇಳಿಯುತ್ತವೆ. ಆದರೆ ನಿದ್ರೆ ಮಾತ್ರ ಬರುವುದಿಲ್ಲ.

“ಬೆಳಗಾಗಲು ಎಷ್ಟು ಸಮಯವಿದೆ ಎಂದು ಲೆಕ್ಕ ಮಾಡುತ್ತಾ ಇನ್ನೂ ಎಚ್ಚರವಾಗಿದ್ದಾಗ ಆ ಸಂಖ್ಯೆ ಕಡಿಮೆಯಾಗುವುದನ್ನು ಕಂಡಲ್ಲಿ ಇಂತಹ ಮಾನಸಿಕ ಲೆಕ್ಕಾಚಾರವೇ ನಿದ್ರೆ ಬರುವುದನ್ನು ಕಠಿಣಗೊಳಿಸಬಹುದು. ಸದ್ಯ ನಾನು ಮಲಗಿದರೆ ಆರು ಗಂಟೆಗಳ ಕಾಲ ನಿದ್ರೆ ಬರುತ್ತದೆ ಎನ್ನುವ ಯೋಚನೆಯೇ ನಿದ್ರೆ ಮಾಡಲು ಒತ್ತಡ ಹೇರುವುದು ಆಗಿರುತ್ತದೆ. ಇದು ನಿಮ್ಮನ್ನು ಹೆಚ್ಚು ಜಾಗರೂಕ ಮತ್ತು ಹತಾಶರನ್ನಾಗಿಸಬಹುದು. ನಿಮಗೆ ಬೇಕಾಗಿರುವುದಕ್ಕೆ ತದ್ವಿರುದ್ಧ ಸ್ಥಿತಿ ಇದಾಗಿರುತ್ತದೆ” ಎನ್ನುತ್ತಾರೆ ಡಾ ಕುಣಾಲ್.

ನಿದ್ರೆಯ ಆತಂಕ ತಡೆಯುವುದು ಹೇಗೆ?

ಬಹಳ ಕಡಿಮೆ ನಿದ್ರೆ ಸಿಗುತ್ತಿದೆ ಎನ್ನುವ ಬಗ್ಗೆಯೇ ಹೆಚ್ಚು ಗಮನಹರಿಸಿದರೆ ಮೆದುಳು ವಿಶ್ರಾಂತಿ ಪಡೆಯುವುದು ಕಷ್ಟವಾಗುತ್ತದೆ. ಆರೋಗ್ಯಕರ ನಿದ್ರೆಯ ಅಭ್ಯಾಸ ಬಳಸಿಕೊಳ್ಳುವುದರಿಂದ ಸುಲಭವಾಗಿ ನಿದ್ರೆ ಮಾಡಬಹುದು. ಅದರಿಂದ ಪ್ರಯೋಜನವಾಗದೆ ಇದ್ದರೆ ನಿದ್ರಾಹೀನತೆಗೆ ಚಿಕಿತ್ಸೆ ಪಡೆಯುವುದು ಮುಂದಿನ ಹಂತವಾಗಬಹುದು ಎಂದು ಎಚ್ಚರಿಸುತ್ತಾರೆ ವೈದ್ಯರು.

ಹಾಗಿದ್ದರೆ ವೈದ್ಯರ ಸಲಹೆ ಏನು? “ಮೊದಲನೆಯ ಹಂತವೆಂದರೆ ಗಡಿಯಾರ ನೋಡುವುದು ನಿಲ್ಲಿಸಬೇಕು. ಪ್ರತಿದಿನ ಒಂದೇ ಸಮಯಕ್ಕೆ ಏಳುವ ಅಭ್ಯಾಸವಿರಲಿ. ದೇಹದ ಜೈವಿಕ ಗಡಿಯಾರ ಸರಿಹೊಂದಿಸಲು ಬೆಳಿಗ್ಗೆ ಹೊರಾಂಗಣದ ಬೆಳಕು ಪಡೆಯಿರಿ. ಮಲಗುವ ಎಂಟು ಗಂಟೆಗಳ ಮೊದಲು ಕೆಫೀನ್ ಸೇವನೆ ಬೇಡ. ನಿಜವಾಗಿಯೂ ನಿದ್ರೆ ಬಂದಾಗ ಹಾಸಿಗೆಗೆ ಹೋಗಬೇಕೇ ವಿನಾ ಗಡಿಯಾರದ ಗಂಟೆ ನೋಡಿಯಲ್ಲ” ಎನ್ನುತ್ತಾರೆ ವೈದ್ಯರು.

ವೈದ್ಯರ ಪ್ರಕಾರ ನಿದ್ರೆ ಬಾರದೆ ಎಚ್ಚರವಾಗಿ ಮಲಗಿದ್ದು ಹತಾಶರಾಗುತ್ತಿದ್ದರೆ ಹಾಸಿಗೆಯಿಂದ ಎದ್ದು ಮಂದ ಬೆಳಕಿನಲ್ಲಿ ಶಾಂತವಾದ ಚಟುವಟಿಕೆಯಲ್ಲಿ ತೊಡಗಬೇಕು. ಮತ್ತೆ ನಿದ್ರೆ ಬರುವಾಗ ಮರಳಿ ಬಂದು ನಿದ್ರಿಸಬೇಕು. ನಿದ್ರೆಯ ಸಮಸ್ಯೆ ಪದೇಪದೆ ಸಂಭವಿಸುತ್ತಿದ್ದಲ್ಲಿ, ನಿದ್ರಾಹೀನತೆಗೆ ಸಿಬಿಟಿ-1 (cognitive behavioural therapy) ಅನ್ನು ಪ್ರಥಮ ಹಂತದ ಚಿಕಿತ್ಸೆಯಾಗಿ ಪರಿಗಣಿಸಲಾಗುತ್ತದೆ. ಇದು ನಿಮ್ಮನ್ನು ಎಚ್ಚರವಾಗಿರಿಸುವ ಅಭ್ಯಾಸದ ಮಾದರಿ ಬದಲಿಸಲು ಸಹಕರಿಸುತ್ತದೆ.

ಕೃಪೆ: hindustantimes.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor