ಸಾಂದರ್ಭಿಕ ಚಿತ್ರ | Photo Credit : magnific

ನಿಮ್ಮ ಚರ್ಮ ನಿಮಗೇನು ಹೇಳುತ್ತಿದೆ?; ಮೊಡವೆ, ಒಣಚರ್ಮದ ಹಿಂದಿರುವ ರಹಸ್ಯ ತಿಳಿಯಿರಿ!

ಮೆನೋಪಾಸ್ ತರಬೇತುದಾರರು ಮತ್ತು ಮೆನೋವೇದದ ಸಂಸ್ಥಾಪಕಿಯಾಗಿರುವ ತಮನ್ನಾ ಸಿಂಗ್ ಹೇಳುವ ಪ್ರಕಾರ ಚರ್ಮವು ನಮ್ಮ ಜೀವನಶೈಲಿ ಮತ್ತು ಒಟ್ಟು ಯೋಗಕ್ಷೇಮದ ಬಗ್ಗೆ ವಿವರ ನೀಡುತ್ತದೆ.

ನಮ್ಮ ಚರ್ಮವು ನಮ್ಮ ದೇಹದ ಬಗ್ಗೆ ನಮಗೆ ತಿಳಿಸುವ ಪ್ರಾಮಾಣಿಕ ಸಂದೇಶವಾಹಕವಾಗಿರುತ್ತದೆ. ಚರ್ಮ ನಮಗೆ ಒತ್ತಡ ಮತ್ತು ನಿದ್ರೆಯಿಂದ ತೊಡಗಿ ಹಾರ್ಮೋನ್ಗಳ ಬದಲಾವಣೆಗಳು ಮತ್ತು ದೈನಂದಿನ ಅಭ್ಯಾಸಗಳವರೆಗೆ ಜೀವನದ ಅನೇಕ ಅಂಶಗಳನ್ನು ಪ್ರತಿಬಿಂಬಿಸುತ್ತವೆ. ಪ್ರಮಾಣೀಕೃತ ಮೆನೋಪಾಸ್ ತರಬೇತುದಾರರು ಮತ್ತು ಮೆನೋವೇದದ ಸಂಸ್ಥಾಪಕಿಯಾಗಿರುವ ತಮನ್ನಾ ಸಿಂಗ್ ಹೇಳುವ ಪ್ರಕಾರ ಚರ್ಮವು ನಮ್ಮ ಜೀವನಶೈಲಿ ಮತ್ತು ಒಟ್ಟು ಯೋಗಕ್ಷೇಮದ ಬಗ್ಗೆ ವಿವರ ನೀಡುತ್ತದೆ.

ಈಸ್ಟ್ರೋಜೆನ್ ಕಾಲಜನ್ ಉತ್ಪಾದನೆ ಮಾಡುತ್ತದೆ ಮತ್ತು ಚರ್ಮದ ಹೈಡ್ರೇಶನ್ ಗೆ ಬೆಂಬಲ ನೀಡುತ್ತದೆ. ಪೆರಿಮೆನೋಪಾಸ್ ಸಮಯದಲ್ಲಿ ಈಸ್ಟ್ರೋಜೆನ್ ಕ್ಷೀಣಿಸಿದಂತೆ ಚರ್ಮವು ಒಣಗಬಹುದು, ತೆಳ್ಳಗಾಗಬಹುದು ಮತ್ತು ಎಲಾಸ್ಟಿಕ್ ಗುಣ ಕಡಿಮೆಯಾಗಬಹುದು, ಕೆಲವು ತಿಂಗಳುಗಳ ಕಡಿಮೆ ಅವಧಿಯಲ್ಲಿ ಈ ಬದಲಾವಣೆ ಕಂಡುಬರಬಹುದು. ಹಠಾತ್ ಆಗಿ ನಿಮ್ಮ ಚರ್ಮ ಹೆಚ್ಚು ದುರ್ಬಲವಾಗಿ ಕಂಡುಬಂದಲ್ಲಿ ಅಥವಾ ಕಡಿಮೆ ಎಲಾಸ್ಟಿಕ್ ಆಗಿ ಕಾಣಬಹುದು. ನಿಮ್ಮ ಚರ್ಮದಲ್ಲಿ ಹಠಾತ್ತನೆ ಇಂತಹ ಬದಲಾವಣೆಗಳು ಆಗುವುದು ಕೇವಲ ಆಕಸ್ಮಿಕ ಅಥವಾ ಕೇವಲ ಹೊರಗಿನ ಸೌಂದರ್ಯಕ್ಕೆ ಸಂಬಂಧಿಸಿದ ವಿಷಯವಲ್ಲ.

ಹಾರ್ಮೋನ್ಗಳ ಬದಲಾವಣೆ:

30-40 ವರ್ಷ ವಯಸ್ಸಿನ ಮಹಿಳೆಯರಲ್ಲಿ ಗಲ್ಲ ಮತ್ತು ದವಡೆಯ ಭಾಗದಲ್ಲಿ ಮೊಡವೆಗಳು ಬಂದರೆ, ಅದಕ್ಕೆ ಡಯಟ್ ಅಥವಾ ಜಿಡ್ಡು ಆಹಾರ ಮಾತ್ರ ಕಾರಣವಲ್ಲ. ದೇಹದ ಒಳಗಿನ ಹಾರ್ಮೋನ್ ಬದಲಾವಣೆಗಳು ಮುಖ್ಯ ಕಾರಣ. ತಮನ್ನಾ ಅವರು ವಿವರಿಸಿರುವ ಪ್ರಕಾರ, “ಈ ವಯಸ್ಸಿನಲ್ಲಿ ‘ಆಂಡ್ರೋಜೆನ್ಸ್’ ಎಂಬ ಹಾರ್ಮೋನುಗಳು ದೇಹದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಭಾವ ಬೀರಲು ಪ್ರಾರಂಭಿಸುತ್ತವೆ. ಮೊಡವೆಗಳು ಕೇವಲ ವಯಸ್ಸಿಗೆ ಮಾತ್ರ ಬರುತ್ತವೆ ಎನ್ನುವ ಸಾಮಾನ್ಯ ನಂಬಿಕೆ ಇರುವ ಕಾರಣದಿಂದ ಹದಿಹರೆಯದ ವಯಸ್ಸು ಮುಗಿದು ಎಷ್ಟೋ ವರ್ಷಗಳ ಮೇಲೂ ಈ ರೀತಿ ಮೊಡವೆಗಳು ಬರುವುದು ಮಹಿಳೆಯರಲ್ಲಿ ಆಶ್ಚರ್ಯ ಮತ್ತು ಆತಂಕವನ್ನು ಉಂಟು ಮಾಡುತ್ತದೆ.”

ನಿದ್ರೆಯೇ ಅತ್ಯುತ್ತಮ ಚಿಕಿತ್ಸೆ:

ತಮನ್ನಾ ಪ್ರಕಾರ, “ನಿಮ್ಮ ದೇಹಕ್ಕೆ ವಿಶ್ರಾಂತಿ ಸಿಗದೆ ಇದ್ದರೆ ಅಥವಾ ನೀವು ಮಾನಸಿಕ ಒತ್ತಡದಲ್ಲಿದ್ದರೆ, ದೇಹದ ಒಳಗಿನ ಆಯಾಸವು ಮೊದಲು ನಿಮ್ಮ ಮುಖದ ಚರ್ಮದ ಮೂಲಕವೇ ಹೊರ ಜಗತ್ತಿಗೆ ತಿಳಿಯುತ್ತದೆ. ನಿದ್ರೆಯೇ ಚರ್ಮದ ಅತ್ಯುತ್ತಮ ಚಿಕಿತ್ಸೆ.”

ಚರ್ಮವು ಕಾಂತಿ ಕಳೆದುಕೊಂಡಂತೆ ಕಾಣಲು ಕಡಿಮೆ ನಿದ್ರೆ ಮತ್ತು ಅತ್ಯಧಿಕ ಒತ್ತಡ ನೇರ ಕಾರಣಗಳಾಗಿವೆ. ಗಾಢವಾಗಿ ನಿದ್ರಿಸುವಾಗ ದೇಹವು ಚರ್ಮಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ಜೀವಕೋಶಗಳನ್ನು ರಿಪೇರಿ ಮಾಡುತ್ತದೆ. ಒತ್ತಡ ಮತ್ತು ನಿದ್ರೆಯ ಕೊರತೆಯು ಈ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ. ಹೀಗಾಗಿ ನಿದ್ರಿಸುವಾಗ ಮಾತ್ರ ಚರ್ಮವು ತನ್ನ ಹಾನಿಯನ್ನು ತಾನೇ ನಿಜವಾಗಿ ಸರಿಪಡಿಸಿಕೊಳ್ಳುತ್ತದೆ. ದೇಹದ ಇತರ ಭಾಗಗಳಿಗೆ ಹೋಲಿಸಿದರೆ ನಿದ್ರೆಯ ಕೊರತೆಯ ಲಕ್ಷಣಗಳು ಮತ್ತು ಆಯಾಸವು ಎಲ್ಲಕ್ಕಿಂತ ಮೊದಲು ಮುಖದ ಮೇಲೆ ಎದ್ದು ಕಾಣುತ್ತದೆ.

ಅಸಮರ್ಪಕ ಆಹಾರ:

ಹೊರಗಿನಿಂದ ಎಷ್ಟು ದುಬಾರಿ ಕ್ರೀಮ್ ಹಚ್ಚಿದರೂ ಪ್ರಯೋಜನವಿಲ್ಲ. ದೇಹದ ಒಳಗಿನ ಆರೋಗ್ಯ, ಜೀರ್ಣಕ್ರಿಯೆ ಮತ್ತು ಪೌಷ್ಠಿಕ ಆಹಾರವೇ ಚರ್ಮದ ನೈಜ ಸೌಂದರ್ಯವನ್ನು ನಿರ್ಧರಿಸುತ್ತದೆ. ಹೆಚ್ಚಿನ ಸ್ಕಿನ್ ಕೇರ್ ದಿನಚರಿಗಳು ಹೊರಗಿನ ಲೇಪನಗಳಿಗೆ ಪ್ರಾಮುಖ್ಯತೆ ಕೊಡುತ್ತವೆ. ಚರ್ಮದ ಕಾಂತಿಗೆ ತಿನ್ನುವ ಆಹಾರ ಮತ್ತು ಕರುಳಿನ ಆರೋಗ್ಯ ಮುಖ್ಯವಾಗುತ್ತದೆ. ದೇಹದ ಒಳಗಿನ ಉರಿಯೂತ, ಪೋಷಕಾಂಶಗಳ ಕೊರತೆ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟದ ಏರುಪೇರು, ರಕ್ತ ಪರೀಕ್ಷೆಯಲ್ಲಿ ಪತ್ತೆಯಾಗುವ ಮೊದಲೇ ಚರ್ಮದ ಮೇಲೆ ಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತದೆ. ಚರ್ಮವು ದೇಹದ ಒಳಗಿನ ಸ್ಥಿತಿಯನ್ನು ಪ್ರತಿಫಲಿಸುತ್ತದೆ. ಅಲ್ಲದೆ ಇಬ್ಬರು ಮಹಿಳೆಯರು ಒಂದೇ ಬ್ರ್ಯಾಂಡ್ನ ಒಂದೇ ರೀತಿಯ ಸೌಂದರ್ಯ ವರ್ಧಕಗಳನ್ನು ಬಳಸಿದರೂ ಚರ್ಮದ ಗುಣಮಟ್ಟ ಸಂಪೂರ್ಣ ಭಿನ್ನವಾಗಿರುತ್ತದೆ. ಹೀಗಾಗಿ ಬದಲಾವಣೆಗೆ ಕಾರಣ ದೇಹದ ಒಳಗಿನ ಜೀರ್ಣಕ್ರಿಯೆ ಮತ್ತು ಆರೋಗ್ಯದ ಏರುಪೇರುಗಳೇ ವಿನಾಃ ಕ್ರೀಮ್ ಗಳಲ್ಲ.

ಏನು ಸಹಾಯ ಮಾಡಬಹುದು?:

► ನಿದ್ರೆ, ಹೈಡ್ರೇಶನ್ ಮತ್ತು ಒತ್ತಡವನ್ನು ಮೊದಲು ಪರಿಹರಿಸಬೇಕು. ಈ ಪರಿಹಾರ ಕಂಡುಕೊಳ್ಳುವ ಮೊದಲು ಉತ್ಪನ್ನಗಳಿಂದ ಅತಿಯಾದ ಚಿಕಿತ್ಸೆ ನೀಡಬೇಡಿ.

► ಬೆಳಿಗ್ಗೆ ಮತ್ತು ರಾತ್ರಿ ನಿಮ್ಮ ಚರ್ಮದ ಆರೈಕೆ ಸರಳವಾಗಿ ಮತ್ತು ಸ್ಥಿರವಾಗಿರಲಿ.

► ನಿಮ್ಮ ಊಟದ ಮೂಲಕ ಸಾಕಷ್ಟು ಪ್ರೊಟೀನ್ ಸೇವನೆಯೊಂದಿಗೆ ಕಾಲಜನ್ ಅನ್ನು ಬೆಂಬಲಿಸಿ

►ಪ್ಯಾಟರ್ನ್ ಗಳನ್ನು ಗಮನಿಸಲು ನಿಮ್ಮ ಋತು ಚಕ್ರ ಅಥವಾ ಒತ್ತಡದ ಮಟ್ಟಗಳ ಜೊತೆಗೆ ಚರ್ಮದ ಬದಲಾವಣೆ ಪತ್ತೆ ಮಾಡಿ.

ನಿಮ್ಮ ಚರ್ಮ ದೇಹದ ಇತರ ಭಾಗಗಳಿಂದ ಪ್ರತ್ಯೇಕವಾಗಿರುವುದಿಲ್ಲ. ಚರ್ಮವು ಎಲ್ಲಾ ಸಮಯದಲ್ಲೂ ನಿಮ್ಮ ಹಾರ್ಮೋನುಗಳು, ನಿದ್ರೆ ಮತ್ತು ಒತ್ತಡದ ಮಟ್ಟಗಳಿಗೆ ಸಂಪರ್ಕ ಹೊಂದಿದೆ.

ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮೂಲದಿಂದ ಮಾಹಿತಿಯ ಉದ್ದೇಶಕ್ಕಾಗಿ ನೀಡಲಾಗಿದೆ. ವೃತ್ತಿಪರ ವೈದ್ಯರ ಸಲಹೆಗೆ ಪರ್ಯಾಯವಲ್ಲ. ಯಾವುದೇ ಚರ್ಮದ ಸಮಸ್ಯೆಗಳಿಗೆ ನಿಮ್ಮ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.

ಕೃಪೆ: ಹಿಂದೂಸ್ತಾನ್ ಟೈಮ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor