ಸಾಂದರ್ಭಿಕ ಚಿತ್ರ | Photo Credit : AI

ಸಿದ್ಧ ಉತ್ತರಗಳಿಗಾಗಿ ಪದೇಪದೇ AI ಬಳಕೆಯಿಂದ ಮಾನಸಿಕ ಪ್ರಯತ್ನವನ್ನು ನಾವೇ ಕಡಿಮೆ ಮಾಡಿದಂತಾಗುತ್ತದೆ. ಈ ಅಭ್ಯಾಸವು ಅರಿವಿನ ಸಾಮರ್ಥ್ಯಗಳ ಮೇಲೂ ಪರಿಣಾಮ ಬೀರಬಹುದು.

ದೈನಂದಿನ ಜೀವನದಲ್ಲಿ AI ಬಳಕೆ ಹಾಸುಹೊಕ್ಕಾಗಿದೆ. ಕೆಲಸದ ಇಮೇಲ್‌ಗಳನ್ನು ರಚಿಸುವುದು ಅಥವಾ ಕೋಡ್ ಬರೆಯುವುದು ಸವಾಲಾಗಿ ಉಳಿದಿಲ್ಲ. AI ನಮ್ಮ ದೈನಂದಿನ ಚಿಂತನಾ ಸಾಧನವಾಗಿದೆ. ಊಟವನ್ನು ಯೋಜಿಸುವುದರಿಂದ ಹಿಡಿದು ದೈನಂದಿನ ನಿರ್ಧಾರಗಳನ್ನು ಕೈಗೊಳ್ಳುವವರೆಗೆ AI ಸಹಾಯ ಪಡೆಯುವುದು ಎಷ್ಟು ಅಗತ್ಯ ಮತ್ತು ಯಾವಾಗ AI ಬಳಕೆ ತಪ್ಪಿಸಬೇಕು? ನರವಿಜ್ಞಾನಿಗಳು ಮತ್ತು ಉದ್ಯಮ ತಜ್ಞರು ಏನು ಹೇಳುತ್ತಾರೆ?

AI ಮೂಲಕ ದೈನಂದಿನ ಕಾರ್ಯಗಳನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಬಹುದು. ಆದರೆ ಸಿದ್ಧ ಉತ್ತರಗಳಿಗಾಗಿ ಪದೇಪದೇ AI ಬಳಕೆಯಿಂದ ಮಾನಸಿಕ ಪ್ರಯತ್ನವನ್ನು ನಾವೇ ಕಡಿಮೆ ಮಾಡಿದಂತಾಗುತ್ತದೆ. ಈ ಅಭ್ಯಾಸವು ಅರಿವಿನ ಸಾಮರ್ಥ್ಯಗಳ ಮೇಲೂ ಪರಿಣಾಮ ಬೀರಬಹುದು.

ಗುರುಗ್ರಾಮ್‌ ನ ಮಾರೆಂಗೊ ಏಷ್ಯಾ ಆಸ್ಪತ್ರೆಗಳ ಅಧ್ಯಕ್ಷರಾದ ಡಾ. ಪ್ರವೀಣ್ ಗುಪ್ತಾ ಅವರ ಪ್ರಕಾರ, “AI ಅತ್ಯಂತ ಉಪಯುಕ್ತ ಸಾಧನ. ಆದರೆ ನಾವು ನಮ್ಮ ಹೆಚ್ಚಿನ ಆಲೋಚನೆಯನ್ನು ಅದಕ್ಕೆ ಹೊರಗುತ್ತಿಗೆ ನೀಡಲು ಪ್ರಾರಂಭಿಸಿದರೆ, ನಮ್ಮ ಮೆದುಳನ್ನು ತೊಡಗಿಸಿಕೊಳ್ಳುವ ಮಾನಸಿಕ ಪ್ರಯತ್ನದ ಒಂದು ಭಾಗವನ್ನು ನಾವು ಹೊರಗುತ್ತಿಗೆ ನೀಡಬಹುದು” ಎಂದು ಹಂಚಿಕೊಂಡರು.

AI ಸಮಯ ಉಳಿಸುತ್ತಿದೆ ಮತ್ತು ಅನುಕೂಲ ನೀಡುತ್ತಿದೆ. ಆದರೆ ನಿಮ್ಮ ಮೆದುಳಿಗೆ ಇರುವ ವ್ಯಾಯಾಮದ ಅವಕಾಶವನ್ನು ಕಡಿಮೆ ಮಾಡುತ್ತಿದೆ ಎಂದು ಅವರು ಮಾಧ್ಯಮವೊಂದಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“AI ಮೇಲೆ ಹೆಚ್ಚು ಅವಲಂಬಿತರಾಗುವುದರಿಂದ ಮಾಹಿತಿ ನೆನಪಿಟ್ಟುಕೊಳ್ಳುವುದು, ಸಂದರ್ಭ ವಿಶ್ಲೇಷಿಸುವುದು ಮತ್ತು ಸಮಸ್ಯೆಗಳನ್ನು ನಾವೇ ಪರಿಹರಿಸುವ ಬದಲು ತಕ್ಷಣದ ಉತ್ತರಗಳನ್ನು ಹುಡುಕಲು ಕಾರಣವಾಗಬಹುದು. ಪರಿಣಾಮವಾಗಿ ಏಕಾಗ್ರತೆ, ವಿಷಯಗಳನ್ನು ನೆನಪಿಡುವುದು, ಸ್ವತಂತ್ರವಾದ ಆಲೋಚನೆ ಮತ್ತು ವಿಮರ್ಶಾತ್ಮಕ ತಾರ್ಕಿಕತೆಯಂತಹ ಕ್ಷೇತ್ರಗಳಲ್ಲಿ ನಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು” ಎಂದು ಅವರು ಹೇಳಿದ್ದಾರೆ.

ಸಾಂದರ್ಭಿಕ AI ಬಳಕೆಯು ಅರಿವಿನ ಸಾಮರ್ಥ್ಯವನ್ನು ದುರ್ಬಲಗೊಳಿಸದು ಎಂದೂ ಅವರು ಭರವಸೆ ನೀಡಿದ್ದಾರೆ.

ಆದರೆ, ಪ್ರಸ್ತುತ ಹಂತದಲ್ಲಿ AI ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ. “ನರಮಂಡಲದ ಮೇಲೆ AI ಬಳಕೆಯು ಬೀರುವ ದೀರ್ಘಕಾಲೀನ ಪರಿಣಾಮಗಳನ್ನು ನಾವಿನ್ನೂ ಸಂಪೂರ್ಣ ಅರ್ಥಮಾಡಿಕೊಂಡಿಲ್ಲವಾದ ಕಾರಣ AI ಅರಿವಿನ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಹೇಳುವ ಸಮಯ ಇನ್ನೂ ಬಂದಿಲ್ಲ. ಸಮಸ್ಯೆ ಬಳಸುವ ರೀತಿಯಲ್ಲಿದೆ. AI ಅನ್ನು ಆಲೋಚನೆಗೆ ಸಹಾಯ ಮಾಡಲು ಬಳಸಬೇಕೇ ವಿನಾ ಬದಲಿಸಲು ಅಲ್ಲ. ದೈಹಿಕವಾಗಿ ಸದೃಢವಾಗಿರಲು ದೇಹಕ್ಕೆ ವ್ಯಾಯಾಮ ಮಾಡುವಂತೆ ಓದುವುದು, ನೆನಪಿಡುವುದು, ಪ್ರಶ್ನೆ ಕೇಳುವುದು, ತರ್ಕಿಸುವುದು ಮತ್ತು ಸಮಸ್ಯೆಯನ್ನು ಸ್ವತಃ ಪರಿಹರಿಸುವುದನ್ನು ಮುಂದುವರಿಸುವ ಮೂಲಕ ನಮ್ಮ ಮನಸ್ಸನ್ನು ಸಕ್ರಿಯವಾಗಿಡಬೇಕಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

AI ಅನ್ನು ಯಾವಾಗ ಬಳಸಬೇಕು ಮತ್ತು ಯಾವಾಗ ದೂರ ಸರಿಯಬೇಕು ಎಂದು ತಿಳಿದುಕೊಳ್ಳುವುದರಿಂದ ತಂತ್ರಜ್ಞಾನದ ಮೇಲೆ ಅತಿಯಾಗಿ ಅವಲಂಬಿತರಾಗದೆ ಅದರಿಂದ ಪ್ರಯೋಜನ ಪಡೆಯಬಹುದು ಎಂದು DiverseAI ಸಿಇಒ ರಿಯಾ ಶರ್ಮಾ ಅವರು ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರ ಪ್ರಕಾರ, ಗುಣವಾಗಲು ಮಾನವ ಸ್ಪರ್ಶದ ಅಗತ್ಯವಿದೆ. “ವ್ಯಕ್ತಿಗೆ ಸಾಧ್ಯವಾಗುವ ರೀತಿಯಲ್ಲಿ AI ನೆರವು ನೀಡಲು ಸಾಧ್ಯವಿಲ್ಲ. ನೆಲೆ ಕಂಡುಕೊಳ್ಳಲು AI ಬಳಸಿ, ಆದರೆ ಸ್ಥಿರವಾಗಿ ನಿಲ್ಲಲು ಅಲ್ಲ. ಅಗತ್ಯವಿರುವ ಸಂದರ್ಭದಲ್ಲಿ ವ್ಯಕ್ತಿಗಳನ್ನು ಸಂಪರ್ಕಿಸಬೇಕೇ ವಿನಾ AI ಅನ್ನು ಅಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬರ ಜೊತೆಗೆ ಮಾತನಾಡಲು ಸಿದ್ಧರಾಗುವ ಮೊದಲು ಜರ್ನಲ್ ಮಾಡಬೇಕಾದಾಗ ಅಥವಾ ಮನಸ್ಥಿತಿ ಟ್ರ್ಯಾಕ್ ಮಾಡಬೇಕಾದಾಗ ಆರಂಭಿಕ ಹಂತದಲ್ಲಿ AI ಬಳಸಬಹುದು. ಸರಳ ಮಾತಿನಲ್ಲಿ ವಿವರಿಸಿ. ವಿವಿಧ ಕಾರಣಗಳಿಂದ ಮಾನಸಿಕ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲದ ಸಮಯದಲ್ಲಿ ಸ್ಥಿರವಾಗಿರಲು AI ಸಹಾಯ ಮಾಡಬಹುದು. ನಿತ್ಯದ ಒತ್ತಡ, ಕಠಿಣ ಕೆಲಸದ ವಾರ, ಕಠಿಣ ನಿರ್ಧಾರಗಳ ಸಂದರ್ಭದಲ್ಲಿ AI ಬಳಸಬಹುದು.

AI ಬಳಕೆ ಯಾವಾಗ ಮಾಡಬಾರದು?

ಆತ್ಮಹತ್ಯೆ ಮಾಡಿಕೊಳ್ಳುವುದು ಅಥವಾ ಸ್ವತಃ ನೋಯಿಸಿಕೊಳ್ಳುವ ಬಗ್ಗೆ ಆಲೋಚಿಸುತ್ತಿದ್ದರೆ ತಕ್ಷಣ ಮನುಷ್ಯರ ಅಗತ್ಯವಿದೆಯೇ ವಿನಾ ಸ್ಕ್ರೀನ್ ಅಲ್ಲ.

AI ರೋಗ ಪರಿಶೀಲನೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ತರಬೇತಿ ಪಡೆದ ವೃತ್ತಿಪರರ ಗ್ರಹಿಕೆ, ಜ್ಞಾನದ ಅಗತ್ಯವಿದೆ.

ಬಹಳ ನೋವು, ಆಘಾತ ಮತ್ತು ವರ್ಷಗಳ ದುಃಖ ಮಡುಗಟ್ಟಿದ್ದರೆ ನಿಜವಾದ ಸಂಬಂಧದ ಅಗತ್ಯವಿದೆ.

AI ಜನರನ್ನು ಸಂಪರ್ಕಿಸುವ ಸೇತುವೆಯ ಬದಲು ತಪ್ಪಿಸುವ ಮಾರ್ಗವಾಗಿದ್ದರೆ, ಗಮನ ಹರಿಸಬೇಕಾಗುತ್ತದೆ.

AI ಬಳಸಿ ಔಷಧಿಗಳನ್ನು ಎಂದಿಗೂ ತೆಗೆದುಕೊಳ್ಳಬಾರದು. ವೈದ್ಯರ ಸಲಹೆಯಿಂದ ಮಾತ್ರ ಔಷಧಿ ಸೇವಿಸಬೇಕು.

ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮೂಲದಿಂದ ಮಾಹಿತಿ ನೀಡುವ ಉದ್ದೇಶಕ್ಕಾಗಿ ಬರೆಯಲಾಗಿದೆಯೇ ವಿನಾ ವೈದ್ಯರ ಸಲಹೆಗೆ ಪರ್ಯಾಯವಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor