ಮೊಣಕಾಲು ನೋವಿಗೆ ಸರಳ ಸೂತ್ರ; ನೋವು ಇದ್ದವರು ಮೆಟ್ಟಿಲು ಹತ್ತುವಾಗ ಈ ತಪ್ಪು ಮಾಡಬೇಡಿ!
ಸಾಂದರ್ಭಿಕ ಚಿತ್ರ | Photo Credit : magnific.com
ಆರ್ಥೋಸರ್ಜನ್ ಆಗಿರುವ ಡಾ. ಕ್ಷಿತಿಜ್ ಸೋನಿ ಮೊಣಕಾಲು ನೋವು ಇದ್ದವರಿಗೆ ಇನ್ಸ್ಟಾಗ್ರಾಮ್ ನಲ್ಲಿ ನೀಡಿದ ಸಂದೇಶವೇನು? ಅದು ಎಷ್ಟು ಪರಿಣಾಮಕಾರಿ?
ರಾಜಸ್ಥಾನದ ಕೋಟಾದಲ್ಲಿ ಆರ್ಥೋಸರ್ಜನ್ ಆಗಿರುವ ಡಾ. ಕ್ಷಿತಿಜ್ ಸೋನಿ ಇತ್ತೀಚೆಗೆ ಮೊಣಕಾಲು ನೋವಿನಿಂದ ಬಳಲುತ್ತಿರುವ ಜನರು ಮೆಟ್ಟಿಲುಗಳನ್ನು ಬಳಸುವಾಗ ಗಮನಹರಿಸಬೇಕಾದ ಪ್ರಮುಖ ವಿಷಯವನ್ನು ತಿಳಿಸಿದ್ದಾರೆ. “ಉತ್ತಮ ಸ್ವರ್ಗಕ್ಕೆ ಹೋಗುತ್ತದೆ ಮತ್ತು ಕೆಟ್ಟದು ನರಕಕ್ಕೆ ಹೋಗುತ್ತದೆ” ಎನ್ನುವ ಸಂದೇಶದ ಮೂಲಕ ಅವರು ವಿವರಿಸಿದ್ದಾರೆ. ಮೊಣಕಾಲು ನೋವು ಇದ್ದವರು ಮೆಟ್ಟಿಲು ಹತ್ತಬೇಕಾದಾಗಲೆಲ್ಲ ಇದನ್ನು ನೆನಪಿನಲ್ಲಿಡಬೇಕು ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಸಂದೇಶ ಹಾಕಿದ್ದಾರೆ.
ಸಂದೇಶದ ಅರ್ಥವನ್ನು ವಿವರಿಸಿದ ಅವರು, “ನೀವು ಮೆಟ್ಟಿಲು ಹತ್ತುವಾಗ ಯಾವಾಗಲೂ ನೋವಿಲ್ಲದ ಉತ್ತಮ ಮೊಣಕಾಲು ಬಳಸಿ ಮತ್ತು ಕೆಳಗೆ ಇಳಿಯುವಾಗ ಮೊದಲು ನೋವಿನ ಮೊಣಕಾಲನ್ನು ಬಳಸಿ. ಹೀಗೆ ಮಾಡುವುದರಿಂದ ಮೆಟ್ಟಿಲು ಹತ್ತುವಾಗ ನಿಮ್ಮ ಮೊಣಕಾಲುಗಳ ಮೇಲೆ ಬೀಳುವ ಹೊರೆ ಕಡಿಮೆಯಾಗುತ್ತದೆ. ಮೆಟ್ಟಿಲು ಹತ್ತುವಾಗ ಮೊಣಕಾಲಿನ ನೋವು ಉಲ್ಬಣವಾಗುವುದಿಲ್ಲ” ಎಂದು ಹೇಳಿದ್ದಾರೆ.
ಆದರೆ ಈ ತಂತ್ರವು ಮೊಣಕಾಲಿನ ಮೇಲೆ ಬೀಳುವ ಒತ್ತಡವನ್ನು ನಿಜವಾಗಿಯೂ ಕಡಿಮೆ ಮಾಡುತ್ತದೆಯೇ? ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ PSRI ಆಸ್ಪತ್ರೆಯ ನಿರ್ದೇಶಕರಾದ ಡಾ. ಗೌರವ್ ಪ್ರಕಾಶ್ ಭಾರದ್ವಾಜ್ ಅವರ ಪ್ರಕಾರ, ಈ ತಂತ್ರವು ನೋವಿನ ಮೊಣಕಾಲಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು, ಆದರೆ ನೋವಿನ ಮೂಲ ಕಾರಣವನ್ನು ಪರಿಹರಿಸುವುದಿಲ್ಲ.
ಮೇಲೆ ಹತ್ತುವಾಗ ನೋವಿಲ್ಲದ ಕಾಲನ್ನು ಏಕೆ ಇಡಬೇಕು?
“ಹೌದು, ಮೆಟ್ಟಿಲು ಏರುವಾಗ ಯಾವಾಗಲೂ ಉತ್ತಮ ಕಾಲನ್ನು ಮೊದಲು ಇಡಬೇಕು ಮತ್ತು ನೋವಿನ ಕಾಲನ್ನು ಕೆಳಗೆ ಇಡಬೇಕು. ಇದರಿಂದ ಮೊಣಕಾಲಿನ ಮೇಲಿನ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮೆಟ್ಟಿಲು ಹತ್ತುವಾಗ ಮೊದಲು ಇಡುವ ಕಾಲು ದೇಹದ ತೂಕವನ್ನು ಎತ್ತರದ ಮೆಟ್ಟಿಲಿಗೆ ಎತ್ತಲು ಸಹಾಯ ಮಾಡಬೇಕು. ಮೊದಲು ಬಲವಾದ ಅಥವಾ ಕಡಿಮೆ ನೋವಿನ ಕಾಲನ್ನು ಬಳಸುವುದರಿಂದ ದೇಹದ ಬಲವನ್ನು ಹೆಚ್ಚು ತಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಮೆಟ್ಟಿಲು ಹತ್ತುವಾಗ ಮೊದಲು ಇಡುವ ಕಾಲು ಬಲವಾದ ಕಾಲಾಗಿದ್ದರೆ ದೇಹದ ಹೆಚ್ಚು ತೂಕವನ್ನು ತಡೆದುಕೊಂಡು ದೇಹವನ್ನು ಮೇಲಕ್ಕೆ ತಳ್ಳಲು ನೆರವಾಗುತ್ತದೆ” ಎಂದು ಗೌರವ್ ಪ್ರಕಾಶ್ ಭಾರದ್ವಾಜ್ ವಿವರಿಸಿದರು.
ಕೆಳಕ್ಕೆ ಇಳಿಯುವಾಗ ನೋವಿನ ಕಾಲನ್ನು ಮೊದಲು ಏಕೆ ಇಡಬೇಕು?
ಸಾಮಾನ್ಯವಾಗಿ ಮೆಟ್ಟಿಲುಗಳಿಂದ ಕೆಳಗೆ ಹೋಗುವುದು ಮೊಣಕಾಲಿನ ಮೇಲೆ ಹೆಚ್ಚಿನ ಒತ್ತಡ ಬೀರುತ್ತದೆ. ಏಕೆಂದರೆ ಮೊಣಕಾಲಿನ ಸುತ್ತಲಿನ ಸ್ನಾಯುಗಳು ದೇಹದ ಕುಸಿತವನ್ನು ನಿಧಾನವಾಗಿ ನಿಯಂತ್ರಿಸಬೇಕಾಗುತ್ತದೆ. ಇದರಲ್ಲಿ ಎಕ್ಸೆಂಟ್ರಿಕ್ ಕಾಂಟ್ರಾಕ್ಷನ್ (ಸ್ನಾಯು ಉತ್ಪಾದಿಸುವ ಬಲಕ್ಕಿಂತ ಬಾಹ್ಯ ಬಲ ಹೆಚ್ಚಿರುವುದರಿಂದ ಸ್ನಾಯು ಒತ್ತಡದ ಅಡಿಯಲ್ಲಿ ಉದ್ದವಾಗುವ ಒಂದು ರೀತಿಯ ಐಸೋಟೋನಿಕ್ ಸ್ನಾಯು ಸಂಕೋಚನ) ಒಳಗೊಂಡಿದೆ. ಈ ಸಂದರ್ಭದಲ್ಲಿ ಸ್ನಾಯುಗಳು ಚಲನೆಯನ್ನು ನಿಯಂತ್ರಿಸಲು ಉದ್ದವಾಗಿ ಸಕ್ರಿಯವಾಗಿರುತ್ತವೆ. ಈ ಪ್ರಕ್ರಿಯೆಯು ಮೊಣಕಾಲು ಸುತ್ತಲೂ ಸಂಕುಚಿತ ಬಲಗಳನ್ನು ಹೆಚ್ಚಿಸಬಹುದು.
“ಮೆಟ್ಟಿಲುಗಳನ್ನು ಹತ್ತಲು ನಿಮ್ಮ ದೇಹವನ್ನು ಮೇಲಕ್ಕೆತ್ತಲು ನಿಮ್ಮ ಬಲವನ್ನು ಬಳಸಬೇಕಾಗುತ್ತದೆ. ಆದರೆ ಮೊಣಕಾಲು ಸಂಧಿವಾತ ಅಥವಾ ಮೊಣಕಾಲು ನೋವು ಇರುವ ಅನೇಕ ಮಂದಿಗೆ ಮೆಟ್ಟಿಲುಗಳ ಕೆಳಗೆ ಹೋಗುವುದು ಹೆಚ್ಚು ನೋವಿನಿಂದ ಕೂಡಿದೆ ಮತ್ತು ಹೆಚ್ಚು ಅಸ್ಥಿರ ಭಾವನೆ ನೀಡುತ್ತದೆ. ಹೀಗಾಗಿ ನೋವಿನ ಕಾಲನ್ನು ಮೊದಲು ಇಡುವುದು ಉಪಯುಕ್ತ. ಕೆಳಗೆ ಬರುವಾಗ ನೋವಿನ ಕಾಲನ್ನು ಮೊದಲು ಇಡುವುದರಿಂದ ಮೊಣಕಾಲಿನಿಂದ ಅಗತ್ಯವಿರುವ ಬಲ ಮತ್ತು ನಿಯಂತ್ರಣದ ಪ್ರಮಾಣ ಕಡಿಮೆಯಾಗುತ್ತದೆ” ಎನ್ನುತ್ತಾರೆ ತಜ್ಞವೈದ್ಯರು.
ಮೊಣಕಾಲು ಸಮಸ್ಯೆ ಇದ್ದರೆ ಮೆಟ್ಟಿಲುಗಳನ್ನು ತಪ್ಪಿಸಬೇಕೆ?
ಸೌಮ್ಯ, ಸ್ಥಿರವಾದ ಮೊಣಕಾಲು ನೋವು ಇರುವ ವ್ಯಕ್ತಿಗಳು ಜಾಗರೂಕವಾಗಿದ್ದರೆ ಮತ್ತು ಅವರ ಲಕ್ಷಣಗಳನ್ನು ನಿರ್ವಹಿಸಬಹುದಾದರೆ ಮೆಟ್ಟಿಲುಗಳನ್ನು ಸುರಕ್ಷಿತವಾಗಿ ಬಳಸಬಹುದು. “ಎಂದಿಗೂ ಮೆಟ್ಟಿಲು ಹತ್ತದೆ ಇದ್ದರೆ ಕಾಲಾನಂತರದಲ್ಲಿ ಸ್ನಾಯುವಿನ ಬಲವನ್ನು ಕಳೆದುಕೊಳ್ಳಬಹುದು” ಎನ್ನುತ್ತಾರೆ ವೈದ್ಯರು.
ಆದರೆ ಹೆಚ್ಚು ನೋವು, ಊತ ಮತ್ತು ಪುನರಾವರ್ತಿತ ಮೊಣಕಾಲು ಅಸ್ಥಿರತೆ ಇದ್ದರೆ ಮೆಟ್ಟಿಲುಗಳ ಬಳಕೆಯನ್ನು ಸೀಮಿತಗೊಳಿಸುವುದು ಮತ್ತು ಮೂಳೆ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
ಮೊಣಕಾಲುಗಳು ನೋಯುತ್ತಿದ್ದರೆ ಮೆಟ್ಟಿಲು ಹತ್ತುವುದು ಹೇಗೆ?
* ಹ್ಯಾಂಡ್ರೈಲ್ ಬಳಸಿ: ಮೊಣಕಾಲು ನೋಯುತ್ತಿದ್ದರೆ ಹ್ಯಾಂಡ್ರೈಲ್ ಹಿಡಿದು ಹತ್ತುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಹೆಚ್ಚುವರಿ ಸ್ಥಿರತೆ ಸಿಗಬಹುದು.
* ಒಂದೊಂದಾಗಿ ಹೆಜ್ಜೆಯಿಡಿ: ನೋವು ಗಮನಾರ್ಹವಾಗಿದ್ದರೆ ಪರ್ಯಾಯ ಹೆಜ್ಜೆ ಮಾದರಿ ಬಳಸಬೇಕಾಗಿಲ್ಲ. ತೀವ್ರ ನೋವು ಇರುವವರು ಮೆಟ್ಟಿಲುಗಳನ್ನು ಒಂದೊಂದಾಗಿ ಬಳಸಬಹುದು. ಮುಂದಿನ ಹಂತಕ್ಕೆ ಹೋಗುವ ಮೊದಲು ಎರಡೂ ಪಾದಗಳನ್ನು ಒಂದೇ ಮೆಟ್ಟಿಲಿನ ಮೇಲೆ ಇಡಬಹುದು.
* ಉತ್ತಮ ಪಾದರಕ್ಷೆ ಧರಿಸಿ: ಸಾಕಷ್ಟು ಗ್ರಿಪ್ ನೀಡುವ ಶೂಗಳು ಚಲನೆಯನ್ನು ಹೆಚ್ಚು ಆರಾಮದಾಯಕವಾಗಿಸಬಹುದು ಮತ್ತು ಸ್ಥಿರತೆ ಸುಧಾರಿಸಬಹುದು.
* ಹಠಾತ್ ತಿರುಗುವಿಕೆ ತಪ್ಪಿಸಿ: ಮೆಟ್ಟಿಲುಗಳ ಮೇಲೆ ಸಮಯ ತೆಗೆದುಕೊಳ್ಳಿ ಮತ್ತು ಹಠಾತ್ ತಿರುಗುವಂತಹ ಚಲನೆಗಳನ್ನು ತಪ್ಪಿಸಿ. ಇಂತಹ ಚಲನೆ ಮೊಣಕಾಲಿನ ಮೇಲೆ ಹೆಚ್ಚು ಒತ್ತಡ ಹೇರಬಹುದು.
* ವಾಕಿಂಗ್ ಸ್ಟಿಕ್ ಬಳಸಿ: ತೀವ್ರ ನೋವು ಇದ್ದಲ್ಲಿ ವಾಕಿಂಗ್ ಕೋಲು ಅಥವಾ ಇತರ ವಸ್ತುಗಳನ್ನು ಬಳಸಿ ನಡೆಯಬಹುದು. ವ್ಯಕ್ತಿಯ ಸ್ಥಿತಿಯನ್ನು ಆಧರಿಸಿ ಮೂಳೆ ತಜ್ಞರು ಇದನ್ನು ಶಿಫಾರಸು ಮಾಡಬೇಕು.
ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮೂಲದಿಂದ ಮಾಹಿತಿ ಪಡೆದು ಬರೆಯಲಾಗಿದೆ. ವೃತ್ತಿಪರ ವೈದ್ಯರ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿಗೆ ವಿಶ್ವಾಸಾರ್ಹ ತಜ್ಞ ವೈದ್ಯರನ್ನು ಸಂಪರ್ಕಿಸಿ.