×
Ad

ಮ್ಯಾನ್ ಹಾಟನ್ ಬಳಿ ಹೆಲಿಕಾಪ್ಟರ್ ಪತನ; ಆರು ಮಂದಿ ಮೃತ್ಯು

Update: 2025-04-11 07:30 IST

PC: x.com/alexcmhwee

ನ್ಯೂಯಾರ್ಕ್ ಸಿಟಿ: ಮ್ಯಾನ್ ಹಾಟನ್ ಬಳಿ ಹಡ್ಸನ್ ನದಿಗೆ ಗುರುವಾರ ಹೆಲಿಕಾಪ್ಟರ್ ಬಿದ್ದು ಸಂಭವಿಸಿದ ದುರಂತದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಹೆಸರನ್ನು ಅಧಿಕಾರಿಗಳು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಮೃತಪಟ್ಟವರಲ್ಲಿ ಸೀಮನ್ಸ್ ಕಂಪನಿಯ ಅಧ್ಯಕ್ಷ ಆಗಸ್ಟಿನ್ ಎಸ್ಕೋಬರ್, ಅವರ ಪತ್ನಿ ಹಾಗೂ ಮೂವರು ಮಕ್ಕಳು ಸೇರಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಅಮೆರಿಕದಲ್ಲಿ ವಾಯುಮಾರ್ಗ ಮಧ್ಯದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಸರಣಿಗೆ ಇದು ಹೊಸ ಸೇರ್ಪಡೆಯಾಗಿದೆ. ಪ್ರತ್ಯಕ್ಷದರ್ಶಿಗಳು ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ನೋಡನೋಡುತ್ತಿದ್ದಂತೆಯೇ ಹೆಲಿಕಾಪ್ಟರ್ ನ ಅವಶೇಷಗಳು ನದಿಗೆ ಬೀಳುತ್ತಿರುವ ದೃಶ್ಯ ಸೆರೆಯಾಗಿದೆ.

ವಾಯುಮಾರ್ಗ ಮಧ್ಯದಲ್ಲಿ ಅಪಘಾತಕ್ಕೀಡಾದ ಹೆಲಿಕಾಪ್ಟರ್ ಎರಡು ಹೋಳುಗಳಾಗಿ ವಿಭಜನೆಯಾಗಿದೆ. ಹೆಲಿಕಾಪ್ಟರ್ ವಾಯುಪ್ರದೇಶದಲ್ಲಿ ಛಿದ್ರ ಛಿದ್ರವಾಗಿ ಅವಶೇಷಗಳು ನದಿ ನೀರಿಗೆ ಬೀಳುತ್ತಿರುವ ಭಯಾನಕ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವೆಸ್ಟ್ ಹೂಸ್ಟನ್ ಸ್ಟ್ರೀಟ್ ಮತ್ತು ವೆಸ್ಟ್ ಸ್ಟ್ರೀಟ್ ನಡುವೆ ಸಂಜೆ 3.15ರ ಸುಮಾರಿಗೆ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಲಿಕಾಪ್ಟರ್ ಅಪಘಾತಕ್ಕೀಡಾದಾಗ ಭಾರೀ ಸದ್ದು ಕೇಳಿಬಂತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಜಾಲತಾಣಗಳಲ್ಲಿ ಹೇಳಿದ್ದಾರೆ. ಆದರೆ ವಾಯುಮಾರ್ಗದ ಮಧ್ಯೆ ಹೇಗೆ ಅಪಘಾತಕ್ಕೀಡಾಯಿತು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಆದರೆ ಎಕ್ಸ್ ನಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಅಪಘಾತಕ್ಕೆ ಮುನ್ನ ಹೆಲಿಕಾಪ್ಟರ್ ಹಾರಾಡುತ್ತಿರುವುದು ಕಾಣಿಸುತ್ತಿದೆ. ಇದು ಅತ್ತಿತ್ತ ಚಲಿಸುತ್ತಾ ದಟ್ಟ ಮಂಜಿನೊಳಕ್ಕೆ ಪ್ರವೇಶಿಸಿರುವುದು ಕಂಡುಬಂದಿದೆ.

"ಹಡ್ಸನ್ ನದಿಗೆ ಹೆಲಿಕಾಪ್ಟರ್ ಅವಶೇಷಗಳು ಪತನಗೊಂಡ ಭಯಾನಕ ಘಟನೆಯಲ್ಲಿ ಬಹುಶಃ ಆರು ಮಂದಿ ಮೃತಪಟ್ಟಿದ್ದಾರೆ. ಪೈಲಟ್, ಇಬ್ಬರು ವಯಸ್ಕರು ಮತ್ತು ಮೂವರು ಮಕ್ಕಳು ಇನ್ನು ನಮ್ಮೊಂದಿಗೆ ಇಲ್ಲ. ಘಟನೆಯ ದೃಶ್ಯಾವಳಿಗಳು ಭಯಾನಕ. ಸಂತ್ರಸ್ತರ ಕುಟುಂಬ ಮತ್ತು ಬಂಧುಗಳಿಗೆ ದೇವರ ಅನುಗ್ರಹ ಇರಲಿ" ಎಂದು ಸಾರಿಗೆ ಕಾರ್ಯದರ್ಶಿ ಸಿಯಾನ್ ಡಫ್ಫಿ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News