ಭಾರತ ದಾಳಿ ಮಾಡಿದರೆ ಬಾಂಗ್ಲಾಕ್ಕೆ ಪಾಕಿಸ್ತಾನದ ಕ್ಷಿಪಣಿ ನೆರವಾಗುತ್ತದೆ: ಪಾಕ್ ಪ್ರಧಾನಿ ಷರೀಫ್ ಆಪ್ತನ ಎಚ್ಚರಿಕೆ
ಶೆಹಬಾಝ್ ಷರೀಫ್ | Photo Credit : PTI
ಲಾಹೋರ್, ಡಿ.24: ಒಂದು ವೇಳೆ ಭಾರತವು ಬಾಂಗ್ಲಾದೇಶದ ಮೇಲೆ ದಾಳಿ ನಡೆಸಿದರೆ ಪಾಕಿಸ್ತಾನದ ಮಿಲಿಟರಿ ಮತ್ತು ಕ್ಷಿಪಣಿಗಳು ರಂಗಪ್ರವೇಶ ಮಾಡುತ್ತದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಪಕ್ಷ `ಪಾಕಿಸ್ತಾನ್ ಮುಸ್ಲಿಂ ಲೀಗ್'ನ ಯುವ ಘಟಕದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ ಎಚ್ಚರಿಕೆ ನೀಡಿದ್ದು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ನಡುವೆ ಅಧಿಕೃತ ಮಿಲಿಟರಿ ಒಕ್ಕೂಟಕ್ಕೆ ಸಲಹೆ ನೀಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
`ಒಂದು ವೇಳೆ ಭಾರತವು ಬಾಂಗ್ಲಾದೇಶದ ಸ್ವಾಯತ್ತತೆಯ ಮೇಲೆ ದಾಳಿ ಮಾಡಿದರೆ, ಯಾರಾದರೂ ಕೆಟ್ಟ ಉದ್ದೇಶದಿಂದ ಬಾಂಗ್ಲಾದೇಶದತ್ತ ನೋಡಿದರೆ, ಪಾಕಿಸ್ತಾನದ ಜನತೆ, ಪಾಕಿಸ್ತಾನದ ಸಶಸ್ತ್ರ ಪಡೆಗಳು ಮತ್ತು ನಮ್ಮ ಕ್ಷಿಪಣಿಗಳು ಹೆಚ್ಚು ದೂರದಲ್ಲಿಲ್ಲ ಎಂಬುದನ್ನು ನೆನಪಿಸಬೇಕಾಗುತ್ತದೆ. ಭಾರತವು ತನ್ನ `ಅಖಂಡ ಭಾರತ ಸಿದ್ಧಾಂತ'ವನ್ನು ಬಾಂಗ್ಲಾದೇಶದ ಮೇಲೆ ಹೇರುವ ಪ್ರಯತ್ನವನ್ನು ಪಾಕಿಸ್ತಾನ ಒಪ್ಪುವುದಿಲ್ಲ' ಎಂದವರು ಹೇಳಿದ್ದಾರೆ.
ಮತ್ತೊಂದು ವೀಡಿಯೊದಲ್ಲಿ ಉಸ್ಮಾನಿ ಸಂಘಟಿತ ಒತ್ತಡದ ಕುರಿತು ಮಾತನಾಡಿದ್ದು `ಪಾಕಿಸ್ತಾನವು ಪಶ್ಚಿಮದಿಂದ , ಬಾಂಗ್ಲಾದೇಶವು ಪೂರ್ವದಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಚೀನಾವು ಅರುಣಾಚಲ ಪ್ರದೇಶ ಮತ್ತು ಲಡಾಕ್ ಮೇಲೆ ಗಮನ ಕೇಂದ್ರೀಕರಿಸಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.