Photo: X/ZelenskyyUa

ಕೈವ್: ಉಕ್ರೇನ್‌ ನ ರಾಜಧಾನಿ ಕೈವ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ರಷ್ಯಾವು ರಾತ್ರಿ ನಡೆಸಿದ ವಾಯುದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಒಬ್ಬ ಭಾರತೀಯ ಪ್ರಜೆಯೂ ಸೇರಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಝೆಲೆನ್ಸ್ಕಿ ಮಂಗಳವಾರ ತಿಳಿಸಿದ್ದಾರೆ.

ಯುದ್ಧ ತೀವ್ರಗೊಳ್ಳುತ್ತಿರುವ ನಡುವೆಯೇ ರಷ್ಯಾ ಪಡೆಗಳು ರಾತ್ರಿ ಕೈವ್‌ ಮತ್ತು ವಿಶಾಲವಾದ ಕೈವ್‌ ಪ್ರದೇಶದ ಮೇಲೆ ಕ್ಷಿಪಣಿಗಳು ಹಾಗೂ ಡ್ರೋನ್‌ ಗಳಿಂದ ದಾಳಿ ನಡೆಸಿದವು. ರಾಜಧಾನಿಯ ವಿವಿಧೆಡೆ ಸ್ಫೋಟಗಳು ಸಂಭವಿಸಿದವು. ಕೈವ್‌ ಮೇಲೆ ಸತತ ಆರನೇ ದಿನವೂ ರಷ್ಯಾ ದಾಳಿ ನಡೆಸಿದೆ ಎಂದು ಉಕ್ರೇನ್‌ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯಿಂದ ವಸತಿ ಕಟ್ಟಡಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಹಲವೆಡೆ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ಸೇವಾ ಸಿಬ್ಬಂದಿ ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ದಾಳಿಯಲ್ಲಿ ಗಮನಾರ್ಹ ಸಂಖ್ಯೆಯ ಜೆಟ್‌ ಚಾಲಿತ ಡ್ರೋನ್‌ ಗಳು ಮತ್ತು ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಬಳಸಲಾಗಿದೆ. ದುರದೃಷ್ಟವಶಾತ್, ವಸತಿ ಕಟ್ಟಡಗಳು ಮತ್ತು ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗಿದೆ’ ಎಂದು ಝೆಲೆನ್ಸ್ಕಿ ಅವರು ‘ಎಕ್ಸ್‌’ನಲ್ಲಿನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

‘ಒಟ್ಟಾರೆಯಾಗಿ 12 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬ ಭಾರತೀಯ ಪ್ರಜೆಯೂ ಇದ್ದಾರೆ. ದಾಳಿಯಲ್ಲಿ ಡಝನ್‌ ಗಟ್ಟಲೆ ಮಂದಿ ಗಾಯಗೊಂಡಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಸಂತಾಪಗಳು’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor