Photo credit | aljazeera

ವಾಷಿಂಗ್ಟನ್: ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರು ಅಮೆರಿಕದ ಬಂಧನ ಕೇಂದ್ರದಿಂದ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜನವರಿಯಲ್ಲಿ ಅಮೆರಿಕದ ಪಡೆಗಳು ಅವರನ್ನು ವಶಕ್ಕೆ ಪಡೆದ ಬಳಿಕ ಮಡುರೊ ಅವರ ಮೊದಲ ಚಿತ್ರಗಳು ಇದಾಗಿವೆ.

ವೆನೆಜುವೆಲಾದ ತೈಲ ಕ್ಷೇತ್ರಗಳನ್ನು ನಿರ್ವಹಿಸಲು ಅಮೆರಿಕಕ್ಕೆ ಅನುಮತಿ ನೀಡುವ ಐತಿಹಾಸಿಕ ತೈಲ ಒಪ್ಪಂದವನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಘೋಷಿಸಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಅಮೆರಿಕದ ವಿಶೇಷ ಪಡೆಗಳು ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಿಂದ ವಶಕ್ಕೆ ಪಡೆದು ಅಮೆರಿಕಕ್ಕೆ ಕರೆದೊಯ್ದಿದ್ದವು. ಮಾದಕವಸ್ತು ಕಳ್ಳಸಾಗಣೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪದಡಿ ಈ ದಂಪತಿಯನ್ನು ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಕೇಂದ್ರದಲ್ಲಿ ಇರಿಸಲಾಗಿದೆ.

ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಮಡುರೊ ಮತ್ತು ಅವರ ಪತ್ನಿ ನಿರಾಕರಿಸಿದ್ದಾರೆ.

ಎಕ್ಸ್ ಮತ್ತು ಟೆಲಿಗ್ರಾಮ್‌ನಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿರುವ ಮಡುರೊ, ಸ್ಪ್ಯಾನಿಷ್ ಭಾಷೆಯಲ್ಲಿ, “ನನ್ನ ಎಲ್ಲಾ ಮೊಮ್ಮಕ್ಕಳಿಗೆ, ಬಾಲಕ-ಬಾಲಕಿಯರಿಗೆ ಮತ್ತು ನಮ್ಮನ್ನು ಪ್ರೀತಿಸುವ ಎಲ್ಲಾ ಒಳ್ಳೆಯ ಜನರಿಗೆ ನಾನು ಈ ಫೋಟೋಗಳನ್ನು ಒಂದು ಸಣ್ಣ ಉಡುಗೊರೆಯಾಗಿ ಕಳುಹಿಸುತ್ತಿದ್ದೇನೆ” ಎಂದು ಬರೆದಿದ್ದಾರೆ.

“ನಿಮ್ಮ ಪ್ರೀತಿಯಿಂದ ತುಂಬಿದ ಹೃದಯಗಳೊಂದಿಗೆ ನಾವು ದೃಢವಾಗಿ ನಿಂತಿದ್ದೇವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.

“ನಾವು ಬಲಿಷ್ಠವಾಗಿ, ಶಾಂತವಾಗಿ ಮತ್ತು ಆತ್ಮವಿಶ್ವಾಸದಿಂದ ಇರುತ್ತೇವೆ. ದೇವರು ನಮ್ಮೊಂದಿಗಿದ್ದಾನೆ. ದೇವರು ಎಲ್ಲವನ್ನೂ ಒದಗಿಸುತ್ತಾನೆ. ವೆನೆಜುವೆಲಾ ಮತ್ತೆ ಎದ್ದು ನಿಲ್ಲುತ್ತದೆ” ಎಂದು ಅವರು ತಿಳಿಸಿದ್ದಾರೆ.

ಈ ಪೋಸ್ಟ್‌ಗಳನ್ನು ರವಿವಾರ (ಆಗಸ್ಟ್ 30) ಪ್ರಕಟಿಸಲಾಗಿದ್ದರೂ, ಎರಡೂ ಚಿತ್ರಗಳಲ್ಲಿರುವ ಟೈಮ್‌ ಪ್ರಕಾರ ಅವುಗಳನ್ನು ಜೂನ್ 25ರಂದು ತೆಗೆಯಲಾಗಿದೆ. ಉತ್ತರ ವೆನೆಜುವೆಲಾದಲ್ಲಿ 6,500ಕ್ಕೂ ಹೆಚ್ಚು ಜನರನ್ನು ಬಲಿಪಡೆದು ಭಾರೀ ವಿನಾಶಕ್ಕೆ ಕಾರಣವಾದ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ ಮರುದಿನ ಈ ಫೋಟೋಗಳನ್ನು ತೆಗೆಯಲಾಗಿದೆ.

ಈ ಚಿತ್ರಗಳು ಅಧಿಕೃತವೇ ಹಾಗೂ ಅನುಮತಿಯೊಂದಿಗೆ ತೆಗೆಯಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಂಧನ ಕೇಂದ್ರವನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಈ ಕುರಿತು ತಕ್ಷಣ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಡುರೊ ಅವರ ಆಪ್ತ ಮೂಲಗಳ ಪ್ರಕಾರ, ಜೈಲಿನಲ್ಲಿ ಅವರಿಗೆ ದಿನಪತ್ರಿಕೆ ಓದಲು ಅಥವಾ ಇಂಟರ್ನೆಟ್ ಬಳಸಲು ಅವಕಾಶವಿಲ್ಲ. ಆದರೆ, ಅವರು ತಮ್ಮ ಕುಟುಂಬ ಸದಸ್ಯರು ಮತ್ತು ವಕೀಲರೊಂದಿಗೆ ತಿಂಗಳಿಗೆ ಸುಮಾರು 300 ನಿಮಿಷಗಳ ಕಾಲ ದೂರವಾಣಿ ಮೂಲಕ ಮಾತನಾಡಲು ಅನುಮತಿ ನೀಡಲಾಗಿದೆ. ಪ್ರತಿ ಕರೆಯ ಗರಿಷ್ಠ ಅವಧಿ 15 ನಿಮಿಷಗಳಾಗಿರುತ್ತದೆ.

ಮಡುರೊ ಮತ್ತು ಅವರ ಪತ್ನಿ ವಿರುದ್ಧದ ವಿಚಾರಣೆಯು 2027ರ ಜೂನ್ 1ರಂದು ಆರಂಭವಾಗಲಿದೆ ಎಂದು ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯ ಜುಲೈ ಅಂತ್ಯದಲ್ಲಿ ತಿಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor