ನರೇಂದ್ರ ಮೋದಿ ,  ಮಸೌದ್ ಪೆಝೆಶ್ಕಿಯಾನ್ | Photo Credit : PTI

ಬಿಷ್ಕೆಕ್: ಕಿರ್ಗಿಸ್ತಾನ್‍ನದ ರಾಜಧಾನಿ ಬಿಷ್ಕೆಕ್‍ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‍ಸಿಒ) ಶೃಂಗಸಭೆಯ ನೇಪಥ್ಯದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಝೆಶ್ಕಿಯಾನ್ ಅವರನ್ನು ಭೇಟಿಯಾದರು. ಈ ವೇಳೆ ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳ ಅಗತ್ಯವನ್ನು ಅವರು ಪುನರುಚ್ಚರಿಸಿದರು.

ಈ ವರ್ಷದ ಫೆಬ್ರವರಿಯಲ್ಲಿ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಯುದ್ಧವನ್ನು ಪ್ರಾರಂಭಿಸಿದ ನಂತರ ಪ್ರಧಾನಿ ಮೋದಿ ಮತ್ತು ಪೆಝೆಶ್ಕಿಯಾನ್ ನಡುವೆ ನಡೆಯುತ್ತಿರುವ ಮೊದಲ ಭೇಟಿ ಇದಾಗಿದೆ. ಉಭಯ ನಾಯಕರು ಪಶ್ಚಿಮ ಏಷ್ಯಾ ಪ್ರದೇಶದ ಪ್ರಸ್ತುತ ಪರಿಸ್ಥಿತಿ ಮತ್ತು ದ್ವಿಪಕ್ಷೀಯ ಬಾಂಧವ್ಯದ ಕುರಿತು ಚರ್ಚೆ ನಡೆಸಿದರು. ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದರು ಮತ್ತು ಎಲ್ಲಾ ಬಿಕ್ಕಟ್ಟು ಹಾಗೂ ಸಮಸ್ಯೆಗಳನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಎಂಬ ಭಾರತದ ಸ್ಥಿರ ನಿಲುವನ್ನು ಪುನರುಚ್ಚರಿಸಿದರು.

ಹಡಗು ಸಂಚಾರ ಮತ್ತು ವಾಣಿಜ್ಯ ಸ್ವಾತಂತ್ರ್ಯವನ್ನು ರಕ್ಷಿಸಲು ಆಗ್ರಹಿಸಿದ ಮೋದಿ, ವಾಣಿಜ್ಯ ಹಡಗುಗಳು ಮತ್ತು ನಾವಿಕರು ಸೇರಿದಂತೆ ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳಿಗೆ ಯಾವುದೇ ಕಾರಣಕ್ಕೂ ಹಾನಿಯಾಗಬಾರದು ಎಂದು ಹೇಳಿದರು. ಫೆಬ್ರವರಿ 28 ರಂದು ಸಂಘರ್ಷ ಪ್ರಾರಂಭವಾದ ನಂತರ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಇದುವರೆಗೆ ಸುಮಾರು 12 ಭಾರತೀಯ ನಾವಿಕರು ಮೃತಪಟ್ಟಿದ್ದಾರೆ.

ಸಭೆಯ ನಂತರ `ಎಕ್ಸ್'ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಶಾಶ್ವತ ಶಾಂತಿಯನ್ನು ಖಚಿತಪಡಿಸುವ ಉದ್ದೇಶದ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಅರ್ಮೇನಿಯನ್ ಪ್ರಧಾನಿ ನಿಕೋಲ್ ಪಾಶಿನ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಉಭಯ ನಾಯಕರು ರಕ್ಷಣೆ, ಆರ್ಥಿಕತೆ, ಫಾರ್ಮಾ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor