Greece | ಕಾಡ್ಗಿಚ್ಚು ನಂದಿಸುವ ವೇಳೆ ದುರಂತ: ಎರಡು ಹೆಲಿಕಾಪ್ಟರ್ ಗಳು ಪರಸ್ಪರ ಢಿಕ್ಕಿ

Update: 2026-08-02 21:39 IST

PC | facebook.com/GreeceHighDefinition

ಅಥೆನ್ಸ್ (ಗ್ರೀಸ್): ಸಾವಿರಾರು ಹೆಕ್ಟೇರ್ ಪ್ರದೇಶವನ್ನು ಸುಟ್ಟು ಭಸ್ಮ ಮಾಡಿ, ಸುಮಾರು 100ಕ್ಕೂ ಹೆಚ್ಚು ಮನೆಗಳನ್ನು ಹಾನಿಗೊಳಿಸಿರುವ ಭೀಕರ ಕಾಡ್ಗಿಚ್ಚಿನಿಂದ ಗ್ರೀಸ್ ತತ್ತರಿಸಿರುವಾಗಲೇ, ರವಿವಾರ ಪಶ್ಚಿಮ ಅಥೆನ್ಸ್ ನಲ್ಲಿ ಸಾಥಾ ಪ್ರದೇಶದಲ್ಲಿ ಕಾಡ್ಗಿಚ್ಚಿನ ವಿರುದ್ಧ ಹೋರಾಟ ನಡೆಸುತ್ತಿದ್ದ ಎರಡು ಅಗ್ನಿಶಾಮಕ ಹೆಲಿಕಾಪ್ಟರ್ ಗಳು ಪರಸ್ಪರ ಢಿಕ್ಕಿ ಹೊಡೆದಿರುವ ಘಟನೆ ನಡೆದಿದೆ.

ಈ ಬೇಸಿಗೆಯಲ್ಲಿ ಕಾಣಿಸಿಕೊಂಡಿರುವ ಇಡೀ ದೇಶದ ಇತಿಹಾಸದಲ್ಲೇ ಅತ್ಯಂತ ಬೃಹತ್ ಕಾಡ್ಗಿಚ್ಚನ್ನು ನಿಯಂತ್ರಿಸಲು ನೂರಾರು ಅಗ್ನಿಶಾಮಕ ಸಿಬ್ಬಂದಿಗಳು, ವಿಮಾನಗಳು ಹಾಗೂ ಭಾರಿ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದ್ದು, ಆಕಾಶ ಮಾರ್ಗದಲ್ಲಿ ನಡೆಯುತ್ತಿದ್ದ ಅಗ್ನಿಶಾಮಕ ಕಾರ್ಯಾಚರಣೆಯ ವೇಳೆ ಈ ಅಪಘಾತ ಸಂಭವಿಸಿದೆ.

ಎಲಿಫ್ಸಿನಾ ಸೇನಾ ವಿಮಾನ ನಿಲ್ದಾಣದಿಂದ ಹಾರಾಟ ಕೈಗೊಂಡಿದ್ದ ತಲಾ ಇಬ್ಬರು ಸಿಬ್ಬಂದಿಗಳನ್ನು ಹೊಂದಿದ್ದ ಎರಡು ಅಗ್ನಿಶಾಮಕ ಹೆಲಿಕಾಪ್ಟರ್ ಗಳು ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಪರಸ್ಪರ ಢಿಕ್ಕಿಯಾಗಿವೆ ಎಂದು ಗ್ರೀಸ್ ನ ಅಗ್ನಿಶಾಮಕ ಸೇವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

“ಅಗ್ನಿಶಾಮಕ ಕಾರ್ಯಾಚರಣೆಯ ವೇಳೆ ಅಗ್ನಿಶಾಮಕ ದಳ ನಿಯೋಜಿಸಿದ್ದ ತಲಾ ಇಬ್ಬರು ಸಿಬ್ಬಂದಿಗಳನ್ನು ಹೊಂದಿದ್ದ ಎರಡು ಅಗ್ನಿಶಾಮಕ ಹೆಲಿಕಾಪ್ಟರ್ ಗಳು ಅಟ್ಟಿಕಾದ ಸಾಥಾ ಬಳಿ ಪರಸ್ಪರ ಢಿಕ್ಕಿಯಾಗಿವೆ. ಆ ಹೆಲಿಕಾಪ್ಟರ್ ಗಳು ಎಲೆಫ್ಸಿನಾ ಸೇನಾ ವಿಮಾನ ನಿಲ್ದಾಣದಿಂದ ಹಾರಾಟ ಕೈಗೊಂಡಿದ್ದವು. ಅಪಘಾತಕ್ಕೀಡಾಗಿರುವ ಹೆಲಿಕಾಪ್ಟರ್ ಗಳಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು” ಎಂದು ಅಗ್ನಿಶಾಮಕ ಸೇವೆ ಇಲಾಖೆಯ ಪ್ರಕಟಣೆಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News