ಬಲೂಚಿಸ್ತಾನದಲ್ಲಿ ತರಬೇತಿ ನಿರತ 20 ಪಾಕಿಸ್ತಾನಿ ಪೊಲೀಸರ ಅಪಹರಣ
Photo Credit : X
ಕ್ವೆಟಾ: ಶುಕ್ರವಾರ ಸಂಜೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಮಸ್ತುಂಗ್ ಜಿಲ್ಲೆಯಲ್ಲಿ ವ್ಯಾನ್ ಒಂದನ್ನು ತಡೆದ ಶಸ್ತ್ರಸಜ್ಜಿತ ವ್ಯಕ್ತಿಗಳು, ತರಬೇತಿ ಪಡೆಯುತ್ತಿದ್ದ 20 ಪೊಲೀಸರನ್ನು ಅಪಹರಿಸಿದ್ದಾರೆ.
ಈ ಘಟನೆಯು ಗೋರ್ಜಿನಾ ಪ್ರದೇಶದಲ್ಲಿ ನಡೆದಿದ್ದು, ಕಲಾತ್ ರಿಕ್ರೂಟ್ ಟ್ರೈನಿಂಗ್ ಸೆಂಟರ್ನಿಂದ ರಜೆಯ ಮೇಲೆ ಮನೆಗೆ ತೆರಳುತ್ತಿದ್ದ ಪೊಲೀಸ್ ಅಭ್ಯರ್ಥಿಗಳು ಪ್ರಯಾಣಿಸುತ್ತಿದ್ದ ವಾಹನವನ್ನು ಬಂದೂಕುಧಾರಿಗಳು ತಡೆದಿದ್ದಾರೆ. ಈ ಅಪಹರಣ ಘಟನೆಯ ನಂತರ ಪಾಕಿಸ್ತಾನದ ಭದ್ರತಾ ಪಡೆಗಳು ಮಸ್ತುಂಗ್ ಮತ್ತು ಅದರ ಸುತ್ತಮುತ್ತಲಿನ ಹಲವು ಕಡೆಗಳಲ್ಲಿ ಚೆಕ್ಪೋಸ್ಟ್ ಗಳನ್ನು ನಿರ್ಮಿಸಿ ಶೋಧ ಕಾರ್ಯವನ್ನು ಆರಂಭಿಸಿವೆ ಎಂದು ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ
ಮತ್ತೊಂದು ಘಟನೆಯಲ್ಲಿ, ತುರ್ಬತ್ ಬಳಿ ಶಸ್ತ್ರಸಜ್ಜಿತ ಬಲೂಚ್ ಪ್ರತ್ಯೇಕತಾವಾದಿಗಳು ಸರಕು ತುಂಬಿದ ಟ್ರಕ್ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.