ಇರಾನ್ನಿಂದ ಹೌತಿಗಳಿಗೆ ದಾಳಿಯ ಗುರಿಗಳ ಗುಪ್ತಚರ ಮಾಹಿತಿ: ಹೌತಿಗಳ ಯಶಸ್ಸಿನಲ್ಲಿ ಇರಾನ್ ಪಾತ್ರ; ವರದಿ
Photo Credit : TOI
ನ್ಯೂಯಾರ್ಕ್: ಸೌದಿ ಅರೇಬಿಯಾದ ಮೇಲೆ ಯಮನ್ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇತ್ತೀಚೆಗೆ ನಡೆಸಿದ ಹಲವಾರು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು, ಇರಾನ್ ಆಡಳಿತ ನೀಡಿದ ಗುಪ್ತಚರ ಮಾಹಿತಿಯನ್ನು ಆಧರಿಸಿವೆ ಎಂದು `ದಿ ವಾಲ್ಸ್ಟ್ರೀಟ್ ಜರ್ನಲ್' ಶನಿವಾರ ವರದಿ ಮಾಡಿದೆ.
ಇಸ್ರೇಲಿ ರಕ್ಷಣಾ ಗುಪ್ತಚರ ಸಂಸ್ಥೆಯ ಇರಾನ್ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದ ಡ್ಯಾನಿ ಸಿಟ್ರಿನೊವಿಚ್ ಅವರ ಹೇಳಿಕೆಯನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇರಾನ್ ಮತ್ತು ಹೌತಿಗಳ ನಡುವಿನ ಗುಪ್ತಚರ ಸಂಪರ್ಕವು ಕಾರ್ಯಾಚರಣೆಯ ಮಟ್ಟದಲ್ಲಿ ಅತ್ಯಂತ ಪ್ರಬಲವಾಗಿದೆ. ಹೌತಿಗಳ ಯಶಸ್ಸಿನಲ್ಲಿ ಇರಾನ್ಗೆ ದೊಡ್ಡ ಹಿತಾಸಕ್ತಿಯಿದೆ. ಇದು ಸೌದಿ ಅರೇಬಿಯಾಗೆ ಹಾನಿ ಮಾಡುತ್ತದೆ ಮತ್ತು ತೈಲ ಬೆಲೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಇದು ಕೇವಲ ಗ್ರಾಹಕ-ಪೋಷಕ ಸಂಬಂಧವಲ್ಲದೆ, ಕಾರ್ಯತಂತ್ರದ ಸಹಕಾರವನ್ನು ಆಧರಿಸಿದ ಹಂಚಿಕೆಯ ಹಿತಾಸಕ್ತಿಯಾಗಿದೆ' ಎಂದು ಅವರು ವಿವರಿಸಿದ್ದಾರೆ.
ಸೌದಿಗಳ ಮೇಲಿನ ಹೌತಿಗಳ ದಾಳಿಯಲ್ಲಿ ಇರಾನ್ಗೆ ಇರುವ ಹಿತಾಸಕ್ತಿಯನ್ನು ನ್ಯೂಯಾರ್ಕ್ ಮೂಲದ ಭದ್ರತಾ ಚಿಂತಕರ ಚಾವಡಿ `ದಿ ಸೌಫಾನ್ ಸೆಂಟರ್' ಕೂಡ ಎತ್ತಿ ತೋರಿಸಿದ್ದು, ಈ ದಾಳಿಗಳು ಇರಾನ್ ತನ್ನ ಶಕ್ತಿಯನ್ನು ಪ್ರದರ್ಶಿಸಲು ನೆರವಾಗುತ್ತಿವೆ' ಎಂದು ಪ್ರತಿಪಾದಿಸಿದೆ. ಹೌತಿಗಳ ಇತ್ತೀಚಿನ ಮಿಲಿಟರಿ ಯಶಸ್ಸುಗಳು ಖಂಡಿತವಾಗಿಯೂ ಇರಾನ್ ನೆರವನ್ನು ಆಧರಿಸಿವೆ. ಹೌತಿಗಳು ಇರಾನ್ ಮತ್ತು ಇತರ ಪಾಲುದಾರರಿಂದ ಪಡೆದ ಬೆಂಬಲವು, ಕಳೆದ ಕೆಲವು ತಿಂಗಳುಗಳಲ್ಲಿ ಅವರು ಸಾಧಿಸಿದ ಕ್ಷಿಪ್ರ ಯಶಸ್ಸಿಗೆ ನಿಸ್ಸಂದೇಹವಾಗಿ ಹಾದಿಮಾಡಿಕೊಟ್ಟಿದೆ ಎಂದು ವಾಶಿಂಗ್ಟನ್ ಮೂಲದ ನೀತಿ ಸಂಸ್ಥೆ `ನ್ಯೂ ಅಮೇರಿಕಾ'ದ ಫೆಲೋ ಆಡಮ್ ಬ್ಯಾರನ್ ಹೇಳಿದ್ದಾರೆ.
ಸೌದಿ ಅರೇಬಿಯಾ ಮತ್ತು ಪ್ರದೇಶದ ಸೌದಿ ನೇತೃತ್ವದ ಮೈತ್ರಿಕೂಟದ ಮೇಲೆ ಇತ್ತೀಚೆಗೆ ನಡೆದ ಹೌತಿ ದಾಳಿಗಳನ್ನು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್ (ಐಆರ್ಜಿಸಿ) ಸದಸ್ಯರು ಶ್ಲಾಘಿಸಿದ್ದಾರೆ.
ಆರೋಪ ತಳ್ಳಿಹಾಕಿದ ಇರಾನ್ : ಮಧ್ಯಸ್ಥಿಕೆ ವಹಿಸಲು ಆಫರ್
ಯಮನ್ನ ಹೌತಿ ಬಂಡುಕೋರರು ಸೌದಿ ಅರೇಬಿಯಾ ವಿರುದ್ಧ ನಡೆಸುತ್ತಿರುವ ದಾಳಿಗಳನ್ನು ತೀವ್ರಗೊಳಿಸಲು ಇರಾನ್ ಪ್ರಚೋದನೆ ನೀಡುತ್ತಿದೆ ಎಂಬ ಆರೋಪವನ್ನು ಇರಾನ್ ತಳ್ಳಿಹಾಕಿದೆ. ಈ ಆರೋಪವನ್ನು ನಂಬಲರ್ಹವಲ್ಲ ಎಂದು ಕರೆದಿರುವ ಇರಾನ್, ಸಂಘರ್ಷವನ್ನು ಅಂತ್ಯಗೊಳಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ತಿಳಿಸಿದೆ.
ಹೌತಿ ಕಾರ್ಯಾಚರಣೆಗಳಲ್ಲಿ ಇರಾನ್ ಪಾತ್ರವಹಿಸಿದೆ ಎಂಬ ಯಾವುದೇ ಪ್ರತಿಪಾದನೆಯನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ತಳ್ಳಿಹಾಕುತ್ತದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಖಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯಮನ್ನ ಸಶಸ್ತ್ರ ಪಡೆಗಳು ತಮ್ಮ ಸ್ವಂತ ಹಿತಾಸಕ್ತಿ ಮತ್ತು ಮೌಲ್ಯಮಾಪನಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ. ಇರಾನ್ ಮತ್ತು ಅದರ ಮಿತ್ರರ ನಡುವಿನ ಬಾಂಧವ್ಯದ ಬಗ್ಗೆ ತಿಳಿದಿರುವವರಿಗೆ ಇಂತಹ ಆರೋಪಗಳು ನಂಬಲರ್ಹವೆನಿಸುವುದಿಲ್ಲ. ಸಂಘರ್ಷ ತೀವ್ರಗೊಳ್ಳುವುದು ಯಾವುದೇ ಪಕ್ಷದ ಹಿತಾಸಕ್ತಿಗೆ ಒಳ್ಳೆಯದಲ್ಲ ಎಂದು ಇರಾನ್ ಭಾವಿಸುತ್ತದೆ ಮತ್ತು ಹಗೆತನ, ವೈರತ್ವಗಳನ್ನು ಅಂತ್ಯಗೊಳಿಸಲು ತನ್ನ ಉತ್ತಮ ಸಂಬಂಧಗಳನ್ನು ಬಳಸಿಕೊಳ್ಳಲು ಯಾವಾಗಲೂ ಸಿದ್ಧವಾಗಿದೆ ಎಂದು ಬಖಾಯಿ ತಿಳಿಸಿದ್ದಾರೆ.