ಸಿಜೆಪಿ ಪ್ರತಿಭಟನೆಯನ್ನು ನಿರ್ವಹಿಸಿದ ರೀತಿ ಕುರಿತು ಭಾರತವನ್ನು ಪ್ರಶ್ನಿಸುವಂತೆ ಮಾರ್ಕೊ ರೂಬಿಯೋಗೆ ಅಮೆರಿಕ ಸಂಸದರ ಆಗ್ರಹ
ಮಾರ್ಕೊ ರೂಬಿಯೋ | Photo Credit : AP
ವಾಷಿಂಗ್ಟನ್: ದಿಲ್ಲಿ ಹಾಗೂ ಇತರೆಡೆಗಳಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಸಂದರ್ಭದಲ್ಲಿ ಭದ್ರತಾ ಪಡೆಗಳು ಅತಿಯಾದ ಬಲಪ್ರಯೋಗ ಮಾಡಿವೆ ಎಂಬ ಆರೋಪಗಳ ಕುರಿತು ತನ್ನ ಭಾರತೀಯ ಸಂವಾದಕರೊಂದಿಗೆ ಚರ್ಚಿಸುವಂತೆ ಅಮೆರಿಕದ ಆರು ಡೆಮಾಕ್ರಟಿಕ್ ಸಂಸದರು ವಿದೇಶಾಂಗ ಸಚಿವ ಮಾರ್ಕೊ ರೂಬಿಯೋ ಅವರನ್ನು ಆಗ್ರಹಿಸಿದ್ದಾರೆ.
‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು (ಸಿಜೆಪಿ) ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಕಣ್ಗಾವಲು ಇಡಲು ವಾಷಿಂಗ್ಟನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಇತರ ಅಮೆರಿಕನ್ ನಗರಗಳಲ್ಲಿರುವ ದೂತಾವಾಸಗಳು ಛಾಯಾಗ್ರಾಹಕರನ್ನು ನಿಯೋಜಿಸಿವೆ ಎಂದೂ ಸಂಸದರಾದ ಪ್ರಮೀಳಾ ಜಯಪಾಲ್, ಇಲ್ಹಾನ್ ಉಮರ್, ಜಿಮ್ ಮೆಕ್ಗವರ್ನ್, ರಶೀದಾ ತಲೈಬ್, ಎಲೆನಾರ್ ಹೋಮ್ಸ್ ನಾರ್ಟನ್ ಮತ್ತು ಜೀಸಸ್ ಗಾರ್ಸಿಯಾ ಆರೋಪಿಸಿದ್ದಾರೆ.
ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿರುವ ಮಾರ್ಕೊ ರೂಬಿಯೋ ಮುಂಬೈನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
‘ದಿಲ್ಲಿ ಮತ್ತು ಭಾರತದ ಇತರ ಭಾಗಗಳಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ಭದ್ರತಾ ಪಡೆಗಳು ನಡೆಸಿದ ದಬ್ಬಾಳಿಕೆ, ಅನ್ಯಾಯದ ಬಂಧನ ಹಾಗೂ ಅತಿಯಾದ ಬಲಪ್ರಯೋಗದ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ’ ಎಂದು ಈ ಸಂಸದರು ಶುಕ್ರವಾರ ರೂಬಿಯೋ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗದ ಉದಾಹರಣೆಗಳನ್ನಾಗಿ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ನಡೆದಿದ್ದ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಅವರು ಉಲ್ಲೇಖಿಸಿದ್ದಾರೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್ಐಆರ್) ಪ್ರಸ್ತಾಪಿಸಿರುವ ಜಯಪಾಲ್, ಭಾರತದ ಕರಡು ಮತದಾರರ ಪಟ್ಟಿಯಿಂದ 13 ಕೋಟಿ ಮತದಾರರನ್ನು ಕೈಬಿಡಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದು, ಸಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.
ಜಯಪಾಲ್ ಹೇಳಿಕೆಯನ್ನು ಖಂಡಿಸಿರುವ ಅಮೆರಿಕದಲ್ಲಿಯ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ, ಇದು ಭಾರತದ ಆಂತರಿಕ ವಿಚಾರಗಳಲ್ಲಿ ಸ್ವೀಕಾರಾರ್ಹವಲ್ಲದ ಹಸ್ತಕ್ಷೇಪ ಎಂದಿದ್ದಾರೆ.
ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ ಸಲಹೆಗಾರರಾಗಿದ್ದ ಡೆಮಾಕ್ರಟಿಕ್ ನಾಯಕ ಅಜಯ್ ಜೈನ್ ಭುಟೋರಿಯಾ ಅವರು ರೂಬಿಯೋಗೆ ಪತ್ರ ಬರೆದಿದ್ದಕ್ಕಾಗಿ ಜಯಪಾಲ್ ಅವರನ್ನು ಟೀಕಿಸಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತವು ತನ್ನದೇ ನ್ಯಾಯಾಲಯಗಳು, ಪತ್ರಿಕಾ ಸ್ವಾತಂತ್ರ್ಯ ಮತ್ತು 90 ಕೋಟಿಗೂ ಅಧಿಕ ಮತದಾರರನ್ನು ಹೊಂದಿದೆ. ಭಾರತದ ಆಂತರಿಕ ವಿಷಯಗಳ ಬಗ್ಗೆ ಅಮೆರಿಕದ ಕಾಂಗ್ರೆಸ್ ಉಪದೇಶ ಮಾಡಬಾರದು. ಅದು ಅಮೆರಿಕದ ಸಮಸ್ಯೆಗಳ ಮೇಲೆ ಗಮನವನ್ನು ಕೇಂದ್ರಕರಿಸಲಿ ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಪ್ರತಿಭಟನೆಗಳಿಗೆ ಕಾನೂನು ಜಾರಿ ಸಂಸ್ಥೆಗಳು ಪ್ರತಿಕ್ರಿಯಿಸುವಾಗ ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಭಾರತ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಂಸದರು ರೂಬಿಯೋ ಅವರನ್ನು ಆಗ್ರಹಿಸಿದ್ದಾರೆ.