ಡೊನಾಲ್ಡ್ ಟ್ರಂಪ್ | Photo Credit : NDTV 

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಕೇಟೀ ಝಕಾರಿಯಾ ಅವರನ್ನು ವಜಾಗೊಳಿಸುವ ಕೆಲವೇ ಗಂಟೆಗಳ ಮುನ್ನ, ಅವರ ಕಾನೂನು ಅರ್ಹತೆಗಳ ಕುರಿತು ಕಠಿಣ ಪ್ರಶ್ನೆಗಳನ್ನು ಕೇಳುವ ಟಿವಿ ಸಂದರ್ಶನಕ್ಕೆ ಒಳಪಡಿಸಲಾಗಿತ್ತು. ಈ ಸಂದರ್ಶನವನ್ನು ಝಕಾರಿಯಾ ವಿರುದ್ಧದ ‘ಯೋಜಿತ ದಾಳಿ’ಯಂತೆ ರೂಪಿಸುವಲ್ಲಿ ಟ್ರಂಪ್ ಅವರ ಹಿರಿಯ ಸಹಾಯಕಿ ಹಾಗೂ ಶ್ವೇತಭವನದ ಮುಖ್ಯಸ್ಥೆ ಸೂಸಿ ವೈಲ್ಸ್ ನೆರವಾಗಿದ್ದರು ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ಕ್ಯಾರೊಲಿನ್ ಲೆವಿಟ್ ಅವರ ಬದಲಿಗೆ ಝಕಾರಿಯಾ ಅವರನ್ನು ನೇಮಕ ಮಾಡಿರುವುದು ವೈಲ್ಸ್ ಅವರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ‘ಫಾಕ್ಸ್ ನ್ಯೂಸ್’ ನಿರೂಪಕ ಸೀನ್ ಹ್ಯಾನಿಟಿ ಅವರ ಕಾರ್ಯಕ್ರಮದಲ್ಲಿ ಝಕಾರಿಯಾ ಅವರನ್ನು ಕಠಿಣ ಪ್ರಶ್ನೆಗಳಿಗೆ ಗುರಿಪಡಿಸುವ ವ್ಯವಸ್ಥೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.

ಗುರುವಾರ ಪ್ರಸಾರವಾದ ತಮ್ಮ ಪ್ರೈಮ್ಟೈಮ್ ಕಾರ್ಯಕ್ರಮದಲ್ಲಿ ಹ್ಯಾನಿಟಿ ಅವರು ಝಕಾರಿಯಾ ಅವರ ಕಾನೂನು ಅರ್ಹತೆಗಳ ಕುರಿತು ಪ್ರಶ್ನಿಸಿದರು. ‘ನೀವು ಬಾರ್ ಪರೀಕ್ಷೆ ಬರೆದಿದ್ದೀರಿ. ಆದರೆ ಅದರಲ್ಲಿ ಉತ್ತೀರ್ಣರಾಗಿಲ್ಲ. ಹೌದಲ್ಲವೇ?’ ಎಂದು ಹ್ಯಾನಿಟಿ ಕೇಳಿದರು.

‘ಹೌದು, ಸೀನ್, ಅದು ನಿಜ’ ಎಂದು ಝಕಾರಿಯಾ ಉತ್ತರಿಸಿದರು. ತಮ್ಮ ಕಾನೂನು ಶಿಕ್ಷಣ ಮತ್ತು ವೃತ್ತಿ ಅನುಭವದ ಕುರಿತು ಸಮರ್ಥನೆ ನೀಡಲು ಅವರು ಪ್ರಯತ್ನಿಸಿದರು. ಸಂದರ್ಶನ ನಡೆದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಅವರು ಝಕಾರಿಯಾ ಅವರನ್ನು ಹುದ್ದೆಯಿಂದ ವಜಾಗೊಳಿಸಿದರು.

►ಸಂದರ್ಶನದ ಹಿಂದೆ ಸೂಸಿ ವೈಲ್ಸ್ ಪಾತ್ರ?

ಮೂಲವೊಂದನ್ನು ಉಲ್ಲೇಖಿಸಿರುವ ‘ದಿ ಟೆಲಿಗ್ರಾಫ್’, ಸೂಸಿ ವೈಲ್ಸ್ ಮತ್ತು ಸೀನ್ ಹ್ಯಾನಿಟಿ ನಡುವೆ ನಿಕಟ ಸಂಬಂಧವಿದೆ ಎಂದು ವರದಿ ಮಾಡಿದೆ. ಶ್ವೇತಭವನದ ವಕ್ತಾರೆ ಡೇನಿಯಲ್ ಅಲ್ವಾರೈಜ್ ಮತ್ತು ವೈಲ್ಸ್ ಸೇರಿಕೊಂಡು ಝಕಾರಿಯಾ ಅವರನ್ನು ಹ್ಯಾನಿಟಿ ಅವರ ಪ್ರಶ್ನೆಗಳಿಗೆ ಉತ್ತರಿಸುವ ಪರಿಸ್ಥಿತಿಗೆ ತಳ್ಳಿದರು ಎಂದು ಮೂಲ ತಿಳಿಸಿರುವುದಾಗಿ ವರದಿ ಹೇಳಿದೆ. ಆದರೆ, ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಈ ಆರೋಪವನ್ನು ತಳ್ಳಿಹಾಕಿದ್ದಾರೆ.

‘ಸೂಸಿ ಮತ್ತು ಸೀನ್ ಪರಸ್ಪರ ಮಾತನಾಡುತ್ತಾರೆ. ಆದರೆ, ಝಕಾರಿಯಾ ಅವರನ್ನು ಹ್ಯಾನಿಟಿ ಅಥವಾ ಬೇರೆಯವರ ಮುಂದೆ ಬಲಿಪಶುವಾಗಿ ನಿಲ್ಲಿಸುವ ಅಗತ್ಯ ಸೂಸಿಗೆ ಇರಲಿಲ್ಲ. ಅದು ಅವರ ಕಾರ್ಯಶೈಲಿಯಲ್ಲ’ ಎಂದು ಅಧಿಕಾರಿ ಹೇಳಿದ್ದಾರೆ.

‘ಹ್ಯಾನಿಟಿ ಅವರೊಬ್ಬರೇ ಈ ಬೆಳವಣಿಗೆಗೆ ಕಾರಣರಲ್ಲ. ಆ ಬೆಳಿಗ್ಗೆ ನಡೆದ ಘಟನೆಗಳು ಹಾಗೂ ವಕೀಲೆಯಾಗಿರುವ ಕುರಿತು ಝಕಾರಿಯಾ ನೀಡಿದ ವಿಚಿತ್ರ ಉತ್ತರವೂ ಇದರಲ್ಲಿ ಪಾತ್ರ ವಹಿಸಿವೆ’ ಎಂದೂ ಅವರು ಹೇಳಿದ್ದಾರೆ.

ಮತ್ತೊಂದೆಡೆ, ‘ಫಾಕ್ಸ್ ನ್ಯೂಸ್ ಮೀಡಿಯಾ’ದ ವಕ್ತಾರರು, ಯಾರನ್ನು ಸಂದರ್ಶನ ಮಾಡಬೇಕು ಮತ್ತು ಯಾವ ಪ್ರಶ್ನೆಗಳನ್ನು ಕೇಳಬೇಕು ಎಂಬುದನ್ನು ಹ್ಯಾನಿಟಿ ಅವರೇ ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.

►ಬಾರ್ ಪರೀಕ್ಷೆಯಲ್ಲಿ ಅನುತ್ತೀರ್ಣ

ಝಕಾರಿಯಾ ಅವರು ಪೆಪ್ಪರ್ ಡೈನ್ ವಿಶ್ವವಿದ್ಯಾಲಯದ ಲಾ ಸ್ಕೂಲ್ ನಲ್ಲಿ ಪದವಿ ಪಡೆದಿದ್ದರು. 2011ರಲ್ಲಿ ವಿವಾಹವಾದ ಅವರು, ಅದೇ ವಾರದಲ್ಲಿ ತಾವು ಮತ್ತು ತಮ್ಮ ಪತಿ ಚೀನಾಕ್ಕೆ ತೆರಳಲು ಯೋಜಿಸಿದ್ದರಿಂದ ಅಮೆರಿಕದ ರಾಜ್ಯ ಬಾರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಸಾಧ್ಯತೆಯನ್ನು ‘ಅಸಂಭವ’ ಎಂದು ಪರಿಗಣಿಸಿದ್ದಾಗಿ ಹ್ಯಾನಿಟಿ ಅವರಿಗೆ ತಿಳಿಸಿದರು.

ಈಗಾಗಲೇ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರಿಂದ ಮತ್ತು ತಮ್ಮ ಶೈಕ್ಷಣಿಕ ದಾಖಲೆಯಲ್ಲಿ ‘ಹಿಂತೆಗೆದುಕೊಂಡಿದ್ದಾರೆ’ ಎಂಬ ಸ್ಥಿತಿ ದಾಖಲಾಗಬಾರದು ಎಂಬ ಕಾರಣಕ್ಕೆ ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾಗಿ ವಿವರಿಸಿದರು.

ಬಳಿಕ, ಗಡಿಯಾಚೆಗಿನ ಕಾರ್ಪೊರೇಟ್ ವಹಿವಾಟುಗಳನ್ನು ನಿರ್ವಹಿಸುವ ಚೀನಾದ ಕಾನೂನು ಸಂಸ್ಥೆಯೊಂದರ ಅಂತರರಾಷ್ಟ್ರೀಯ ವ್ಯವಹಾರಗಳ ವಿಭಾಗದಲ್ಲಿ ಕೆಲಸ ಮಾಡಿದ್ದಾಗಿ ತಿಳಿಸಿದರು. ಅಲ್ಲಿ ಕೆಲಸ ಮಾಡಲು ಅಮೆರಿಕದ ರಾಜ್ಯ ಬಾರ್ ನಲ್ಲಿ ನೋಂದಾಯಿತ ವಕೀಲರಾಗಿರುವುದು ಕಡ್ಡಾಯವಾಗಿರಲಿಲ್ಲ ಎಂದರು.

ತಮ್ಮನ್ನು ‘ವಕೀಲೆ’ ಎಂದು ಹೇಳಿಕೊಂಡಿದ್ದ ಕುರಿತು ಸ್ಪಷ್ಟನೆ ನೀಡಿದ ಝಕಾರಿಯಾ, ಪೆಪ್ಪರ್ಡೈನ್ ವಿಶ್ವವಿದ್ಯಾಲಯದ ಮುಖ್ಯಸ್ಥರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದಾಗಿ ಹೇಳಿದರು. ಲಾ ಸ್ಕೂಲ್ ನ ಬಳಿಕ ವಿಶ್ವವಿದ್ಯಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ, ತಮ್ಮನ್ನು ‘ವಕೀಲೆ’ ಎಂದು ಕರೆದುಕೊಳ್ಳಬಹುದು; ಆದರೆ ‘ಅಟಾರ್ನಿ’ ಎಂದು ಪರಿಚಯಿಸಿಕೊಳ್ಳಬಾರದು ಎಂಬ ಸಲಹೆ ನೀಡಲಾಗಿತ್ತು ಎಂದು ತಿಳಿಸಿದರು.

ತಮ್ಮನ್ನು ವಕೀಲೆ ಎಂದು ಗುರುತಿಸಿದ್ದ ಹಲವು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ಹ್ಯಾನಿಟಿ ಪ್ರಸ್ತಾಪಿಸಿದಾಗ, ‘ಅವು ಮರುಹಂಚಿಕೊಂಡ ಪೋಸ್ಟ್ ಗಳಾಗಿದ್ದವು ಎಂದು ನಾನು ಭಾವಿಸುತ್ತೇನೆ. ಬಳಿಕ ದಾಖಲೆಯನ್ನು ಸರಿಪಡಿಸಿದ್ದೇನೆ’ ಎಂದು ಝಕಾರಿಯಾ ಪ್ರತಿಕ್ರಿಯಿಸಿದರು.

ಸೌಜನ್ಯ: NDTV

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor