2019ರ ಈಸ್ಟರ್ ಸಂಡೇ ಬಾಂಬ್ ದಾಳಿ: ಶ್ರೀಲಂಕಾದ ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ

Update: 2026-08-03 09:59 IST

Photo: x.com/RNA_NewsMedia

ಕೊಲಂಬೋ: 2019ರಲ್ಲಿ 279 ಜನರ ಸಾವಿಗೆ ಕಾರಣವಾದ ಈಸ್ಟರ್ ಸಂಡೇ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶ್ರೀಲಂಕಾ ನ್ಯಾಯಾಲಯವು ಮಾಜಿ ಪೊಲೀಸ್ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ ಮಾಜಿ ಅಧಿಕಾರಿಗೆ ಮರಣದಂಡನೆ ವಿಧಿಸಿದೆ.

ಮಾಜಿ ಪೊಲೀಸ್ ಮುಖ್ಯಸ್ಥ ಪೂಜಿತ್ ಜಯಸುಂದರ ಮತ್ತು ರಕ್ಷಣಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೊ ಅವರನ್ನು ತ್ರಿಸದಸ್ಯ ಹೈಕೋರ್ಟ್ ಪೀಠವು ಶುಕ್ರವಾರ 2-1 ಬಹುಮತದ ನಿರ್ಧಾರದಲ್ಲಿ ದೋಷಿಗಳೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದೆ.

2022ರಲ್ಲಿ ಇಬ್ಬರನ್ನೂ ಖುಲಾಸೆಗೊಳಿಸಿದ್ದ ತೀರ್ಪಿನ ವಿರುದ್ಧ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. ಇದೀಗ ವಿಶೇಷ ತ್ವರಿತ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತಿರುವ ಸದರಿ ಪೀಠವು ಈ ಆದೇಶ ನೀಡಿದೆ.

2019ರಲ್ಲಿ ಮೂರು ಪ್ರವಾಸಿ ಹೋಟೆಲ್‌ಗಳು ಮತ್ತು ಮೂರು ಚರ್ಚ್‌ಗಳಲ್ಲಿ ಸಂಘಟಿತ ಬಾಂಬ್ ದಾಳಿಗಳನ್ನು ನಡೆಸಲಾಯಿತು. ಅವುಗಳಲ್ಲಿ ಎರಡು ಕ್ಯಾಥೊಲಿಕ್ ಮತ್ತು ಒಂದು ಪ್ರೊಟೆಸ್ಟಂಟ್ ಚರ್ಚ್ ಆಗಿತ್ತು.

ದಾಳಿಯ ಕುರಿತು ಪದೇ ಪದೇ ಗುಪ್ತಚರ ಎಚ್ಚರಿಕೆಗಳು ಬಂದಿದ್ದರೂ, ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳು ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಸಂಸದೀಯ ಸಮಿತಿಯು ವರದಿ ನೀಡಿತ್ತು.

ತೀರ್ಪು ಬಗ್ಗೆ ಪ್ರತಿಕ್ರಿಯಿಸಿದ ಆರೋಪಿಗಳಿಬ್ಬರ ಪರ ವಕೀಲ ಚಮಿಂಡಾ ಅತುಕೋರಲೆ, "ಆರೋಪಿತರಿಬ್ಬರಿಗೆ ಕೊಲ್ಲುವ ಯಾವುದೇ ಉದ್ದೇಶವಿರಲಿಲ್ಲ ಮತ್ತು ಬಾಂಬ್ ದಾಳಿಯ ನಿಜವಾದ ಅಪರಾಧಿಗಳೊಂದಿಗೆ ಅವರಿಗೆ ಯಾವುದೇ ಸಂಪರ್ಕವಿರಲಿಲ್ಲ ಎಂಬುದನ್ನು 2-1ರ ಅಭಿಪ್ರಾಯದ ತೀರ್ಪು ವಿವರಿಸುತ್ತದೆ. ಎರಡು ವಾರಗಳೊಳಗೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು" ಎಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

“ಏಪ್ರಿಲ್ 4, 2019ರಂದು ಭಾರತೀಯ ಗುಪ್ತಚರ ಸಂಸ್ಥೆಯೊಂದು ಸಂಭಾವ್ಯ ಆತ್ಮಾಹುತಿ ದಾಳಿಯ ಬಗ್ಗೆ ಶ್ರೀಲಂಕಾವನ್ನು ಎಚ್ಚರಿಸಿತ್ತು, ಆದರೆ ಅಧಿಕಾರಿಗಳು ಕ್ರಮಕೈಗೊಳ್ಳಲು ವಿಫಲರಾಗಿದ್ದರು” ಎಂದು ವಿಚಾರಣೆಯ ವೇಳೆ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಈ ಹಿಂದಿನ ಸಿವಿಲ್ ಮೊಕದ್ದಮೆಯ ಅಡಿಯಲ್ಲಿ, ದಾಳಿಯಿಂದ ಬದುಕುಳಿದವರಿಗೆ 125 ಮಿಲಿಯನ್ ರೂ.ಗಳ ಪರಿಹಾರವನ್ನು ಪಾವತಿಸಲು ಫರ್ನಾಂಡೊ ಮತ್ತು ಜಯಸುಂದರ ಅವರಿಗೆ ಆದೇಶಿಸಲಾಗಿತ್ತು.

ಶ್ರೀಲಂಕಾ ಮೂಲದ ಐಎಸ್‌ಐಎಲ್ ಪ್ರೇರಿತ ಎರಡು ಗುಂಪುಗಳು ಈಸ್ಟರ್ ಸಂಡೇ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಆರೋಪವನ್ನು ಎದುರಿಸುತ್ತಿವೆ. ನೇರವಾಗಿ ಭಾಗಿಯಾಗಿರುವವರಲ್ಲಿ ಯಾರೂ ಜೀವಂತವಾಗಿಲ್ಲದ ಕಾರಣ, ಅಪರಾಧಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಜನರ ವಿರುದ್ಧ ಪ್ರತ್ಯೇಕ ವಿಚಾರಣೆಗಳು ನಡೆಯುತ್ತಿವೆ.

ಈ ದಾಳಿಯಲ್ಲಿ 45 ವಿದೇಶಿಯರು ಸೇರಿದಂತೆ 279 ಜನರು ಸಾವನ್ನಪ್ಪಿದ್ದರು ಮತ್ತು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಶ್ರೀಲಂಕಾದ ಕ್ಯಾಥೊಲಿಕ್ ಚರ್ಚ್ ಪ್ರತಿಕ್ರಿಯಿಸಿ, ಇದುವರೆಗೆ ಪತ್ತೆಯಾಗಿರುವ ಅಪರಾಧಿಗಳು ಬಾಂಬ್ ದಾಳಿಯ ಅಸಲಿ ಮಾಸ್ಟರ್‌ಮೈಂಡ್‌ಗಳಲ್ಲ ಮತ್ತು ದಾಳಿಯ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಆರೋಪಿಸಿದೆ.

ಶ್ರೀಲಂಕಾದಲ್ಲಿ ಮರಣದಂಡನೆ ಎಂದರೆ ಸಾಮಾನ್ಯವಾಗಿ ಜೀವಾವಧಿ ಶಿಕ್ಷೆ ಎಂದರ್ಥ. ಏಕೆಂದರೆ, ಆ ದೇಶವು 1976ರಿಂದ ಮರಣದಂಡನೆ ಶಿಕ್ಷೆ ಜಾರಿಗೊಳಿಸುವುದನ್ನು ತಡೆಹಿಡಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News