ಕಾಮನ್ವೆಲ್ತ್ ಗೇಮ್ಸ್ ಧ್ವಜ ಭಾರತಕ್ಕೆ ಹಸ್ತಾಂತರ : 2030ರ ಕ್ರೀಡಾಕೂಟ ಗುಜರಾತ್‌ನ ಅಹಮದಾಬಾದ್‌ನಲ್ಲಿ

Update: 2026-08-03 08:37 IST

Photo: x.com/IndiaToday

ಗ್ಲಾಸ್ಗೋ : ಕಾಮನ್ವೆಲ್ತ್ ಗೇಮ್ಸ್ 2026 ಅಧಿಕೃತವಾಗಿ ಸಮಾರೋಪಗೊಂಡಿದ್ದು, 2030ರ ಕ್ರೀಡಾಕೂಟದ ಜವಾಬ್ದಾರಿಯು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಗೊಂಡಿದೆ. ಆಕರ್ಷಕ ಸಮಾರಂಭದಲ್ಲಿ ಸ್ಕಾಟಿಷ್ ಪ್ರತಿನಿಧಿಗಳು ಕಾಮನ್ವೆಲ್ತ್ ಗೇಮ್ಸ್ ಧ್ವಜವನ್ನು ನೀರಜ್ ಚೋಪ್ರಾ, ಪಿ.ಟಿ. ಉಷಾ ಮತ್ತು ಹರ್ಷ ಸಂಘವಿ ಅವರನ್ನೊಳಗೊಂಡ ಭಾರತದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.

ಭಾರತೀಯ ಮತ್ತು ಸ್ಕಾಟಿಷ್ ಸಂಗೀತದ ಸಮ್ಮಿಲನದೊಂದಿಗೆ ಕೂಡಿದ ಸಮಾರಂಭವನ್ನು ಸ್ಯಾಂಡಿ ಥಾಮ್, ಕ್ಯಾಮಿ ಬಾರ್ನ್ಸ್ ಮತ್ತು ಆಸ್ಟ್ರೇಲಿಯಾದ ಗಾಯಕಿ ಡೆಲ್ಟಾ ಗುಡ್ರೆಮ್ ಅವರು ತಮ್ಮ ಸಂಗೀತ ಪ್ರದರ್ಶನಗಳ ಮೂಲಕ ಆರಂಭಿಸಿದರು. ಭಾರತದ ಪರವಾಗಿ ಜನಪ್ರಿಯ ಭಾರತೀಯ ಗಾಯಕ ಶಂಕರ್ ಮಹದೇವನ್ ಮತ್ತು 2017ರ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಅವರ ಪ್ರದರ್ಶನಗಳು ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದವು.

ಗುಡ್ರೆಮ್ ಹಾಡುತ್ತಿರುವಾಗ, ಎಲ್ಲಾ ರಾಷ್ಟ್ರಗಳ ಧ್ವಜಧಾರಿಗಳು ವೇದಿಕೆಯತ್ತ ಸಾಗಿದರು. ಭಾರತದ ಧ್ವಜಧಾರಿಯಾಗಿ ಜಾಸ್ಮಿನ್ ಲಂಬೋರಿಯಾ ಭಾಗವಹಿಸಿದ್ದರು.

ಗ್ಲಾಸ್ಗೋದಿಂದ ಅಹಮದಾಬಾದ್‌ಗೆ ಅಧಿಕೃತವಾಗಿ ಧ್ವಜ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಜಾಕಿ ಕೇ ಅವರ ಕವಿತೆಯ ಮೂಲಕ ಪ್ರಸ್ತುತಪಡಿಸಲಾಯಿತು.

ಅಧಿಕೃತ ಹಸ್ತಾಂತರ

ಕ್ರೀಡಾಕೂಟದ ಅಧಿಕೃತ ಆತಿಥ್ಯದ ಬದಲಾವಣೆಯನ್ನು ಸೂಚಿಸಲು ಸ್ಟೇಡಿಯಂನಾದ್ಯಂತ ಕಾಮನ್ವೆಲ್ತ್ ಗೇಮ್ಸ್ ಧ್ವಜವನ್ನು ಕೊಂಡೊಯ್ಯುವ ಅದ್ಧೂರಿ ಮೆರವಣಿಗೆಯೊಂದಿಗೆ ಆತಿಥ್ಯ ಬದಲಾವಣೆಯ ಪ್ರಕ್ರಿಯೆ ಆರಂಭವಾಯಿತು.

ಹಸ್ತಾಂತರ ವಿಧಿಯ ಭಾಗವಾಗಿ ಸ್ಕಾಟಿಷ್ ಮತ್ತು ಭಾರತೀಯ ರಾಷ್ಟ್ರೀಯ ಧ್ವಜಗಳನ್ನು ಹೊತ್ತ ಪ್ರತಿನಿಧಿಗಳು ಧ್ವಜವನ್ನು ಮುಂದಕ್ಕೆ ತಂದರು. ಗ್ಲಾಸ್ಗೋದ ಲಾರ್ಡ್ ಪ್ರೊವೊಸ್ಟ್ ಜಾಕ್ವೆಲಿನ್ ಮೆಕ್ಲಾರೆನ್ ಅವರು ಮೊದಲು ಕಾಮನ್ವೆಲ್ತ್ ಗೇಮ್ಸ್ ಧ್ವಜವನ್ನು ಕಾಮನ್ವೆಲ್ತ್ ಗೇಮ್ಸ್ ಸ್ಕಾಟ್ಲೆಂಡ್ ಉಪಾಧ್ಯಕ್ಷೆ ಸುಸಾನ್ ಜಾಕ್ಸನ್ ಅವರಿಗೆ ಹಸ್ತಾಂತರಿಸಿದರು. ಬಳಿಕ ಸ್ಕಾಟಿಷ್ ನೆಟ್ಬಾಲ್ ಆಟಗಾರ್ತಿ ಎಮಿಲಿ ನಿಕೋಲ್ ಅವರಿಗೆ ತಲುಪಿದ ಧ್ವಜವು ಕೊನೆಗೆ ಕಾಮನ್ವೆಲ್ತ್ ಸ್ಪೋರ್ಟ್ ಅಧ್ಯಕ್ಷ ಡಾ. ಡೊನಾಲ್ಡ್ ರುಕಾರೆ ಅವರಿಗೆ ತಲುಪಿತು.

ರುಕಾರೆ ಅವರು ಧ್ವಜವನ್ನು ಭಾರತದ ಪ್ರತಿನಿಧಿಗಳಾದ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ನೀಡಿದರೆ, ಅವರು ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ಅವರಿಗೆ ಹಸ್ತಾಂತರಿಸಿದರು. ಅಲ್ಲಿಂದ ಭಾರತದಲ್ಲಿ ನಡೆಯುವ ಅಹಮದಾಬಾದ್ ನಗರದ ಪ್ರತಿನಿಧಿಯಾಗಿ ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ ಅವರಿಗೆ ನೀಡಲಾಯಿತು.

ಈ ಮೂಲಕ ಭಾರತದ ಅಹಮದಾಬಾದ್‌ನಲ್ಲಿ 2030ರ ಕಾಮನ್‌ವೆಲ್ತ್ ಗೇಮ್ಸ್ ನಡೆಯಲಿದೆ ಎಂದು ಘೋಷಿಸಲಾಯಿತು.

ಕಿಂಗ್ ಚಾರ್ಲ್ಸ್ III ಅವರನ್ನು ಪ್ರತಿನಿಧಿಸಿ, ಪ್ರಿನ್ಸ್ ಎಡ್ವರ್ಡ್ (ಡ್ಯೂಕ್ ಆಫ್ ಎಡಿನ್ಬರ್ಗ್) ಅವರು ಕ್ರೀಡಾಪಟುಗಳನ್ನು ಶ್ಲಾಘಿಸುವ ಮೂಲಕ ಕ್ರೀಡಾಕೂಟವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News