New York | ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮ ರದ್ದುಗೊಳಿಸುವಂತೆ ಅಮೆರಿಕದ 48 ಸಂಘಟನೆಗಳ ಆಗ್ರಹ
‘ಹಿಂದೂ ರಾಷ್ಟ್ರೀಯತೆಯ ಬೆಳವಣಿಗೆ ಕಳವಳಕಾರಿ’: ಮೇಯರ್ ಮಮ್ದಾನಿ
youtube Screengrab
ನ್ಯೂಯಾರ್ಕ್: ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಆಗಸ್ಟ್ 29ರಂದು ನಡೆಯಲಿರುವ RSS ಮುಖ್ಯಸ್ಥ ಮೋಹನ್ ಭಾಗವತ್ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಎಂದು ಧಾರ್ಮಿಕ - ಸಮುದಾಯ ಮುಖಂಡರು ಮತ್ತು ನಾಗರಿಕ ಹಕ್ಕುಗಳ ವಕೀಲರು ಆಗ್ರಹಿಸಿದ್ದಾರೆ.
ಆಗಸ್ಟ್ 25ರಂದು ನ್ಯೂಯಾರ್ಕ್ ಸಿಟಿ ಹಾಲ್ ನ ಮೆಟ್ಟಿಲುಗಳ ಮೇಲೆ ನಡೆದ ಪತ್ರಿಕಾಗೋಷ್ಠಿಯಲ್ಲಿ 48 ಸಂಘಟನೆಗಳ ಒಕ್ಕೂಟವು ಈ ಆಗ್ರಹ ಮಾಡಿತು. ನ್ಯೂಯಾರ್ಕ್ ನಗರದ ಮಾಜಿ ಕಂಟ್ರೋಲರ್ ಹಾಗೂ ನ್ಯೂಯಾರ್ಕ್ ನ 10ನೇ ಕಾಂಗ್ರೆಸ್ ಜಿಲ್ಲೆಗೆ ಡೆಮಾಕ್ರಟಿಕ್ ಅಭ್ಯರ್ಥಿಯಾಗಿರುವ ಬ್ರಾಡ್ ಲ್ಯಾಂಡರ್ ಕೂಡ ಕಾರ್ಯಕ್ರಮದಲ್ಲಿ ಮಾತನಾಡಿ RSS ಅನ್ನು ಖಂಡಿಸಿದರು.
ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್, ಸಿಖ್ ಒಕ್ಕೂಟ, ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್, ದಲಿತ್ ಸಾಲಿಡಾರಿಟಿ ಫೋರಮ್, ಸೇವ್ ಅಮೆರಿಕಾ ಫ್ರಮ್ ಹಿಂದುತ್ವ, ಯಹೂದೀಸ್ ಫಾರ್ ರೇಷಿಯಲ್ ಆ್ಯಂಡ್ ಎಕನಾಮಿಕ್ ಜಸ್ಟೀಸ್, ರಬ್ಬಿಸ್ ಫಾರ್ ಸೀಸ್ಫೈರ್, ನ್ಯೂಯಾರ್ಕ್ ಸಿಖ್ ಕೌನ್ಸಿಲ್, ಮೂವ್ಮೆಂಟ್ ಫಾರ್ ಬ್ಲ್ಯಾಕ್ ಲೈವ್ಸ್, ಕೈರ್–ಎನ್ವೈ ಮತ್ತು ಡ್ರಮ್ ಸೇರಿದಂತೆ 48 ಸಂಘಟನೆಗಳು ಒಕ್ಕೂಟದಲ್ಲಿವೆ.
ಇದೇ ವೇಳೆ, ಸಿಟಿ ಹಾಲ್ ನಲ್ಲಿ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಅವರನ್ನು ರ್ಯಾ ಲಿ ಕುರಿತು ಪ್ರಶ್ನಿಸಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಮಮ್ದಾನಿ, ‘ಹಿಂದೂ ರಾಷ್ಟ್ರೀಯತೆಯ ಬೆಳವಣಿಗೆ ಅತ್ಯಂತ ಕಳವಳಕಾರಿ. ನಾನು ಅದನ್ನು ತೀವ್ರವಾಗಿ ವಿರೋಧಿಸುತ್ತೇನೆ’ ಎಂದು ಮಮ್ದಾನಿ ಹೇಳಿದರು
ರ‍್ಯಾಲಿಯನ್ನು ರದ್ದುಗೊಳಿಸಬೇಕೇ ಎಂಬ ಪ್ರಶ್ನೆಗೆ ಮಮ್ದಾನಿ, ‘ನಾನು ರ್ಯಾ ಲಿಯನ್ನು ಬೆಂಬಲಿಸುವುದಿಲ್ಲ. ಆದರೆ, ಇದು ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಅದರ ಮೇಲೆ ನಗರಾಡಳಿತಕ್ಕೆ ಅಧಿಕಾರವಿದೆಯೇ ಎಂಬುದು ನನಗೆ ತಿಳಿದಿಲ್ಲ’ ಎಂದು ಹೇಳಿದರು.
►ನಾಝಿ ರ‍್ಯಾಲಿಯ ನೆನಪು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಕ್ತಾರ ಡ್ಯಾನಿಯೆಲ್ ವಿಲಿಯಮ್ಸ್, 1939ರಲ್ಲಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ನಡೆದ ನಾಝಿ ರ‍್ಯಾಲಿಯನ್ನು ಉಲ್ಲೇಖಿಸಿದರು. ಆ ರ್ಯಾ ಲಿಯಲ್ಲಿ 22 ಸಾವಿರ ನಾಝಿಗಳು ಭಾಗವಹಿಸಿದ್ದರು ಎಂದು ಅವರು ಹೇಳಿದರು.
‘1939ರಲ್ಲಿ RSSನ ಗುರು ಎಂ.ಎಸ್. ಗೋಲ್ವಾಲ್ಕರ್ ಅವರು ಜರ್ಮನಿಯಲ್ಲಿ ಯಹೂದಿಗಳ ವಿರುದ್ಧ ನಾಝಿಗಳು ನಡೆಸಿದ ದಮನವನ್ನು ಭಾರತಕ್ಕೆ ಅನುಸರಿಸಬಹುದಾದ ಮಾದರಿ ಎಂದು ಅಭಿಪ್ರಾಯಪಟ್ಟಿದ್ದರು. ಅದೇ ವರ್ಷ, ಎರಡು ಖಂಡಗಳಲ್ಲಿ ತಮಗೆ ಬೇಡವಾದ ಜನರನ್ನು ದೇಶದಿಂದ ಹೊರಗಟ್ಟುವ ಒಂದೇ ರೀತಿಯ ಚಿಂತನೆ ಕಾಣಿಸಿಕೊಂಡಿತ್ತು’ ಎಂದು ಅವರು ಹೇಳಿದರು.
ಅಮೆರಿಕದ ನಾಝಿಗಳು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನ ವೇದಿಕೆಯನ್ನು ಬಳಸಿದ 87 ವರ್ಷಗಳ ಬಳಿಕ, ಭಾರತದ ನಾಝಿಗಳು ಅದೇ ಹೆಜ್ಜೆಗುರುತಿನಲ್ಲಿ ಸಾಗುತ್ತಿದ್ದಾರೆ ಎಂದು ಡ್ಯಾನಿಯೆಲ್ ಆರೋಪಿಸಿದರು.
►‘RSS ಫ್ಯಾಸಿಸ್ಟ್ ಅರೆಸೈನಿಕ ಪಡೆ’
1925ರಲ್ಲಿ ಸ್ಥಾಪನೆಯಾದ RSS ವಿಶ್ವದ ಅತ್ಯಂತ ಹಳೆಯ, ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಫ್ಯಾಸಿಸ್ಟ್ ಅರೆಸೈನಿಕ ಪಡೆ ಎಂದು ಸಂಘಟನೆಗಳ ವಕ್ತಾರ ಡ್ಯಾನಿಯೆಲ್ ವಿಲಿಯಮ್ಸ್ ಅಭಿಪ್ರಾಯಪಟ್ಟಿದ್ದಾರೆ.
‘ಭಾರತವನ್ನು ಹಿಂದೂ ರಾಷ್ಟ್ರೀಯತಾವಾದಿ ರಾಷ್ಟ್ರವನ್ನಾಗಿ ರೂಪಿಸುವ ಉದ್ದೇಶದಿಂದ RSS ಒಂದು ಶತಮಾನದಿಂದ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯ ಹಿಂದಿನ ನಾಯಕರ ಚಿಂತನೆಯಂತೆ, ಇಂತಹ ಭಾರತದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಸಮಾನ ಸ್ಥಾನ ಇರುವುದಿಲ್ಲ; ಅವರು ಅತಿಥಿಗಳಂತೆ ಮಾತ್ರ ಬದುಕಬೇಕಾಗುತ್ತದೆ’ ಎಂದು ಅವರು ಆರೋಪಿಸಿದರು.
‘RSS ತನ್ನ ಶತಮಾನೋತ್ಸವದ ಅಂಗವಾಗಿ ಆಗಸ್ಟ್ 29ರಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಸಂಘಟನೆಗೆ ಸುಮಾರು 60 ಲಕ್ಷ ಸ್ವಯಂಸೇವಕರಿದ್ದಾರೆ ಎಂದು ಹೇಳಲಾಗಿದ್ದು, ಅದರ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದು ವಿಲಿಯಮ್ಸ್ ಹೇಳಿದರು.
ಈ ರೀತಿಯ ಭಾರತವನ್ನು ನಿರ್ಮಿಸುವ RSSನ ಕಲ್ಪನೆಯು ಹಿಂಸಾಚಾರದ ಮೇಲೆ ನಿಂತಿದೆ ಎಂದು ಅವರು ಆರೋಪಿಸಿದರು. ಇದಕ್ಕೆ ಉದಾಹರಣೆಯಾಗಿ, ಸ್ವತಂತ್ರ ಭಾರತದ ಆರಂಭಿಕ ಅವಧಿಯಲ್ಲಿ ನಡೆದ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಅವರು ಉಲ್ಲೇಖಿಸಿದರು. ಅದನ್ನು ಅವರು ‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯ’ ಎಂದು ವಕ್ತಾರರು ಉಲ್ಲೇಖಿಸಿದರು.
►ಗಾಂಧಿ ಹತ್ಯೆ, RSS ನಿಷೇಧ
‘RSS ಸದಸ್ಯನೊಬ್ಬನಿಂದ ಗಾಂಧಿಯವರ ಹತ್ಯೆಯಾದ ಒಂದು ವಾರದೊಳಗೆ ಭಾರತ ಸರ್ಕಾರ RSS ಅನ್ನು ನಿಷೇಧಿಸಿತು. ಆ ನಿಷೇಧಕ್ಕೆ ಸಹಿ ಹಾಕಿದ ಸಚಿವ ಸಂಪುಟವು RSS ನಾಯಕರ ಭಾಷಣಗಳು ಕೋಮು ವಿಷದಿಂದ ತುಂಬಿವೆ ಎಂದು ಎಚ್ಚರಿಸಿತ್ತು. ಆ ವಿಷವು ದೇಶವನ್ನು ಕಲುಷಿತಗೊಳಿಸಿತ್ತು’ ಎಂದು ಡ್ಯಾನಿಯೆಲ್ ವಿಲಿಯಮ್ಸ್ ಹೇಳಿದರು.
ಗಾಂಧಿಯವರ ಹತ್ಯೆಯ ಬಳಿಕ RSS ಸಿಹಿತಿಂಡಿಗಳನ್ನು ಹಂಚಿತ್ತು ಎಂಬ ಆರೋಪವನ್ನೂ ಅವರು ಮಾಡಿದರು. ‘ಗಾಂಧಿಯವರ ಹತ್ಯೆಯಾದ ಶತಮಾನದಲ್ಲಿ RSSಗೆ ಸಂಬಂಧಿಸಿದವರು ದೇಶದಾದ್ಯಂತ ಹಿಂಸಾಚಾರ ಮತ್ತು ದಾಳಿಗಳಲ್ಲಿ ಭಾಗಿಯಾಗಿದ್ದಾರೆ’ ಎಂದು ಅವರು ವಾಗ್ದಾಳಿ ನಡೆಸಿದರು.
ಕ್ರೈಸ್ತರ ವಿರುದ್ಧದ ದಾಳಿಗಳು, ಚರ್ಚ್ಗಳು ಮತ್ತು ಅನಾಥಾಶ್ರಮಗಳಿಗೆ ಬೆಂಕಿ ಹಚ್ಚಿರುವುದು, ಸನ್ಯಾಸಿನಿಯರ ಮೇಲೆ ಅತ್ಯಾಚಾರ ಹಾಗೂ ಮಿಷನರಿಗಳನ್ನು ಜೀವಂತವಾಗಿ ಸುಟ್ಟ ಘಟನೆಗಳನ್ನು ವಕ್ತಾರರು ಉಲ್ಲೇಖಿಸಿದರು.
►ಗುಜರಾತ್ ಹಿಂಸಾಚಾರದ ಉಲ್ಲೇಖ
ಗುಜರಾತ್ ನಲ್ಲಿ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ಮುಸ್ಲಿಂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ, ಮಕ್ಕಳನ್ನು ತಾಯಂದಿರ ಮುಂದೆಯೇ ಕೊಲ್ಲಲಾಗಿದೆ ಹಾಗೂ ಕುಟುಂಬಗಳನ್ನು ಮನೆಗಳಲ್ಲೇ ಜೀವಂತವಾಗಿ ಸುಡಲಾಗಿದೆ ಎಂದು ಡ್ಯಾನಿಯೆಲ್ ವಿಲಿಯಮ್ಸ್ ಆರೋಪಿಸಿದರು.
‘ಕೇವಲ ಮೂರು ದಿನಗಳಲ್ಲಿ 2,000 ಜನರು ಮೃತಪಟ್ಟರು. ಗುಜರಾತ್ ನ ಮುಸ್ಲಿಮರನ್ನು ಕೊಲ್ಲುವುದಷ್ಟೇ ಅಲ್ಲ, ಅವರನ್ನು ಅಲ್ಲಿ ಅಲ್ಪಸಂಖ್ಯಾತರನ್ನಾಗಿ ಮಾಡುವ ರೀತಿಯಲ್ಲಿ ಹಿಂಸಾಚಾರ ನಡೆಸಲಾಯಿತು. ಅವರ ಸಂಖ್ಯೆ ತೀವ್ರವಾಗಿ ಕುಸಿಯುವಂತೆ ಮಾಡಲಾಯಿತು’ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಅವರ ಕುಟುಂಬದ ಹಿನ್ನೆಲೆಯನ್ನೂ ಉಲ್ಲೇಖಿಸಿದರು. ಮಮ್ದಾನಿ ಅವರ ತಂದೆಯ ಕುಟುಂಬ ಗುಜರಾತಿ ಮುಸ್ಲಿಂ ಕುಟುಂಬ ಎಂದು ಡ್ಯಾನಿಯೆಲ್ ಪ್ರಸ್ತಾಪಿಸಿದರು.
► ‘ಪಾಶ್ಚಿಮಾತ್ಯ ಫ್ಯಾಸಿಸ್ಟರೊಂದಿಗೆ ಸಂಪರ್ಕ’
RSS ತನ್ನ ಸ್ಥಾಪನೆಯ ಕಾಲದಿಂದಲೇ ಪಾಶ್ಚಿಮಾತ್ಯ ಫ್ಯಾಸಿಸ್ಟ್ ಚಳವಳಿಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಸಂಘಟನೆಯ ವಕ್ತಾರ ಡ್ಯಾನಿಯೆಲ್ ವಿಲಿಯಮ್ಸ್ ಆರೋಪಿಸಿದರು.
ಹಿಂದೂ ರಾಷ್ಟ್ರೀಯವಾದಿಗಳು ಮತ್ತು ಬಿಳಿ ರಾಷ್ಟ್ರೀಯವಾದಿಗಳು ಪರಸ್ಪರ ಭಿನ್ನವಾಗಿದ್ದರೂ ಸಾಧ್ಯವಾದಷ್ಟು ಸಹಕರಿಸಬೇಕು ಎಂದು ಆಂಡರ್ಸ್ ಬ್ರೇವಿಕ್ ಕರೆ ನೀಡಿದ್ದನ್ನು ಅವರು ಉಲ್ಲೇಖಿಸಿದರು. 21ನೇ ಶತಮಾನದ ಪ್ರಮುಖ ಬಿಳಿ ರಾಷ್ಟ್ರೀಯವಾದಿ ಭಯೋತ್ಪಾದಕರಲ್ಲಿ ಒಬ್ಬನಾದ ಬ್ರೇವಿಕ್, ಎರಡೂ ಚಳವಳಿಗಳ ಗುರಿಗಳು ಹೆಚ್ಚು ಕಡಿಮೆ ಒಂದೇ ಎಂದು ಹೇಳಿದ್ದಾಗಿ ಅವರು ತಿಳಿಸಿದರು.
RSS ಪಾಶ್ಚಿಮಾತ್ಯ ದೇಶಗಳಲ್ಲಿರುವ ತನ್ನ ಸಮಾನ ಮನಸ್ಕ ಸಂಘಟನೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಅವರು ಆರೋಪಿಸಿದರು. ಭಾರತವನ್ನು ಧಾರ್ಮಿಕ ರಾಷ್ಟ್ರೀಯತೆಯ ದಿಕ್ಕಿನಲ್ಲಿ ಬದಲಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಬಲಪಂಥೀಯ ಗುಂಪುಗಳೊಂದಿಗೆ RSS ನಾಯಕರು ಸಂಪರ್ಕ ಹೊಂದಿದ್ದಾರೆ. ‘ಬಿಳಿ ರಾಷ್ಟ್ರೀಯತೆ ಮತ್ತು ಹಿಂದೂ ರಾಷ್ಟ್ರೀಯತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ’ ಎಂದು ಡ್ಯಾನಿಯೆಲ್ ಟೀಕಿಸಿದರು.
‘ಬೇರೆ ದೇಶಗಳ ಫ್ಯಾಸಿಸ್ಟ್ ಚಳವಳಿಗಳನ್ನು ಇಲ್ಲಿಗೆ ಕರೆತರುವ ಅಗತ್ಯವಿಲ್ಲ. ನಮ್ಮದೇ ಫ್ಯಾಸಿಸ್ಟ್ ಚಳವಳಿಗಳಿಂದ ನಮಗೆ ಈಗಾಗಲೇ ಸಾಕಷ್ಟು ಸಮಸ್ಯೆಗಳಿವೆ’ ಎಂದೂ ಅವರು ಆರೋಪಿಸಿದರು.
►‘ಸಾರ್ವತ್ರಿಕ ಏಕತೆಯ ಹಿಂದೆ ಪರಂಪರೆ ಮರೆಮಾಚಲಾಗುತ್ತಿದೆ’
RSS ತನ್ನ ಹಿಂಸಾತ್ಮಕ ಪರಂಪರೆಯನ್ನು ‘ಸಾರ್ವತ್ರಿಕ ಏಕತೆ’ಯ ವಾಕ್ಚಾತುರ್ಯದ ಹಿಂದೆ ಮರೆಮಾಡುತ್ತಿದೆ ಎಂದು ವಕ್ತಾರ ಡ್ಯಾನಿಯೆಲ್ ವಿಲಿಯಮ್ಸ್ ಆರೋಪಿಸಿದರು.
‘RSS ತನ್ನ ಮುಖ್ಯಸ್ಥರನ್ನು ಅಮೆರಿಕದ ಅತ್ಯಂತ ಪ್ರಸಿದ್ಧ ವೇದಿಕೆಗೆ ಕರೆತರುವ ಮೂಲಕ ಒಂದು ಶತಮಾನದ ರಕ್ತಪಾತದ ಇತಿಹಾಸವನ್ನು ತೊಳೆದುಹಾಕಲು ಪ್ರಯತ್ನಿಸುತ್ತಿದೆ. ಆದರೆ ರಕ್ತದಲ್ಲಿ ತೋಯ್ದಿರುವ RSSನ ಕೈಗಳು ಅವರನ್ನು ಸ್ವಾಗತಿಸುವ ಪ್ರತಿಯೊಬ್ಬರ ಮೇಲೂ ಕಲೆ ಬೀರುತ್ತವೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿನ ರ‍್ಯಾಲಿಯನ್ನು ರದ್ದುಗೊಳಿಸಬೇಕು ಎಂದು ಡ್ಯಾನಿಯೆಲ್ ವಿಲಿಯಮ್ಸ್ ಪುನರುಚ್ಚರಿಸಿದರು.
‘ಬಿಗ್ ಆ್ಯಪಲ್’ ಎಂದು ಕರೆಯಲಾಗುವ ನ್ಯೂಯಾರ್ಕ್ ನಗರದಲ್ಲಿ RSS ತನ್ನ ಕಾರ್ಯಕ್ರಮದ ಮೂಲಕ ‘ಸಾರ್ವತ್ರಿಕ ಏಕತೆ’ ಎಂಬ ಸಂದೇಶವನ್ನು ಬಿಂಬಿಸಲು ಮುಂದಾಗಿದೆ. ಆ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಮೊದಲು ಕಾರ್ಯಕ್ರಮವನ್ನು ರದ್ದುಗೊಳಿಸಬೇಕು’ ಎಂದು ವಿಲಿಯಮ್ಸ್ ಹೇಳಿದರು.