Nepal | ಹಠಾತ್ ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 95ಕ್ಕೆ ಏರಿಕೆ; 350ಕ್ಕೂ ಹೆಚ್ಚು ಮಂದಿ ನಾಪತ್ತೆ
Photo credit: indiatoday.in
ಕಠ್ಮಂಡು, ಆ.26: ನೇಪಾಳದಲ್ಲಿ ಬುಧವಾರ ಭೋಟೆಕೋಶಿ ನದಿಯಲ್ಲಿ ಸಂಭವಿಸಿದ ಭಾರಿ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 95ಕ್ಕೆ ಏರಿದೆ. 350ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಪರಿಹಾರ ಸಾಮಗ್ರಿಗಳೊಂದಿಗೆ ಭಾರತೀಯ ವಾಯುಪಡೆಯ (IAF) ಎರಡು ವಿಮಾನಗಳನ್ನು ನಿಯೋಜಿಸಲು ಸಿದ್ಧತೆ ನಡೆಸಲಾಗಿದೆ.
ಭಾರತೀಯ ಪ್ರಜೆಗಳಿಗೆ ನೆರವು ಮತ್ತು ಮಾಹಿತಿ ಒದಗಿಸಲು ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಎರಡು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ. +977 985 131 6807 ಮತ್ತು +977 970 910 7500 ಸಂಖ್ಯೆಗಳ ಮೂಲಕ ಸಂಪರ್ಕಿಸುವಂತೆ ರಾಯಭಾರ ಕಚೇರಿ ತಿಳಿಸಿದೆ.
ರಾಯಿಟರ್ಸ್ ವರದಿ ಪ್ರಕಾರ, ಬುಧವಾರ ಬೆಳಿಗ್ಗೆ ಭೋಟೆಕೋಶಿ ನದಿಯಲ್ಲಿ ಭಾರಿ ಹಠಾತ್ ಪ್ರವಾಹ ಉಂಟಾದ ಬಳಿಕ ಸಾವಿನ ಸಂಖ್ಯೆ 95ಕ್ಕೆ ಏರಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
‘ಇಲ್ಲಿಯವರೆಗೆ 95 ಸಾವುಗಳು ವರದಿಯಾಗಿವೆ’ ಎಂದು ಪೊಲೀಸ್ ವಕ್ತಾರ ಅಬಿ ನಾರಾಯಣ್ ಕಫ್ಲೆ ಅವರು AFPಗೆ ತಿಳಿಸಿದ್ದಾರೆ. ಸುಮಾರು 28 ಪೊಲೀಸ್ ಸಿಬ್ಬಂದಿಯೂ ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರವಾಹದಿಂದ ರಸ್ತೆಗಳು, ಜಲವಿದ್ಯುತ್ ಯೋಜನೆಗಳು ಮತ್ತು ದೂರಸಂಪರ್ಕ ಜಾಲ ಸೇರಿದಂತೆ ಹಲವು ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನೇಪಾಳ ಸೇನೆ ಮತ್ತು ಖಾಸಗಿ ನಿರ್ವಾಹಕರು ನಿರ್ವಹಿಸುವ 30ಕ್ಕೂ ಹೆಚ್ಚು ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ.
►ಹಲವು ಭದ್ರತಾ ಸಿಬ್ಬಂದಿ ಸಂಪರ್ಕಕ್ಕೆ ಸಿಗುತ್ತಿಲ್ಲ
ವಿದೇಶಾಂಗ ಸಚಿವ ಶಿಶಿರ್ ಖನಾಲ್ ಅವರು ಬುಧವಾರ ಮಧ್ಯಾಹ್ನ ಸಂಸತ್ತಿನಲ್ಲಿ ಮಾತನಾಡಿ, ಹಲವು ಭದ್ರತಾ ಸಿಬ್ಬಂದಿ ಮತ್ತು ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ರಸುವಾಗಧಿಯಲ್ಲಿ ಕರ್ತವ್ಯದಲ್ಲಿದ್ದ 26 ನೇಪಾಳ ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ಹಾಗೂ ತಿಮುರೆ ಮತ್ತು ಮೈಲುಂಗ್ ನಲ್ಲಿ ನಿಯೋಜಿಸಲಾಗಿದ್ದ 44 ನೇಪಾಳ ಸೇನಾ ಸಿಬ್ಬಂದಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ.
ರಸುವಾಗಧಿಯಲ್ಲಿದ್ದ ಕೆಲವು ಕಸ್ಟಮ್ಸ್ ಮತ್ತು ವಲಸೆ ಅಧಿಕಾರಿಗಳೂ ನಾಪತ್ತೆಯಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಹಲವು ನಾಗರಿಕರ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
►384 ಪ್ರಯಾಣಿಕರ ಸಂಪರ್ಕ ಸಾಧ್ಯವಾಗಿಲ್ಲ
ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ, 291 ವಿದೇಶಿ ಪ್ರಜೆಗಳು ಮತ್ತು 93 ನೇಪಾಳಿ ಪ್ರಜೆಗಳು ಸೇರಿದಂತೆ ಒಟ್ಟು 384 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಅಥವಾ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ.
ಈ ಪ್ರಾಥಮಿಕ ಪಟ್ಟಿಯಲ್ಲಿ 105 ಭಾರತೀಯ ಪ್ರಜೆಗಳ ಹೆಸರುಗಳೂ ಸೇರಿವೆ. ಆದರೆ ಈ ಮಾಹಿತಿ ಇನ್ನೂ ಪರಿಶೀಲನೆಯಲ್ಲಿದೆ ಎಂದು ಪ್ರವಾಸೋದ್ಯಮ ಮಂಡಳಿ ತಿಳಿಸಿದೆ.
ಪ್ರಯಾಣ ಸಂಸ್ಥೆಗಳು, ಮಾರ್ಗದರ್ಶಕರು, ಸ್ಥಳೀಯ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಪಟ್ಟಿಯಲ್ಲಿರುವವರ ಬಗ್ಗೆ ಮಾಹಿತಿ ಪರಿಶೀಲಿಸಲಾಗುತ್ತಿದೆ ಎಂದು ಮಂಡಳಿ ಹೇಳಿದೆ.