×
Ad

Venezuela ಭೂಕಂಪ | ಅರ್ಜೆಂಟೀನಾ ಫುಟ್‌ಬಾಲ್ ಆಟಗಾರನ ಇಡೀ ಕುಟುಂಬವೇ ನಾಪತ್ತೆ!

Update: 2026-06-27 22:18 IST

Photo Credit : viewsbangladesh.com

ಕ್ಯಾರಕಾಸ್, ಜೂ. 27: ವೆನಿಝುವೆಲಾದಲ್ಲಿ ಸಂಭವಿಸಿದ 7.2 ಹಾಗೂ 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳಿಂದ ದೇಶದ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದ ಸಾವು-ನೋವುಗಳು ಸಂಭವಿಸಿದ್ದು, ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಭೂಕಂಪದಿಂದ ತೀವ್ರ ಹಾನಿಗೊಳಗಾಗಿರುವ ಲಾ ಗ್ವಾಯಿರಾ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿನ ಪರಿಸ್ಥಿತಿ ಬಗ್ಗೆ ಕಳವಳ ಹೆಚ್ಚಾಗಿದೆ. ಪ್ರಬಲ ಕಂಪನದ ಪರಿಣಾಮ ಅನೇಕ ಕಟ್ಟಡಗಳು ಧರಾಶಾಹಿಯಾಗಿದ್ದು, ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ.

ಭೂಕಂಪ ಸಂಭವಿಸಿದ ವೇಳೆ ಐಷಾರಾಮಿ ಎಡ್ವರ್ಡ್ಸ್ ಹೋಟೆಲ್‌ ನಲ್ಲಿ ಲಿಗಾ ಮೇಯರ್‌ ನ ಸಿಬ್ಬಂದಿ ಮತ್ತು ಅವರ ಸಂಬಂಧಿಕರಿಗಾಗಿ ಔತಣಕೂಟ ಆಯೋಜಿಸಲಾಗಿತ್ತು ಎಂದು ವರದಿಯಾಗಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಆಟಗಾರರಾದ ಗಾರ್ಕಿಸ್ ಹೆರ್ನಾಂಡೆಝ್ ಹಾಗೂ ಎಲಿಝರ್ ಆಲ್ಫಾನ್ಝೋ ಅವರ ಕುಟುಂಬ ಸದಸ್ಯರೂ ಉಪಸ್ಥಿತರಿದ್ದರು ಎನ್ನಲಾಗಿದೆ.

ಈ ಮಧ್ಯೆ, ಭೂಕಂಪ ಸಂಭವಿಸಿದಾಗ ಹೋಟೆಲ್‌ನಲ್ಲಿದ್ದ ಬೇಸ್‌ಬಾಲ್ ಆಟಗಾರ ಜೆನ್ರಿ ಮೆಜಿಯಾ ಅವರು ಜೀವಂತವಾಗಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ದುರಂತದಲ್ಲಿ ಅರ್ಜೆಂಟೀನಾದ ಫುಟ್‌ಬಾಲ್ ಆಟಗಾರ ಲುಕಾಸ್ ಟ್ರೆಜೊ ಅವರ ಕುಟುಂಬ ಸದಸ್ಯರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ತಮ್ಮ ಕುಟುಂಬವನ್ನು ಪತ್ತೆಹಚ್ಚಲು ನೆರವು ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

‘ದಯವಿಟ್ಟು ಸಹಾಯ ಮಾಡಿ. ನನ್ನ ಕುಟುಂಬದವರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಅವರಿಗಾಗಿ ಪ್ರಾರ್ಥಿಸಿ. ಅವರು ಆ ಸ್ಥಳದಲ್ಲಿ ಇರಲಿಲ್ಲ ಎಂಬ ಭರವಸೆ ನನ್ನದು’ ಎಂದು ಲುಕಾಸ್ ಟ್ರೆಜೊ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.

ವೆನಿಝುವೆಲಾದಲ್ಲಿ ಅಲ್ಪಾವಧಿಯ ಅಂತರದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಿಂದ ದೇಶಾದ್ಯಂತ ಭಾರಿ ಪ್ರಮಾಣದ ಕಟ್ಟಡಗಳು ಹಾನಿಗೊಳಗಾಗಿವೆ. ಸಾವಿರಾರು ಮಂದಿ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಪ್ರಾಥಮಿಕ ಅಂಕಿಅಂಶಗಳ ಪ್ರಕಾರ, ಈವರೆಗೆ 32 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವೆನಿಝುವೆಲಾದ ಹಂಗಾಮಿ ಅಧ್ಯಕ್ಷೆ ಡೆಕ್ಲಿ ರೋಡ್ರಿಗಸ್ ಅಧಿಕೃತವಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News