×
Ad

ಇಸ್ರೇಲ್ ಜೊತೆಗಿನ ಒಪ್ಪಂದ ಹಗೆತನ ಕೊನೆಗಾಣಿಸುವ ಪ್ರಕ್ರಿಯೆ: ಲೆಬನಾನ್

Update: 2026-06-27 21:36 IST

ಸಾಂದರ್ಭಿಕ ಚಿತ್ರ | Photo Credit : magnific

ಬೈರೂತ್, ಜೂ.27: ಇಸ್ರೇಲ್ ದೇಶದೊಂದಿಗೆ ಹೊಸದಾಗಿ ಸಹಿ ಮಾಡಲಾದ, ಅಮೆರಿಕ ಮಧ್ಯಸ್ಥಿಕೆಯ ಒಪ್ಪಂದದ ಚೌಕಟ್ಟು ಯಾವುದೇ ಶಾಂತಿ ಒಪ್ಪಂದವಲ್ಲ. ಇದು ಎರಡೂ ದೇಶಗಳ ನಡುವಿನ ಹಗೆತನವನ್ನು ಕೊನೆಗಾಣಿಸುವ ಉದ್ದೇಶವನ್ನು ಹೊಂದಿದೆ ಎಂದು ಲೆಬನಾನ್‌ನ ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಶನಿವಾರ ಅರಬ್ ನ್ಯೂಸ್ ವರದಿ ಮಾಡಿದೆ.

ಶುಕ್ರವಾರ ವಾಷಿಂಗ್ಟನ್‌ನಲ್ಲಿ ಲೆಬನಾನ್ ಮತ್ತು ಇಸ್ರೇಲ್ ನಿಯೋಗಗಳು ಈ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ ಪ್ರಕಾರ, ಲೆಬನಾನ್‌ನ ಲಿಟಾನಿ ನದಿಯ ದಕ್ಷಿಣ ಭಾಗ ಮತ್ತು ಅದರ ಉತ್ತರದಲ್ಲಿರುವ ಮತ್ತೊಂದು ಪ್ರದೇಶ ಸೇರಿದಂತೆ ಎರಡು ಪ್ರಾಯೋಗಿಕ ಪ್ರದೇಶಗಳ ನಿಯಂತ್ರಣವನ್ನು ಪಡೆದುಕೊಳ್ಳಲು ಲೆಬನಾನ್ ಸೇನೆಗೆ ಇಸ್ರೇಲ್ ಮಿಲಿಟರಿ ಅನುಮತಿ ನೀಡಲಿದೆ.

"ಈ ಒಪ್ಪಂದದಿಂದಾಗಿ ಇಸ್ರೇಲ್‌ನೊಂದಿಗೆ ಸಾಮಾನ್ಯ ಬಾಂಧವ್ಯ ಹೊಂದುವ ವಿಷಯದಲ್ಲಿ ಲೆಬನಾನ್ ಹೊಂದಿರುವ ಹಳೆಯ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಲೆಬನಾನ್ ಇಂದಿಗೂ 'ಅರಬ್ ಶಾಂತಿ ಉಪಕ್ರಮ'ಕ್ಕೆ ಬದ್ಧವಾಗಿದೆ" ಎಂದು ಅಧಿಕಾರಿ ಒತ್ತಿ ಹೇಳಿದರು.

ಈ ಉಪಕ್ರಮವನ್ನು ಸೌದಿ ಅರೇಬಿಯಾ ಆರಂಭಿಸಿತ್ತು ಮತ್ತು 2002ರ ಬೈರೂತ್ ಶೃಂಗಸಭೆಯಲ್ಲಿ ಅರಬ್ ಲೀಗ್ ಇದನ್ನು ಅಂಗೀಕರಿಸಿತ್ತು. ಇದರ ಪ್ರಕಾರ, 1967ರ ಗಡಿಗಳ ಆಧಾರದ ಮೇಲೆ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆ ಮತ್ತು ಅಂತರರಾಷ್ಟ್ರೀಯ ನಿರ್ಣಯಗಳಿಗೆ ಅನುಗುಣವಾಗಿ ಫೆಲೆಸ್ತೀನ್ ನಿರಾಶ್ರಿತರ ಸಮಸ್ಯೆಗೆ ನ್ಯಾಯಯುತ ಪರಿಹಾರ ದೊರೆತರೆ ಮಾತ್ರ, ಇಸ್ರೇಲ್‌ನೊಂದಿಗೆ ಅರಬ್ ದೇಶಗಳು ಪೂರ್ಣ ಪ್ರಮಾಣದ ಸಾಮಾನ್ಯ ಬಾಂಧವ್ಯವನ್ನು ಹೊಂದಬಹುದು ಎಂಬ ಷರತ್ತನ್ನು ವಿಧಿಸಲಾಗಿದೆ.

ಈ ಮಧ್ಯೆ, ಇಸ್ರೇಲ್ ಮತ್ತು ಲೆಬನಾನ್ ನಡುವಿನ ಒಪ್ಪಂದವನ್ನು ತಿರಸ್ಕರಿಸುವುದಾಗಿ ಹಿಜ್ಬುಲ್ಲಾ ನಾಯಕ ನಯಿಮ್ ಖಾಸೆಮ್ ಹೇಳಿದ್ದಾರೆ. ಈ ಒಪ್ಪಂದವು "ಇಸ್ರೇಲ್‌ಗೆ ಶರಣಾಗುವ ಪ್ರಕ್ರಿಯೆ" ಎಂದು ಅವರು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News