×
Ad

Venezuela ಭೂಕಂಪ | ಪುತ್ರಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಫುಟ್‌ಬಾಲ್ ಆಟಗಾರನ ಪತ್ನಿ ಮೃತ್ಯು

Update: 2026-06-28 14:22 IST

Photo: hectorbello_02/Instagram

ಕ್ಯಾರಕಾಸ್: ದಕ್ಷಿಣ ಅಮೆರಿಕದ ವೆನಿಝುವೆಲಾದಲ್ಲಿ ಈ ವಾರದ ಆರಂಭದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ವೇಳೆ ತಮ್ಮ ಒಂದು ವರ್ಷದ ಪುತ್ರಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ವೆನಿಝುವೆಲಾದ ಖ್ಯಾತ ಫುಟ್‌ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ ಅವರ ಪತ್ನಿ ಆ್ಯಂಡ್ರಿಯಾ ಬೆಲ್ಲೊ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಜೂನ್ 24ರಂದು ಸಂಭವಿಸಿದ ಪ್ರಬಲ ಅವಳಿ ಭೂಕಂಪದ ಸಂದರ್ಭದಲ್ಲಿ ತಮ್ಮ ಪತ್ನಿ ಆ್ಯಂಡ್ರಿಯಾ ಬೆಲ್ಲೊ ಅವರು ಒಂದು ವರ್ಷದ ಪುತ್ರಿ ಅಲಾನಾಳನ್ನು ರಕ್ಷಿಸಲು ಮುಂದಾಗಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ವೆನಿಝುವೆಲಾದ ಮಾರಿಟಿಮೊ ಡಿ ಲಾ ಗ್ವೈರಾ ಕ್ಲಬ್‌ನ ಖ್ಯಾತ ಆಟಗಾರ ಹೆಕ್ಟರ್ ಬೆಲ್ಲೊ ಅವರು ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಜೂನ್ 26ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಹೆಕ್ಟರ್ ಬೆಲ್ಲೊ, "ನೀನು ಯಾವಾಗಲೂ ನಮ್ಮ ಅಚ್ಚುಮೆಚ್ಚಿನ ನಾಯಕಿಯಾಗಿರುತ್ತೀಯೆ, ಮಾಮಿ. ನೀನು ಎಷ್ಟು ಅದ್ಭುತ ವ್ಯಕ್ತಿಯಾಗಿದ್ದೆ ಮತ್ತು ನಮ್ಮ ಪುತ್ರಿಯನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂಬುದನ್ನು ಆಕೆ ಎಂದಿಗೂ ಮರೆಯದಂತೆ ನಾನು ನೋಡಿಕೊಳ್ಳುತ್ತೇನೆ" ಎಂದು ಬರೆದಿದ್ದಾರೆ.

"ನೀನು ಆಕೆಯನ್ನು ಹೇಗೆ ರಕ್ಷಿಸಿದೆ, ನಮ್ಮ ಮಗಳಿಗಾಗಿ ನಿನ್ನ ಜೀವವನ್ನೇ ಹೇಗೆ ತ್ಯಾಗ ಮಾಡಿದೆ, ನೀನು ಎಂತಹ ವೀರ ಮಹಿಳೆಯಾಗಿದ್ದೆ ಮತ್ತು ಕೊನೆಯ ಕ್ಷಣದವರೆಗೂ ಆಕೆಯನ್ನು ಅನಾಥಳಾಗದಂತೆ ಹೇಗೆ ಕಾಪಾಡಿದೆ ಎಂಬುದನ್ನು ನಾನು ಆಕೆಗೆ ಹೇಳುತ್ತೇನೆ" ಎಂದೂ ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಹೆಕ್ಟರ್ ಬೆಲ್ಲೊ ಮತ್ತು ಆ್ಯಂಡ್ರಿಯಾ ಬೆಲ್ಲೊ ದಂಪತಿ ವಾಸಿಸುತ್ತಿದ್ದ ಕಟ್ಟಡವು ಭೂಕಂಪದ ಪರಿಣಾಮ ಕುಸಿದು ಬಿದ್ದಿದ್ದು, ಬಳಿಕ ಅವಶೇಷಗಳಡಿ ಆ್ಯಂಡ್ರಿಯಾ ಬೆಲ್ಲೊ ಅವರ ಮೃತದೇಹ ಪತ್ತೆಯಾಗಿದೆ ಎಂದು ವೆನಿಝುವೆಲಾದ ಫುಟ್‌ಬಾಲ್ ಪತ್ರಿಕಾ ಮತ್ತು ಪ್ರಚಾರ ಸಂಸ್ಥೆ 'ಕ್ಯೂಮನ್ ಡಿ ಕ್ಯಾಂಪಿಯೋನ್ಸ್' ತಿಳಿಸಿದೆ.

ಈ ದುರಂತದಲ್ಲಿ ಒಂದು ವರ್ಷದ ಮಗು ಅಲಾನಾ ಅದೃಷ್ಟವಶಾತ್ ಬದುಕುಳಿದಿದ್ದು, ಆಕೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News