×
Ad

ಅಫ್ಘಾನಿಸ್ತಾನದಲ್ಲಿ 6.2 ತೀವ್ರತೆಯ ಭೂಕಂಪ; ಪಾಕಿಸ್ತಾನ, ಜಮ್ಮು–ಕಾಶ್ಮೀರ, ದಿಲ್ಲಿ–ಎನ್‌ಸಿಆರ್‌ನಲ್ಲಿ ಕಂಪನ

Update: 2026-06-27 20:13 IST

Photo Credit ; X 

ಕಾಬೂಲ್/ಹೊಸದಿಲ್ಲಿ, ಜೂ.27: ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಶನಿವಾರ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅದರ ಕಂಪನಗಳು ಪಾಕಿಸ್ತಾನ, ಜಮ್ಮು ಮತ್ತು ಕಾಶ್ಮೀರ ಹಾಗೂ ದಿಲ್ಲಿ –ಎನ್‌ಸಿಆರ್ ಪ್ರದೇಶಗಳಲ್ಲಿಯೂ ಅನುಭವವಾಗಿವೆ. ಭೂಕಂಪದ ಅನುಭವದ ಕುರಿತು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (ಎನ್‌ಸಿಎಸ್‌) ಪ್ರಕಾರ, ಭೂಕಂಪವು ಭೂಮಿಯ ಮೇಲ್ಮೈಯಿಂದ 215 ಕಿ.ಮೀ ಆಳದಲ್ಲಿ ಸಂಭವಿಸಿದೆ. ಆಳದಲ್ಲಿ ಸಂಭವಿಸಿದ ಕಾರಣದಿಂದಾಗಿ ಅದರ ಕಂಪನಗಳು ವಿಶಾಲ ಪ್ರದೇಶಗಳಲ್ಲಿ ಅನುಭವವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಕಳೆದ 24 ಗಂಟೆಗಳ ಅವಧಿಯಲ್ಲಿ ಪಾಕಿಸ್ತಾನದಲ್ಲಿ ನಾಲ್ಕು ಭೂಕಂಪಗಳು ದಾಖಲಾಗಿವೆ ಎಂದು ಯುರೋಪಿಯನ್–ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್‌ಸಿ) ತಿಳಿಸಿದೆ. ಅವುಗಳಲ್ಲಿ ಅತ್ಯಂತ ಪ್ರಬಲವಾದ 5.5 ತೀವ್ರತೆಯ ಭೂಕಂಪವು ಶನಿವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 8.36ಕ್ಕೆ ಸಂಭವಿಸಿದ್ದು, ಅದರ ಕೇಂದ್ರಬಿಂದು ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶದಲ್ಲಿ 30.271 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 69.733 ಡಿಗ್ರಿ ಪೂರ್ವ ರೇಖಾಂಶಗಳ ಸಮೀಪದಲ್ಲಿತ್ತು. ಈ ಭೂಕಂಪವು 40 ಕಿ.ಮೀ ಆಳದಲ್ಲಿ ದಾಖಲಾಗಿದೆ.

ಇದಕ್ಕೂ ಮೊದಲು ಶನಿವಾರ ಬೆಳಿಗ್ಗೆ 6.15ಕ್ಕೆ 4.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದು, ಅದು 10 ಕಿ.ಮೀ ಆಳದಲ್ಲಿ ದಾಖಲಾಗಿದೆ. ಹಾಗೆಯೇ ಶುಕ್ರವಾರ ಬಲೂಚಿಸ್ತಾನದಲ್ಲಿ ಬೆಳಿಗ್ಗೆ 10.55ಕ್ಕೆ 4.5 ತೀವ್ರತೆಯ ಭೂಕಂಪ ಹಾಗೂ ಬೆಳಿಗ್ಗೆ 11.27ಕ್ಕೆ 4.7 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿವೆ. ಈ ಎರಡೂ ಭೂಕಂಪಗಳು 10 ಕಿ.ಮೀ ಆಳದಲ್ಲಿ ಸಂಭವಿಸಿವೆ ಎಂದು ಇಎಂಎಸ್‌ಸಿ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ಸಂಭವಿಸಿರುವ ಈ ಭೂಕಂಪವು, ಜಪಾನ್‌ನ ಪೂರ್ವ ಹೊನ್ಶು ದ್ವೀಪದ ಸಮೀಪ ಶುಕ್ರವಾರ ಸಂಭವಿಸಿದ್ದ 5.8 ತೀವ್ರತೆಯ ಭೂಕಂಪದ ಒಂದು ದಿನದ ಬಳಿಕ ದಾಖಲಾಗಿದೆ. ಜಪಾನ್‌ನ ಭೂಕಂಪವು ಸುಮಾರು 20 ಕಿ.ಮೀ (12.43 ಮೈಲಿ) ಆಳದಲ್ಲಿ ಸಂಭವಿಸಿತ್ತು ಎಂದು ಇಎಂಎಸ್‌ಸಿ ವರದಿ ತಿಳಿಸಿದೆ.

ಅಫ್ಘಾನಿಸ್ತಾನದ ಭೂಕಂಪದಿಂದ ಸಂಭವಿಸಿರುವ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ಕುರಿತು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News