ಅಹ್ಮದ್ ಟಿಬಿ | Photo Credit : aljazeera.com

ಫೆಲೆಸ್ತೀನಿಯನ್ನರ ಹಕ್ಕುಗಳಿಗಾಗಿ ದಶಕಗಳಿಂದ ಹೋರಾಡುತ್ತಾ ಬಂದಿರುವ ಅರಬ್ ರಾಜಕಾರಣಿ ಅಹ್ಮದ್ ಟಿಬಿ ಇಸ್ರೇಲ್ ಸಂಸತ್ತಾದ ನೆಸೆಟ್ ನ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ವೈದ್ಯಕೀಯ ಶಿಕ್ಷಣ ಪಡೆದಿದ್ದರೂ ರಾಜಕೀಯವನ್ನೇ ತಮ್ಮ ಹೋರಾಟದ ಕ್ಷೇತ್ರವಾಗಿಸಿಕೊಂಡಿರುವ ಅವರು, ಇಸ್ರೇಲ್ ಸರ್ಕಾರದ ನೀತಿಗಳನ್ನು ಬಹಿರಂಗವಾಗಿ ಪ್ರಶ್ನಿಸುತ್ತಾ ಗಮನ ಸೆಳೆದವರು.

ಫೆಲೆಸ್ತೀನ್ ನಾಯಕ ಯಾಸರ್ ಅರಾಫತ್ ಅವರ ರಾಜಕೀಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಟಿಬಿ, ಸಂಸತ್ತಿನೊಳಗೂ ಹೊರಗೂ ಹಲವು ಬಾರಿ ತಮ್ಮ ಪ್ರತಿಭಟನೆಯ ಮೂಲಕ ಗಮನ ಸೆಳೆದಿದ್ದಾರೆ.

'ಅರಬ್ ಮೂವ್ಮೆಂಟ್ ಫಾರ್ ರಿನ್ಯೂವಲ್' (ತಾಲ್) ಪಕ್ಷದ ಅಧ್ಯಕ್ಷರಾಗಿರುವ ಟಿಬಿ, ತಮ್ಮ ಆಯ್ಕೆಯನ್ನು ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಸರ್ಕಾರವನ್ನು ಮುನ್ನಡೆಸಿದ ಅಥವಾ ಅದರ ಭಾಗವಾಗಿದ್ದ ತೀವ್ರ ಬಲಪಂಥೀಯ ಪಕ್ಷಗಳ ವಿರುದ್ಧದ ಗೆಲುವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

'ಜಾಯಿಂಟ್ ಲಿಸ್ಟ್' ಸಾಧಿಸಿದ ನ್ಯಾಯಯುತ ಗೆಲುವು ಇದಾಗಿದೆ. ಈ ಮೈತ್ರಿಕೂಟ 11 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಆಯ್ಕೆಯನ್ನು ತಡೆಯಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷ ಮತ್ತು ರಾಷ್ಟ್ರೀಯ ರಕ್ಷಣಾ ಸಚಿವ ಇಟಮಾರ್ ಬೆನ್-ಗ್ವಿರ್ ಪ್ರಯತ್ನಿಸಿದ್ದರು. ಆದರೆ, ಅವರ ಪ್ರಯತ್ನ ವಿಫಲವಾಯಿತು ಎಂದು ಟಿಬಿ ಅಭಿಪ್ರಾಯಪಟ್ಟಿದ್ದಾರೆ.

►ವೈದ್ಯಕೀಯ ಶಿಕ್ಷಣ, ಅರಾಫತ್ ಜತೆ ನಂಟು

1958ರ ಡಿ. 19ರಂದು ತೈಬೆ ನಗರದಲ್ಲಿ ಜನಿಸಿದ ಅಹ್ಮದ್ ಟಿಬಿ, 1948ರ ನಕ್ಬಾ ಸಂದರ್ಭದಲ್ಲಿ ಜಾಫಾದಿಂದ ಸ್ಥಳಾಂತರಗೊಂಡ ಕುಟುಂಬಕ್ಕೆ ಸೇರಿದವರು. 1983ರಲ್ಲಿ ಜೆರುಸಲೆಮ್ ನ ಹೀಬ್ರೂ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿಯನ್ನು ಪಡೆದರು. ಆದರೆ, ವೈದ್ಯಕೀಯ ವೃತ್ತಿಗಿಂತ ರಾಜಕೀಯ ಚಟುವಟಿಕೆಗಳಲ್ಲೇ ಹೆಚ್ಚು ಸಕ್ರಿಯರಾದರು.

1984ರಲ್ಲಿ ಟುನೀಶಿಯಾದ ಟುನಿಸ್ ನಲ್ಲಿ ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಷನ್ (PLO) ನಾಯಕ ಯಾಸರ್ ಅರಾಫತ್ ಅವರನ್ನು ಭೇಟಿಯಾದರು. ಆ ಸಮಯದಲ್ಲಿ PLO ಅನ್ನು ಇಸ್ರೇಲಿನ ಕಾನೂನುಗಳು ಬಂಡುಕೋರ ಸಂಘಟನೆ ಎಂದು ವರ್ಗೀಕರಿಸಿದ್ದವು. ಇಸ್ರೇಲ್ಗೆ ಮರಳಿದ ಬಳಿಕ ಪೊಲೀಸರು ವಿಚಾರಣೆ ನಡೆಸಿದರೂ ಅವರ ವಿರುದ್ಧ ಯಾವುದೇ ಅಧಿಕೃತ ಆರೋಪ ಹೊರಿಸಲಿಲ್ಲ.

1993ರಿಂದ 1999ರವರೆಗೆ ಅರಾಫತ್ ಅವರ ರಾಜಕೀಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ ಟಿಬಿ, 1998ರಲ್ಲಿ ಅಮೆರಿಕದ ಮೇರಿಲ್ಯಾಂಡ್ ನಲ್ಲಿ ನಡೆದ ವೈ ರಿವರ್ ಶೃಂಗಸಭೆಯಲ್ಲಿ ಫೆಲೆಸ್ತೀನಿಯನ್ ನಿಯೋಗದ ವಕ್ತಾರರಾಗಿದ್ದರು.

►ಫೆಲೆಸ್ತೀನಿಯನ್ನರ ಹಕ್ಕುಗಳ ಪ್ರತಿಪಾದನೆ

1996ರಲ್ಲಿ 'ಅರಬ್ ಮೂವ್ಮೆಂಟ್ ಫಾರ್ ರಿನ್ಯೂವಲ್' (ತಾಲ್) ಪಕ್ಷವನ್ನು ಸ್ಥಾಪಿಸಿದ ಟಿಬಿ, 1999ರಲ್ಲಿ ಮೊದಲ ಬಾರಿಗೆ ಇಸ್ರೇಲ್ ಸಂಸತ್ತಿಗೆ ಆಯ್ಕೆಯಾದರು. ತಮ್ಮನ್ನು 'ಇಸ್ರೇಲಿನ ಪೌರತ್ವ ಹೊಂದಿರುವ ಅರಬ್ ಫೆಲೆಸ್ತೀನಿಯನ್' ಎಂದು ಗುರುತಿಸಿಕೊಳ್ಳುವ ಅವರು, ಇಸ್ರೇಲ್ ಮತ್ತು ಫೆಲೆಸ್ತೀನ್ ಎಂಬ ಎರಡು ಪ್ರತ್ಯೇಕ ರಾಷ್ಟ್ರಗಳ ಸ್ಥಾಪನೆಯನ್ನು ಪ್ರತಿಪಾದಿಸುತ್ತಾರೆ. ತಮ್ಮ ಮೂಲ ನೆಲದಿಂದ ಸ್ಥಳಾಂತರಗೊಂಡ ಫೆಲೆಸ್ತೀನಿಯನ್ ನಿರಾಶ್ರಿತರಿಗೆ ಮರಳುವ ಹಕ್ಕು ನೀಡಬೇಕೆಂಬುದು ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದು.

ಇಸ್ರೇಲ್ ತನ್ನನ್ನು 'ಯಹೂದಿ ರಾಷ್ಟ್ರ' ಎಂದು ಗುರುತಿಸಿಕೊಳ್ಳುವುದನ್ನು ಅವರು ತೀವ್ರವಾಗಿ ಪ್ರಶ್ನಿಸುತ್ತಾರೆ. ಎಲ್ಲ ನಾಗರಿಕರಿಗೂ ಸಮಾನ ಹಕ್ಕುಗಳಿರುವ ರಾಷ್ಟ್ರವಾಗಬೇಕು ಎಂಬ ನಿಲುವನ್ನು ಅವರು ಪ್ರತಿಪಾದಿಸುತ್ತಾರೆ.

►ಸಂಸತ್ತಿನಲ್ಲೇ ಅಝಾನ್ ಮೊಳಗಿಸಿ ಪ್ರತಿಭಟನೆ

ಇಸ್ರೇಲ್ ಸರ್ಕಾರದ ನೀತಿಗಳನ್ನು ವಿರೋಧಿಸುತ್ತಾ ಬಂದಿರುವ ಟಿಬಿ, ಹಲವು ಸಂದರ್ಭಗಳಲ್ಲಿ ನೇರ ಪ್ರತಿಭಟನೆಗಳಿಗೂ ಇಳಿದಿದ್ದಾರೆ.

2000ರ ಸೆಪ್ಟೆಂಬರ್ ನಲ್ಲಿ ಎರಡನೇ ಇಂತಿಫಾದಾ ಸಂದರ್ಭದಲ್ಲಿ ಅಲ್-ಅಕ್ಸಾ ಮಸೀದಿ ಆವರಣಕ್ಕೆ ಏರಿಯಲ್ ಶರೋನ್ ಭೇಟಿ ನೀಡಿದಾಗ ಅವರನ್ನು ಎದುರಿಸಲು ಮುಂದಾಗಿದ್ದ ಟಿಬಿ ಅವರ ಬಲಗೈ ಮುರಿದಿತ್ತು. ಏರಿಯಲ್ ಶರೋನ್ ಆ ಘಟನೆ ನಡೆದ ಮುಂದಿನ ವರ್ಷ ಇಸ್ರೇಲ್ ಪ್ರಧಾನಿಯಾದರು.

2002ರಲ್ಲಿ ಜೆನಿನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಿಬಿರದೊಳಗೆ ಪ್ರವೇಶಿಸಿ ಸೈನಿಕರನ್ನು ಎದುರಿಸಿದ ಹಿನ್ನೆಲೆಯಲ್ಲಿ ಇಸ್ರೇಲ್ ಸರ್ಕಾರ ಅವರ ಸಂಸದೀಯ ರಕ್ಷಣೆಯನ್ನು ಹಿಂಪಡೆದುಕೊಂಡಿತ್ತು.

2016ರಲ್ಲಿ ಜೆರುಸಲೆಮ್ ಮತ್ತು ಆಕ್ರಮಿತ ಫೆಲೆಸ್ತೀನಿನ ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವ ಉದ್ದೇಶದ ಮಸೂದೆಯನ್ನು ವಿರೋಧಿಸಿ, ನೆಸೆಟ್ ನ ಅಧಿವೇಶನ ನಡೆಯುತ್ತಿದ್ದ ಕೊಠಡಿಯೊಳಗೇ ಪ್ರಾರ್ಥನೆ ಕರೆಯಾದ ಅಝಾನ್ ಮೊಳಗಿಸಿ ಪ್ರತಿಭಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇರ್ಷಾದ್ ಎಂ. ವೇಣೂರು , ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.