USA | ವರ್ಜೀನಿಯಾದಲ್ಲಿ ಪತ್ನಿಯ ಕೊಲೆ ಪ್ರಕರಣ: ಮೃತದೇಹ ತುಂಡರಿಸಿ ಕಸದ ತೊಟ್ಟಿಗೆ ಎಸೆದಿದ್ದ ಭಾರತ ಮೂಲದ ನರೇಶ್ ಭಟ್ ದೋಷಿ ಎಂದ ಕೋರ್ಟ್
ಮೃತದೇಹ ವಿಲೇವಾರಿ ಮಾಡಿದ್ದಾಗಿ ನ್ಯಾಯಾಲಯದಲ್ಲಿ ಒಪ್ಪಿಗೆ; ಕೊಲೆ ಮಾಡಿದ್ದನ್ನು ನಿರಾಕರಿಸಿದ ಆರೋಪಿ
Photo credit : timesofindia
ವರ್ಜೀನಿಯಾ: ಅಮೆರಿಕದ ವರ್ಜೀನಿಯಾದಲ್ಲಿ ಪತ್ನಿಯನ್ನು ಹತ್ಯೆ ಮಾಡಿ, ಮೃತದೇಹವನ್ನು ತುಂಡರಿಸಿ ಕಸದ ತೊಟ್ಟಿಗೆ ಎಸೆದ ಪ್ರಕರಣದಲ್ಲಿ ಭಾರತ ಮೂಲದ ನರೇಶ್ ಭಟ್ ದೋಷಿ ಎಂದು ಸಾಬೀತಾಗಿದೆ. 28 ವರ್ಷದ ನರ್ಸ್ ಮಮತಾ ಕಫ್ಲೆ ಭಟ್ ನಾಪತ್ತೆಯಾಗಿ ಎರಡು ವರ್ಷಗಳಿಗೂ ಹೆಚ್ಚು ಸಮಯ ಕಳೆದ ಬಳಿಕ ಅವರ ಪತಿ ನರೇಶ್ ಭಟ್ ವಿರುದ್ಧದ ಪ್ರಕರಣದಲ್ಲಿ ತೀರ್ಪು ಪ್ರಕಟವಾಗಿದೆ. ಆದರೆ, ಮಮತಾ ಅವರ ಮೃತದೇಹ ಈವರೆಗೂ ಪತ್ತೆಯಾಗಿಲ್ಲ ಎಂದು Times of India ವರದಿ ಮಾಡಿದೆ.
ಮಂಗಳವಾರ ನಡೆದ ವಿಚಾರಣೆಯಲ್ಲಿ 39 ವರ್ಷದ ನರೇಶ್ ಭಟ್ ನನ್ನು ಪ್ರಥಮ ದರ್ಜೆಯ ಕೊಲೆ ಪ್ರಕರಣದಲ್ಲಿ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ. ಆರು ವಾರಗಳ ಕಾಲ ನಡೆದ ವಿಚಾರಣೆಯ ಬಳಿಕ, ಪತ್ನಿಯ ಮೃತದೇಹವನ್ನು ಮುಚ್ಚಿಟ್ಟಿದ್ದ ಮತ್ತು ದೇಹದ ಭಾಗಗಳನ್ನು ವಿಲೇವಾರಿ ಮಾಡಿ ಮೃತದೇಹಕ್ಕೆ ಅವಮಾನ ಮಾಡಿದ ಆರೋಪಗಳೂ ಸಾಬೀತಾಗಿವೆ ಎಂದು CNN ವರದಿ ಮಾಡಿದೆ.
ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯಲ್ಲಿ ನರೇಶ್ ಭಟ್, ಪತ್ನಿಯ ಮೃತದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆದರೆ, ತಾನೇ ಆಕೆಯನ್ನು ಹತ್ಯೆ ಮಾಡಿದ್ದನ್ನು ನಿರಾಕರಿಸಿದ್ದಾನೆ. ಮಮತಾ ಅವರು ಮಲಗುವ ಕೋಣೆಯಲ್ಲಿ ರಕ್ತ ಮತ್ತು ವಾಂತಿಯ ನಡುವೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾಗಿ ಹಾಗೂ ಆಕೆಯನ್ನು ಎಚ್ಚರಿಸಲು ಮಾಡಿದ ಪ್ರಯತ್ನಗಳು ವಿಫಲವಾದಾಗ ಗಾಬರಿಗೊಂಡಿದ್ದಾಗಿ ಹೇಳಿದ್ದಾನೆ.
ತುರ್ತು ಸೇವೆಗಳಿಗೆ ಕರೆ ಮಾಡುವ ಬದಲು ಪತ್ನಿಯ ಮೃತದೇಹವನ್ನು ವಿಲೇವಾರಿ ಮಾಡಲು ನಿರ್ಧರಿಸಿದ್ದಾಗಿ ಭಟ್ ತಿಳಿಸಿದ್ದಾನೆ. ನರೇಶ್ ಆರಂಭದಲ್ಲಿ ಮೃತದೇಹದ ಭಾಗಗಳನ್ನು ಪೊಟೊಮ್ಯಾಕ್ ನದಿಗೆ ಎಸೆಯಲು ಯೋಚಿಸಿದ್ದನಂತೆ. ಬಳಿಕ ಅವುಗಳನ್ನು ಕಸದ ತೊಟ್ಟಿಗೆ ಹಾಕಲು ಪ್ರಯತ್ನಿಸಿದಾಗ ಅಲ್ಲಿ ಅದು ಹೊಂದಿಕೆಯಾಗಲಿಲ್ಲ. ಹೀಗಾಗಿ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ, ಹಲವು ಕಸದ ಚೀಲಗಳಲ್ಲಿ ತುಂಬಿ, ತಾನು ಹಿಂದೆ ವಾಸಿಸುತ್ತಿದ್ದ ಅಪಾರ್ಟ್ಮೆಂಟ್ ಸಂಕೀರ್ಣದ ಕಸ ವಿಲೇವಾರಿ ಯಂತ್ರಕ್ಕೆ ಎಸೆದಿದ್ದಾಗಿ ಭಟ್ ಒಪ್ಪಿಕೊಂಡಿದ್ದಾನೆ.
ಈ ಪ್ರಕ್ರಿಯೆಯ ಕೆಲವು ಹಂತಗಳಲ್ಲಿ ದಂಪತಿಯ ಆಗ 11 ತಿಂಗಳಾಗಿದ್ದ ಮಗುವನ್ನೂ ತನ್ನೊಂದಿಗೆ ಕರೆದೊಯ್ದಿದ್ದಾಗಿ ನರೇಶ್ ಹೇಳಿದ್ದಾನೆ. "ನಾನು ಏಕೆ ಹಾಗೆ ಮಾಡಲಿಲ್ಲ ಎಂದು ನನಗೆ ಗೊತ್ತಿಲ್ಲ," ಎಂದು ನ್ಯಾಯಾಲಯದಲ್ಲಿ ಹೇಳಿದ ಭಟ್, 911 ತುರ್ತು ಸಹಾಯವಾಣಿಗೆ ಕರೆ ಮಾಡದಿರುವ ಕುರಿತು ಪ್ರಶ್ನಿಸಿದಾಗ, "ನಾನು ಕರೆ ಮಾಡಲು ಪ್ರಯತ್ನಿಸಿದೆ. ನನಗೆ ತುಂಬಾ ಭಯವಾಗಿತ್ತು. ಏನಾಯಿತು ಎಂಬುದು ನನಗೆ ತಿಳಿಯುತ್ತಿಲ್ಲ. ಯಾವುದೋ ಒಂದು ಶಕ್ತಿ ನನ್ನನ್ನು ಆವರಿಸಿಕೊಂಡಂತಾಯಿತು. ನಾನು ತೀವ್ರ ಆತಂಕಕ್ಕೆ ಒಳಗಾಗಿದ್ದೆ," ಎಂದು ಪ್ರತಿಕ್ರಿಯಿಸಿದ್ದಾನೆ.
ಆದರೆ, ನರೇಶ್ ಭಟ್ ನ ಈ ಹೇಳಿಕೆ ಈ ಹಿಂದೆ ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಗಳಿಗೆ ವಿರುದ್ಧವಾಗಿದೆ. ಪತ್ನಿಗೆ ಏನಾಯಿತು ಎಂಬುದು ತನಗೆ ತಿಳಿದಿಲ್ಲ ಎಂದು ಹೇಳಿದ್ದ ಆತ, ಮಮತಾ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವ ಕೆಲವು ದಿನಗಳ ಮೊದಲು ಆಕೆಯನ್ನು ಊಟದ ಮೇಜಿನ ಬಳಿ ಕೊನೆಯದಾಗಿ ನೋಡಿದ್ದಾಗಿ ತಿಳಿಸಿದ್ದನು.
ಪೊಲೀಸರು ಮತ್ತು ಆಸ್ಪತ್ರೆಯ ಮೂಲಗಳ ಪ್ರಕಾರ, ಮಮತಾ ಅವರನ್ನು ಕೊನೆಯದಾಗಿ 2024ರ ಜುಲೈ 27ರಂದು ಮನಸ್ಸಾಸಸ್ ನ ಯುವಿಎ ಹೆಲ್ತ್ ಪ್ರಿನ್ಸ್ ವಿಲಿಯಂ ಮೆಡಿಕಲ್ ಸೆಂಟರ್ ನಲ್ಲಿ ನೋಡಲಾಗಿತ್ತು. ಅವರು ಇದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಮರುದಿನ ಅವರ ಸ್ನೇಹಿತರೊಬ್ಬರು ದೂರವಾಣಿ ಮೂಲಕ ಮಾತನಾಡಿದ್ದರು. ಅಲ್ಲದೆ, ಮಮತಾ ಅವರು ತಮ್ಮ ಮತ್ತು ಪುಟ್ಟ ಮಗಳಿರುವ ವೀಡಿಯೋವೊಂದನ್ನು ಟಿಕ್ಟಾಕ್ ನಲ್ಲಿ ಹಂಚಿಕೊಂಡಿದ್ದರು ಎಂದು CNNನ ಅಂಗಸಂಸ್ಥೆ WJLA ವರದಿ ಮಾಡಿದೆ.
ಮಮತಾ ನಾಪತ್ತೆಯಾದ ಬಳಿಕ ಅವರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಆಕೆ ಎಲ್ಲಿದ್ದಾರೆ ಎಂಬ ಬಗ್ಗೆ ಕುಟುಂಬದವರು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಮಗಳ ಮೊದಲ ಹುಟ್ಟುಹಬ್ಬ ಸಮೀಪಿಸುತ್ತಿದ್ದುದರಿಂದ ಕುಟುಂಬದ ಆತಂಕ ಮತ್ತಷ್ಟು ಹೆಚ್ಚಾಗಿತ್ತು.
ತೀರ್ಪು ಪ್ರಕಟವಾದ ಬಳಿಕ ಪ್ರತಿಕ್ರಿಯಿಸಿದ ಪ್ರಿನ್ಸ್ ವಿಲಿಯಂ ಕೌಂಟಿ ಹಾಗೂ ಮನಸ್ಸಾಸಸ್ ಮತ್ತು ಮನಸ್ಸಾಸಸ್ ಪಾರ್ಕ್ ನಗರಗಳ ಸರ್ಕಾರಿ ಅಭಿಯೋಜಕಿ ಆಮಿ ಆಶ್ವರ್ತ್, ಈ ತೀರ್ಪು ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
"ಈ ತೀರ್ಪು ಮಮತಾ ಕಫ್ಲೆ ಭಟ್ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಅವರ ಜೀವವನ್ನು ದುರಂತ ರೀತಿಯಲ್ಲಿ ಕಸಿದುಕೊಳ್ಳಲಾಗಿದೆ. ಕಳೆದ ಎರಡು ವರ್ಷಗಳಿಂದ ಅವರ ಕುಟುಂಬವು ಊಹಿಸಲೂ ಸಾಧ್ಯವಾಗದ ನೋವು ಮತ್ತು ಅನಿಶ್ಚಿತತೆಯನ್ನು ಅನುಭವಿಸಿದೆ," ಎಂದು ಆಶ್ವರ್ತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಮತಾ ಅವರ ಜೀವನಕ್ಕೆ ಮಹತ್ವವಿತ್ತು ಮತ್ತು ಅವರ ಸಾವಿಗೆ ಕಾರಣರಾದ ವ್ಯಕ್ತಿಯನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂಬ ಅರಿವು ಕುಟುಂಬದವರು ಮುಂದಿನ ಜೀವನವನ್ನು ಮುಂದುವರಿಸಲು ನೆರವಾಗಲಿದೆ ಎಂದು ಅವರು ಆಶಿಸಿದ್ದಾರೆ.
ಪ್ರಥಮ ದರ್ಜೆಯ ಕೊಲೆ ಪ್ರಕರಣದಲ್ಲಿ ನರೇಶ್ ಭಟ್ ಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಇದರ ಜೊತೆಗೆ, ಪತ್ನಿಯ ಮೃತದೇಹವನ್ನು ವಿಲೇವಾರಿ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ತಲಾ ಐದು ವರ್ಷಗಳಂತೆ ಒಟ್ಟು 10 ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆಯನ್ನೂ ಆತ ಅನುಭವಿಸಲಿದ್ದಾನೆ. ನರೇಶ್ ಗೆ ಶಿಕ್ಷೆ ಪ್ರಕಟಿಸುವ ವಿಚಾರಣೆ ಮಾರ್ಚ್ 12ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.