ಮ್ಯಾನ್ಮಾರ್ ಬೌದ್ಧ ಮಠದ ಮೇಲೆ ವೈಮಾನಿಕ ದಾಳಿ : 14 ಜನರು ಮೃತ್ಯು
Update: 2026-08-21 21:47 IST
Photo Credit : AP
ಯಾಂಗಾನ್: ಶುಕ್ರವಾರ ಮ್ಯಾನ್ಮಾರ್‌ನ ಸಗೈಂಗ್ ಪ್ರದೇಶದ ಬೌದ್ಧ ಮಠದ ಮೇಲೆ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯಲ್ಲಿ 14 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಮ್ಯಾಂಡಲೇ ನಗರದಿಂದ ಸುಮಾರು 75 ಕಿಲೋಮೀಟರ್ ಪಶ್ಚಿಮಕ್ಕಿರುವ ಮ್ಯಾಂಗ್ ಟೌನ್‍ಶಿಪ್‍ನ ಸ್ವಯಿಲ್ ಲೇವೊ ಗ್ರಾಮದ ಬೌದ್ಧ ಮಠದ ಆವರಣದಲ್ಲಿ ಯುದ್ಧ ವಿಮಾನವೊಂದು ಬಾಂಬ್ ಹಾಕಿದಾಗ ಮೂವರು ಮಹಿಳೆಯರು ಸೇರಿದಂತೆ 14 ಜನರು ಮೃತಪಟ್ಟಿದ್ದು, 20 ಜನರು ಗಾಯಗೊಂಡಿದ್ದಾರೆ.
15 ನಿಮಿಷಗಳ ಬಳಿಕ ನಡೆದ ಎರಡನೇ ಬಾಂಬ್ ದಾಳಿಯಲ್ಲಿ ಮಠದ ಬಳಿಯಿದ್ದ ಮನೆಯೊಂದಕ್ಕೆ ಹಾನಿಯಾಗಿದೆ. ವಾರದ ಧ್ಯಾನ ಶಿಬಿರದಲ್ಲಿದ್ದ 100ಕ್ಕೂ ಹೆಚ್ಚು ಜನರು ಆ ಸಮಯದಲ್ಲಿ ಅಲ್ಲಿದ್ದರು ಎಂದು ವರದಿ ತಿಳಿಸಿದೆ.