West Bank ನಲ್ಲಿ ಇಸ್ರೇಲ್ ವಸಾಹತು ಯೋಜನೆಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಖಂಡನೆ

E1 ಪ್ರದೇಶದಲ್ಲಿ 1,234 ಮನೆಗಳ ನಿರ್ಮಾಣಕ್ಕೆ ಟೆಂಡರ್; ಎರಡು ದೇಶ ಪರಿಹಾರಕ್ಕೆ ಹಿನ್ನಡೆ ಸಾಧ್ಯತೆ

Update: 2026-08-21 11:39 IST

Photo |bbc

ಹೊಸದಿಲ್ಲಿ: ಆಕ್ರಮಿತ ವೆಸ್ಟ್ ಬ್ಯಾಂಕ್‌ ನ E1 ಪ್ರದೇಶದಲ್ಲಿ 1,234 ಇಸ್ರೇಲಿ ವಸತಿ ಘಟಕಗಳನ್ನು ನಿರ್ಮಿಸಲು ಟೆಂಡರ್ ಕರೆದಿರುವ ಇಸ್ರೇಲ್‌ ನ ನಿರ್ಧಾರಕ್ಕೆ ಯುಕೆ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಕೆನಡಾ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಐದು ದೇಶಗಳು, ಇಸ್ರೇಲ್‌ನ ನಿರ್ಧಾರವನ್ನು ‘ಸ್ವೀಕಾರಾರ್ಹವಲ್ಲ’ ಎಂದು ಖಂಡಿಸಿವೆ. ಯೋಜನೆಯನ್ನು ತಕ್ಷಣ ಹಿಂಪಡೆಯುವಂತೆ ಇಸ್ರೇಲ್‌ ಗೆ ಒತ್ತಾಯಿಸಿವೆ.

ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ಇಸ್ರೇಲ್‌ ನ ವಸಾಹತುಗಳು ಕಾನೂನುಬಾಹಿರವಾಗಿವೆ ಎಂದು ಈ ದೇಶಗಳು ಹೇಳಿವೆ. ಅಂತಾರಾಷ್ಟ್ರೀಯ ಒತ್ತಡದ ಹಿನ್ನೆಲೆಯಲ್ಲಿ ಜೆರುಸಲೆಮ್‌ ನ ಪೂರ್ವದಲ್ಲಿರುವ E1 ಪ್ರದೇಶದಲ್ಲಿ ವಸಾಹತು ನಿರ್ಮಿಸುವ ಯೋಜನೆಯನ್ನು ಇಸ್ರೇಲ್ ದಶಕಗಳಿಂದ ಮುಂದೂಡುತ್ತಾ ಬಂದಿತ್ತು.

ಫೆಲೆಸ್ತೀನ್ ದೇಶಕ್ಕೆ ಆತಂಕ

E1 ಪ್ರದೇಶವು ಪೂರ್ವ ಜೆರುಸಲೆಮ್ ಮತ್ತು ಮಾಲೆ ಅಡುಮಿಮ್ ವಸಾಹತು ನಡುವಿನ ಸುಮಾರು 12 ಚದರ ಕಿ.ಮೀ. ಪ್ರದೇಶದಲ್ಲಿದೆ. ಈ ಪ್ರದೇಶದಲ್ಲಿ ಇಸ್ರೇಲಿ ವಸಾಹತು ನಿರ್ಮಾಣವಾದರೆ ವೆಸ್ಟ್ ಬ್ಯಾಂಕ್‌ನ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಿನ ಸಂಪರ್ಕ ಕಡಿತಗೊಳ್ಳಬಹುದು. ಇದರಿಂದ ಭವಿಷ್ಯದ ಫೆಲೆಸ್ತೀನ್ ದೇಶದ ಪ್ರದೇಶಗಳು ಪರಸ್ಪರ ಸಂಪರ್ಕ ಹೊಂದುವುದು ಕಷ್ಟವಾಗಬಹುದು.

ರಮಲ್ಲಾ, ಪೂರ್ವ ಜೆರುಸಲೆಮ್ ಮತ್ತು ಬೆಥ್ ಲೆಹೆಮ್ ನಡುವಿನ ಫೆಲೆಸ್ತೀನ್ ನಗರ ಪ್ರದೇಶದ ಮಧ್ಯಭಾಗದಲ್ಲಿ E1 ಇದೆ. ಹೀಗಾಗಿ ಇಲ್ಲಿ ನಿರ್ಮಾಣ ನಡೆದರೆ ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆಗೆ ಗಂಭೀರ ಅಡ್ಡಿಯಾಗಲಿದೆ ಎಂದು ಯೋಜನೆಯ ವಿರೋಧಿಗಳು ಹೇಳಿದ್ದಾರೆ.

ಫೆಲೆಸ್ತೀನಿಯನ್ನರು ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೆಮ್ ಅನ್ನು ಗಾಝಾ ಜೊತೆಗೆ ಭವಿಷ್ಯದ ಸ್ವತಂತ್ರ ದೇಶದ ಭಾಗವಾಗಿಸಲು ಬಯಸಿದ್ದಾರೆ. ಹೀಗಾಗಿ E1 ಯೋಜನೆಯು ಎರಡು–ದೇಶ ಪರಿಹಾರದ ಸಾಧ್ಯತೆಗೆ ದೊಡ್ಡ ಹೊಡೆತ ನೀಡಲಿದೆ ಎಂದು ಇಸ್ರೇಲ್‌ನ ಹಲವು ಮಿತ್ರ ರಾಷ್ಟ್ರಗಳು ಮತ್ತು ಫೆಲೆಸ್ತೀನಿಯನ್ನರು ಆತಂಕ ವ್ಯಕ್ತಪಡಿಸಿದ್ದಾರೆ.

‘ವೆಸ್ಟ್ ಬ್ಯಾಂಕ್‌ʼ ನಲ್ಲಿ ನಾಗರಿಕರ ವಿರುದ್ಧ ವಸಾಹತುಗಾರರಿಂದ ನಡೆಯುತ್ತಿರುವ ಹಿಂಸಾಚಾರವು ಉತ್ತುಂಗದ ಮಟ್ಟದಲ್ಲಿದೆ. ಫೆಲೆಸ್ತೀನ್ ಆರ್ಥಿಕತೆಯ ಮೇಲೂ ಗಂಭೀರ ನಿರ್ಬಂಧಗಳಿವೆ. ಇಂತಹ ಗಂಭೀರ ಅಸ್ಥಿರತೆಯ ಸಂದರ್ಭದಲ್ಲಿ ಈ ನಿರ್ಧಾರ ಇನ್ನಷ್ಟು ಕಳವಳಕಾರಿ’ ಎಂದು ಐದು ದೇಶಗಳು ಗುರುವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

‘ಈ ಯೋಜನೆಗಳು ನಮ್ಮನ್ನು ಶಾಂತಿಯಿಂದ ಮತ್ತಷ್ಟು ದೂರ ಕೊಂಡೊಯ್ಯುವುದಲ್ಲದೆ, ಇಸ್ರೇಲ್‌ ನ ಅಂತಾರಾಷ್ಟ್ರೀಯ ನಿಲುವಿಗೆ ಮತ್ತಷ್ಟು ಹಾನಿ ಉಂಟುಮಾಡಲಿವೆ’ ಎಂದು ಅವು ಹೇಳಿವೆ.

ಪ್ರತ್ಯೇಕ ಹೇಳಿಕೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ E1 ಯೋಜನೆಯು ಭವಿಷ್ಯದ ಫೆಲೆಸ್ತೀನ್ ದೇಶದ ‘ಅಸ್ತಿತ್ವಕ್ಕೆ ಬೆದರಿಕೆ’ ಒಡ್ಡುತ್ತದೆ ಎಂದು ಹೇಳಿದ್ದಾರೆ. ಬೆಲ್ಜಿಯಂನ ವಿದೇಶಾಂಗ ಸಚಿವರೂ ಯೋಜನೆಯನ್ನು ಖಂಡಿಸಿದ್ದಾರೆ.

ಯುಕೆ ವಿದೇಶಾಂಗ ಕಾರ್ಯದರ್ಶಿ ಎಡ್ ಮಿಲಿಬ್ಯಾಂಡ್ ಗುರುವಾರ ವ್ಯಕ್ತಪಡಿಸಿದ ಖಂಡನೆಯನ್ನು ಇಸ್ರೇಲ್‌ನ ವಿದೇಶಾಂಗ ಸಚಿವರು ತಿರಸ್ಕರಿಸಿದ್ದಾರೆ.

3,401 ವಸತಿ ಘಟಕಗಳಿಗೆ ಅನುಮೋದನೆ

E1 ಪ್ರದೇಶದಲ್ಲಿ ವಾಸಿಸುವ ಬೆಡೋಯಿನ್ ಫೆಲೆಸ್ತೀನ್ ಮತ್ತು ಇಸ್ರೇಲಿ ಶಾಂತಿ ಸಂಘಟನೆಗಳು ಯೋಜನೆಗಳ ವಿರುದ್ಧ ಇಸ್ರೇಲ್‌ನ ನ್ಯಾಯಾಲಯದಲ್ಲಿ ಸವಾಲು ಹಾಕಿವೆ. ಇದರ ನಡುವೆಯೂ ಇಸ್ರೇಲ್‌ ನ ವಸತಿ ಸಚಿವಾಲಯ ಬುಧವಾರ 1,234 ವಸತಿ ಘಟಕಗಳ ನಿರ್ಮಾಣಕ್ಕೆ ಟೆಂಡರ್ ನೀಡಿದೆ.

ಕಳೆದ ಆಗಸ್ಟ್‌ ನಲ್ಲಿ ಇಸ್ರೇಲ್ ಸರಕಾರ ಅನುಮೋದಿಸಿದ್ದ ಒಟ್ಟು 3,401 ವಸತಿ ಘಟಕಗಳ ಪೈಕಿ ಈ 1,234 ಘಟಕಗಳು ಸೇರಿವೆ.

ಯೋಜನೆಗಳನ್ನು ಪ್ರಕಟಿಸಿದ ಸಂದರ್ಭದಲ್ಲಿ ಅತಿರಾಷ್ಟ್ರೀಯವಾದಿ ಹಾಗೂ ವಸಾಹತು ಪರ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್, ಫೆಲೆಸ್ತೀನ್ ನ ದೇಶದ ಕಲ್ಪನೆಯನ್ನು ‘ಅಳಿಸಲಾಗುತ್ತಿದೆ’ ಎಂದು ಹೇಳಿದ್ದರು.

ಟೆಂಡರ್‌ ಗಳಿಗೆ ಅಕ್ಟೋಬರ್ 19 ಕೊನೆಯ ದಿನವಾಗಿದೆ. ಅಕ್ಟೋಬರ್ 27ರಂದು ಇಸ್ರೇಲ್‌ ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅದಕ್ಕೂ ಕೆಲವೇ ದಿನಗಳ ಮೊದಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹೀಗಾಗಿ ಮುಂದಿನ ಯಾವುದೇ ಸರಕಾರವು ಈಗಾಗಲೇ ಹೊರಡಿಸಿರುವ ಟೆಂಡರ್‌ ಗಳನ್ನು ರದ್ದುಗೊಳಿಸುವುದು ಹೆಚ್ಚು ಕಷ್ಟವಾಗಲಿದೆ.

160 ವಸಾಹತುಗಳು

1967ರ ಮಧ್ಯಪ್ರಾಚ್ಯ ಯುದ್ಧದ ವೇಳೆ ಇಸ್ರೇಲ್ ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೆಮ್ ಅನ್ನು ವಶಪಡಿಸಿಕೊಂಡಿತ್ತು. ಫೆಲೆಸ್ತೀನಿನ ಈ ಪ್ರದೇಶಗಳನ್ನು ಗಾಝಾ ಜೊತೆಗೆ ಭವಿಷ್ಯದ ಸ್ವತಂತ್ರ ದೇಶದ ಭಾಗವಾಗಿಸಲು ಬಯಸಿದ್ದಾರೆ.

ವೆಸ್ಟ್ ಬ್ಯಾಂಕ್‌ ನಲ್ಲಿ ಇಸ್ರೇಲ್ ಇದುವರೆಗೆ ಸುಮಾರು 160 ವಸಾಹತುಗಳನ್ನು ನಿರ್ಮಿಸಿದೆ. ಅಂದಾಜು 33 ಲಕ್ಷ ಫೆಲೆಸ್ತೀನಿಯನ್ನರು ಈ ಪ್ರದೇಶದಲ್ಲಿ ಇಸ್ರೇಲಿ ವಸಾಹತುಗಳ ಪಕ್ಕದಲ್ಲೇ ವಾಸಿಸುತ್ತಿದ್ದಾರೆ.

ತೀವ್ರ ಅಂತರರಾಷ್ಟ್ರೀಯ ವಿರೋಧದ ನಡುವೆಯೂ ಸತತವಾಗಿ ಇಸ್ರೇಲಿ ಸರಕಾರ ವಸಾಹತುಗಳ ವಿಸ್ತರಣೆಗೆ ಅವಕಾಶ ನೀಡಿವೆ. 2022ರ ಕೊನೆಯಲ್ಲಿ ಬಲಪಂಥೀಯ, ವಸಾಹತು ಪರ ಒಕ್ಕೂಟದ ನೇತೃತ್ವದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೆ ಅಧಿಕಾರಕ್ಕೆ ಬಂದ ಬಳಿಕ ವಸಾಹತು ವಿಸ್ತರಣೆ ತೀವ್ರಗೊಂಡಿತು.

2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯ ಬಳಿಕ ಆರಂಭವಾದ ಗಾಝಾ ಯುದ್ಧದ ಅವಧಿಯಲ್ಲೂ ವಸಾಹತು ವಿಸ್ತರಣೆ ಮತ್ತಷ್ಟು ಹೆಚ್ಚಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News