Pakistan : ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಇಮ್ರಾನ್ ಖಾನ್ ಇಸ್ಲಾಮಾಬಾದ್‌ನ ಆಸ್ಪತ್ರೆಗೆ ಸ್ಥಳಾಂತರ
ಇಮ್ರಾನ್ ಖಾನ್ Photo: x.com/ferozwala
ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ವೈದ್ಯಕೀಯ ತಪಾಸಣೆಗಾಗಿ ಶುಕ್ರವಾರ ಬೆಳಿಗ್ಗೆ ಅಡಿಯಾಲ ಜೈಲಿನಿಂದ ಇಸ್ಲಾಮಾಬಾದ್‌ನ ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ವಿಶೇಷ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಟಿಐ ತಿಳಿಸಿದೆ. 73 ವರ್ಷದ ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಅವರ ಕುಟುಂಬಸ್ಥರು ಹಾಗೂ ಬೆಂಬಲಿಗರು ಹಲವು ತಿಂಗಳುಗಳಿಂದ ಕಳವಳ ವ್ಯಕ್ತಪಡಿಸುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಖಾನ್ ಅವರನ್ನು 48 ಗಂಟೆಗಳ ಒಳಗೆ ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ಸ್ಥಳಾಂತರಿಸಿ, ಅವರ ವೈಯಕ್ತಿಕ ವೈದ್ಯರನ್ನು ಒಳಗೊಂಡ ವೈದ್ಯಕೀಯ ಸಮಿತಿಯಿಂದ ತಪಾಸಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಅಧಿಕಾರಿಗಳಿಗೆ ಆದೇಶಿಸಿತ್ತು. ಜೈಲಿನಲ್ಲಿ ಖಾನ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರ ಬಲಗಣ್ಣಿನ ದೃಷ್ಟಿ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರ ವಕೀಲರು ಆರೋಪಿಸಿದ್ದರು.
ಸರ್ಕಾರ ಆರಂಭದಲ್ಲಿ ನ್ಯಾಯಾಲಯದ ಆದೇಶವನ್ನು ಜಾರಿಗೆ ಒಪ್ಪಿಕೊಂಡಿತ್ತಾದರೂ, ಬಳಿಕ ಆದೇಶವನ್ನು ಮರುಪರಿಶೀಲಿಸಿ ಹಿಂಪಡೆಯುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ತುರ್ತಾಗಿ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿರುವ ಯಾವುದೇ ಆರೋಗ್ಯ ಸಮಸ್ಯೆ ವೈದ್ಯಕೀಯ ವರದಿಗಳಲ್ಲಿ ಕಂಡುಬಂದಿಲ್ಲ ಎಂದು ಸರ್ಕಾರ ವಾದಿಸಿತ್ತು.
ಇದೀಗ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೆಪ್ಟೆಂಬರ್ 16ರಂದು ನಡೆಯಲಿರುವ ಮುಂದಿನ ವಿಚಾರಣೆಯವರೆಗೆ ಅವರು ಆಸ್ಪತ್ರೆಯಲ್ಲೇ ಇರಬೇಕೆಂದು ನ್ಯಾಯಾಲಯ ಸೂಚಿಸಿದೆ.
ಜನವರಿ ಅಂತ್ಯದಲ್ಲಿ ಖಾನ್ ಅವರ ಬಲಗಣ್ಣಿನಲ್ಲಿ ಸಮಸ್ಯೆ ಇರುವುದು ಪತ್ತೆಯಾದ ಬಳಿಕ ಅವರ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗಿತ್ತು. ಅಂದಿನಿಂದ ಚಿಕಿತ್ಸೆಗಾಗಿ ಅವರನ್ನು ಇಸ್ಲಾಮಾಬಾದ್‌ನ ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಪಿಐಎಂಎಸ್)ಗೆ ಹಲವು ಬಾರಿ ಕರೆದೊಯ್ಯಲಾಗಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಅವರ ಕುಟುಂಬಸ್ಥರು ನಿರಂತರವಾಗಿ ಆಗ್ರಹಿಸುತ್ತಿದ್ದರು.
ಈ ಕುರಿತು ರಾಯಿಟರ್ಸ್‌ಗೆ ಪ್ರತಿಕ್ರಿಯಿಸಿದ ಪಿಟಿಐ ವಕ್ತಾರ ಜುಲ್ಫಿಕರ್ ಬುಖಾರಿ, ಸುಪ್ರೀಂ ಕೋರ್ಟ್‌ನ ಈ ತೀರ್ಪು ಹೊಸ ಆಶಾವಾದ ಮೂಡಿಸಿದೆ ಎಂದು ಹೇಳಿದ್ದಾರೆ. ಆದರೆ ಇಮ್ರಾನ್ ಖಾನ್ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 27ರಂದು ದೇಶವ್ಯಾಪಿ ಪ್ರತಿಭಟನಾ ಮೆರವಣಿಗೆ ನಡೆಸುವ ಯೋಜನೆಯನ್ನು ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.