×
Ad

ಕ್ರಿಸ್ಟಿಯಾನೊ ರೊನಾಲ್ಡೊರೊಂದಿಗಿನ ಗುತ್ತಿಗೆ ನವೀಕರಣಕ್ಕೆ ಪ್ರಯತ್ನ: ಅಲ್ ನಸರ್ ಕ್ಲಬ್ ಮುಖ್ಯಸ್ಥ

Update: 2025-05-30 21:47 IST

ಕ್ರಿಸ್ಟಿಯಾನೊ ರೊನಾಲ್ಡೊ | PC : @Cristiano

ರಿಯಾದ್: ಫುಟ್ ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊರೊಂದಿಗಿನ ಗುತ್ತಿಗೆಯ ವಿಸ್ತರಣೆಗೆ ಅಲ್-ನಸರ್ ಕ್ಲಬ್ ಮಾತುಕತೆ ನಡೆಸುತ್ತಿದ್ದು, ಐದು ಬಾರಿಯ ಬ್ಯಾಲನ್ ಡಿ’ಓರ್ ವಿಜೇತ ಫುಟ್ ಬಾಲ್ ತಾರೆಯೊಂದಿಗೆ ಗುತ್ತಿಗೆಗೆ ಸಹಿ ಹಾಕಲು ಆಸಕ್ತಿ ಹೊಂದಿರುವ ಇನ್ನಿತರ ಆತಿಥೇಯ ತಂಡಗಳಿಂದ ಸ್ಪರ್ಧೆ ಎದುರಿಸುತ್ತಿದೆ ಎಂದು ಗುರುವಾರ ಸೌದಿ ಅರೇಬಿಯಾ ಫುಟ್ ಬಾಲ್ ಕ್ಲಬ್ ಆದ ಅಲ್-ನಸರ್ ತಂಡದ ಕ್ರೀಡಾ ನಿರ್ದೇಶಕ ಫರ್ನಾಂಡೊ ಹಿಯೆರೊ ಹೇಳಿದ್ದಾರೆ.

ಸೋಮವಾರ ಅಲ್-ಫತೇಹ್ ನಲ್ಲಿ ನಡೆದ ಪಂದ್ಯದೊಂದಿಗೆ ಅಲ್-ನಸರ್ ಕ್ಲಬ್ ನ ಋತು ಮುಕ್ತಾಯವಾಗುತ್ತಿದ್ದಂತೆಯೆ, “ಈ ಅಧ್ಯಾಯ ಮುಕ್ತಾಯಗೊಂಡಿದೆ. ಕತೆ? ಇನ್ನೂ ಬರೆಯಬೇಕಿದೆ” ಎಂದು ಕ್ರಿಸ್ಟಿಯಾನೊ ರೊನಾಲ್ಡೊ ನಿಗೂಢ ಪೋಸ್ಟ್ ಮಾಡಿದ್ದರು. ಇದರ ಬೆನ್ನಿಗೇ, 40 ವರ್ಷ ವಯಸ್ಸಿನ ಪೋರ್ಚುಗೀಸ್ ಫುಟ್ ಬಾಲ್ ತಾರೆಯ ಭವಿಷ್ಯದ ಕುರಿತ ಊಹಾಪೋಹಗಳು ತೀವ್ರಗೊಂಡಿದ್ದವು.

ಈ ಕುರಿತು ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಫರ್ನಾಂಡೊ ಹಿಯೆರೊ, “ಕ್ರಿಸ್ಟಿಯಾನೊ ರೊನಾಲ್ಡೊರ ಗುತ್ತಿಗೆ ಜೂನ್ 30ರವರೆಗೂ ಚಾಲ್ತಿಯಲ್ಲಿದೆ. ಅವರು ನಮ್ಮೊಂದಿಗೆ ಮುಂದುವರಿಯುವಂತೆ ಮಾಡಲು ನಾವು ಅವರ ಗುತ್ತಿಗೆಯನ್ನು ನವೀಕರಿಸಲು ಪ್ರಯತ್ನಿಸಲಿದ್ದೇವೆ. ಆದರೆ, ಅವರೊಂದಿಗೆ ಗುತ್ತಿಗೆಗೆ ಸಹಿ ಮಾಡಲು ಅನೇಕ ಕ್ಲಬ್ ಗಳು ಆಸಕ್ತಿ ತಳೆದಿವೆ” ಎಂದು ತಿಳಿಸಿದರು.

ಕ್ಲಬ್ ವಿಶ್ವಕಪ್ ಕ್ರೀಡಾಕೂಟಕ್ಕೆ ಅಲ್-ನಸರ್ ಫುಟ್ ಬಾಲ್ ಕ್ಲಬ್ ಅರ್ಹತೆ ಪಡೆಯಲು ವಿಫಲಗೊಂಡಿದ್ದರೂ, ಜೂನ್ 14ರಿಂದ ಜುಲೈ 13ರವರೆಗೆ ಅಮೆರಿಕದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಕ್ರಿಸ್ಟಿಯಾನೊ ರೊನಾಲ್ಡ್ ಆಡುವಂತೆ ಮಾಡಲು ಮಾತುಕತೆಗಳು ಪ್ರಗತಿಯಲ್ಲಿವೆ ಎಂದು ಕಳೆದ ವಾರ ಫೀಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೊ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News