“ಜಂಬದಿಂದ ಹೇಳಿಕೊಳ್ಳುತ್ತಿಲ್ಲ, 8 ಯುದ್ಧಗಳನ್ನು ನಿಲ್ಲಿಸಿದ್ದೇನೆ”: ನೊಬೆಲ್ ಶಾಂತಿ ಪ್ರಶಸ್ತಿ ನನಗೇ ಸಿಗಬೇಕು ಎಂದ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್ : 2026ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ನನಗೆ ದೊರೆಯಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ಆದರೆ, ನಾರ್ವೇಜಿಯನ್ ನೊಬೆಲ್ ಸಮಿತಿ ತನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತದೆಯೇ ಎಂಬುದು ಇನ್ನೂ ಖಚಿತವಿಲ್ಲ ಎಂದು ಹೇಳಿದ್ದಾರೆ.
ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಪ್ರಶಸ್ತಿ ಘೋಷಣೆ ಶೀಘ್ರದಲ್ಲೇ ನಡೆಯಲಿದೆ. ಆದರೆ, ಸಮಿತಿಯು ನನ್ನ ಪರವಾಗಿ ನಿರ್ಧಾರ ಕೈಗೊಳ್ಳದಿರಬಹುದು ಎಂದು ಹೇಳಿದರು.
"ಇದೀಗ ಆ ಸಮಯ ಬಂದಿದೆ. ಆದರೆ ಕಳೆದ ಬಾರಿ ಪ್ರಶಸ್ತಿ ಪಡೆದ ವ್ಯಕ್ತಿಯ ಮೂಲಕ ಪರೋಕ್ಷವಾಗಿ ಈ ಗೌರವ ನನಗೆ ದೊರೆತಿದ್ದಕ್ಕೆ ನಾನು ತುಂಬಾ ಗೌರವಿತನಾಗಿದ್ದೆ. ಈ ಪ್ರಶಸ್ತಿಗೆ ಟ್ರಂಪ್‌ಗಿಂತ ಹೆಚ್ಚು ಅರ್ಹರಾದವರು ಯಾರೂ ಇಲ್ಲ ಎಂದು ಅವರು ಹೇಳಿದ್ದರು" ಎಂದು ಟ್ರಂಪ್ ಹೇಳಿದರು.
ನನಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯಬೇಕು ಎಂದು ಟ್ರಂಪ್ ಹೇಳುತ್ತಿರುವುದು ಇದೇ ಮೊದಲಲ್ಲ. 2025ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ವೇಳೆ ಕೂಡ ಹಲವು ಬಾರಿ ಹೇಳಿಕೆ ನೀಡಿದ್ದರು.
ನಾನು, ಬೇರೆ ಯಾರೂ ಹಿಂದೆಂದೂ ಮಾಡದಂತಹ ಕೆಲಸಗಳನ್ನು ಮಾಡಿದ್ದೇನೆ. ಇದನ್ನು ನಾನು ಜಂಬದಿಂದ ಹೇಳಿಕೊಳ್ಳುತ್ತಿಲ್ಲ, ನಿಮಗೆ ಕೇವಲ ವಾಸ್ತವವನ್ನು ಹೇಳುತ್ತಿದ್ದೇನೆ. ಬಹುಶಃ ಯಾವುದೇ ಅಧ್ಯಕ್ಷರು ಈವರೆಗೆ ಯಾವುದೇ ಯುದ್ಧಗಳನ್ನು ಬಗೆಹರಿಸಿಲ್ಲ. ಆದರೆ, ನಾನು 8 ಯುದ್ಧಗಳನ್ನು ಬಗೆಹರಿಸಿದ್ದೇನೆ. ನನಗೆ ಪ್ರಶಸ್ತಿ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದು ಬೇರೆ ವಿಚಾರ. ನಾನು ಇದಕ್ಕಿಂತಲೂ ಹೆಚ್ಚಿನ ಕೆಲಸಗಳನ್ನು ಮಾಡಿದ್ದೇನೆ. ನನಗೆ ಪ್ರಶಸ್ತಿ ನೀಡದಿರುವುದು ಅವರಿಗೆ ದೊಡ್ಡ ಅವಮಾನವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.