ಬ್ರಿಟನ್‍ನ ಮುಂದಿನ ಪ್ರಧಾನಿಯಾಗಲು ಸಜ್ಜಾದ ಆ್ಯಂಡಿ ಬರ್ನ್ ಹ್ಯಾಮ್
Update: 2026-07-10 22:30 IST
ಆ್ಯಂಡಿ ಬರ್ನ್ ಹ್ಯಾಮ್ | Photo Credit : AP
ಲಂಡನ್, ಜು.10: ಲೇಬರ್ ಪಕ್ಷದ ಸಂಸದರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾದ ಬೆನ್ನಲ್ಲೇ, ಆಂಡಿ ಬರ್ನ್‍ಹ್ಯಾಮ್ ಅವರು ಬ್ರಿಟನ್‍ನ ಮುಂದಿನ ಪ್ರಧಾನಿಯಾಗುವ ಹೊಸ್ತಿಲಲ್ಲಿದ್ದಾರೆ.
ಗುರುವಾರ ನಾಮನಿರ್ದೇಶನದ ಮೊದಲ ದಿನದಂದೇ ಲೇಬರ್ ಪಕ್ಷದ ಒಟ್ಟು 403 ಸಂಸದರ ಪೈಕಿ 322 ಜನರ ಬೆಂಬಲ ತಮಗೆ ಸಿಕ್ಕಿದೆ ಎಂದು ಬರ್ನ್‍ಹ್ಯಾಮ್ ತಿಳಿಸಿದ್ದಾರೆ. ತಾವು ಏಕೈಕ ಅಭ್ಯರ್ಥಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಇನ್ನು ಕೇವಲ ಒಂದು ಮತದ ಕೊರತೆಯಿದೆ.
ಲೇಬರ್ ಪಕ್ಷದ ನಾಯಕತ್ವದ ನಾಮನಿರ್ದೇಶನ ಪ್ರಕ್ರಿಯೆಯು ಜುಲೈ 16ರಂದು ಮುಕ್ತಾಯಗೊಳ್ಳಲಿದೆ. ಜುಲೈ 17ರಂದು ಬರ್ನ್‍ಹ್ಯಾಮ್ ಅವರನ್ನು ಲೇಬರ್ ಪಕ್ಷದ ನಾಯಕರನ್ನಾಗಿ ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದ್ದು, ಜುಲೈ 20 ರಂದು ಅವರು ಪ್ರಧಾನ ಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.