×
Ad

ಬವೀ ಚಂಡಮಾರುತಕ್ಕೆ ಕಂಗೆಟ್ಟ ಫಿಲಿಪ್ಪೀನ್ಸ್, ತೈವಾನ್ : 15 ಮಂದಿ ಮೃತ್ಯು

ತೈವಾನ್‍ನಲ್ಲಿ 2,000 ಜನರ ಸ್ಥಳಾಂತರ

Update: 2026-07-10 20:55 IST

Photo Credit : NDTV 

ಮನಿಲಾ, ಜು.10: ಈ ದಶಕದ ಅತಿ ದೊಡ್ಡ ಚಂಡಮಾರುತ `ಬವೀ'ಯ ಪ್ರಭಾವದಿಂದ ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಫಿಲಿಪ್ಪೀನ್ಸ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹದಿನೈದು ಜನರು ಮೃತಪಟ್ಟಿದ್ದಾರೆ ಮತ್ತು ತೈವಾನ್‍ನಲ್ಲಿ 2,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

`ಬವೀ' ಚಂಡಮಾರುತವು ಶುಕ್ರವಾರ ತಡರಾತ್ರಿ ಮತ್ತು ಶನಿವಾರದಂದು ತೈವಾನ್‍ನ ಉತ್ತರ ಮತ್ತು ಪೂರ್ವ ಭಾಗಗಳಿಗೆ, ಜಪಾನ್‍ನ ದೂರದ ನೈಋತ್ಯ ದ್ವೀಪಗಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಬಳಿಕ, ಈ ವಾರ ಈಗಾಗಲೇ ಭೀಕರ ಬಿರುಗಾಳಿಯಿಂದ ತತ್ತರಿಸಿದ್ದ ಚೀನಾ ದೇಶಕ್ಕೆ ಇದು ಅಪ್ಪಳಿಸಲಿದೆ.

ಫಿಲಿಪೈನ್ಸ್‌ನ ದಕ್ಷಿಣ ದ್ವೀಪವಾದ ಮಿಂಡನಾವೊದಲ್ಲಿ ಸಂಭವಿಸಿದ ಎರಡು ಭೂಕುಸಿತಗಳಲ್ಲಿ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ ಮತ್ತು ಇತರ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೈವಾನ್‍ನಲ್ಲಿ ಚಂಡಮಾರುತದ ಅತಿ ಹೆಚ್ಚಿನ ಪರಿಣಾಮವು ತೈಪೆ, ನ್ಯೂ ತೈಪೆ, ಕೀಲುಂಗ್ ಮತ್ತು ಯಿಲಾನ್‍ಗಳಲ್ಲಿ ಕಂಡುಬರುವ ನಿರೀಕ್ಷೆಯಿದೆ, ಹಾಗೂ ತೈವಾನ್‍ನ ಮಧ್ಯ ಮತ್ತು ಉತ್ತರ ಭಾಗದ ಪರ್ವತ ಪ್ರದೇಶಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಈ ಚಂಡಮಾರುತವು ಗಂಟೆಗೆ 155 ಕಿಲೋಮೀಟರ್ ವೇಗದ ನಿರಂತರ ಗಾಳಿಯನ್ನು ಹೊಂದಿದ್ದು, ಕೆಲವೊಮ್ಮೆ ಗಾಳಿಯ ವೇಗ ಗಂಟೆಗೆ 190 ಕಿಲೋಮೀಟರ್ ತಲುಪುತ್ತಿದೆ. ಶುಕ್ರವಾರದಂದು ಉತ್ತರ ಮತ್ತು ಪೂರ್ವ ತೈವಾನ್‍ನಾದ್ಯಂತ ಅನೇಕ ಶಾಲೆ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಲಾಗಿತ್ತು, ಹಾಗೂ ನೂರಾರು ವಿಮಾನ ಹಾರಾಟಗಳನ್ನು ರದ್ದುಗೊಳಿಸಲಾಗಿತ್ತು. ಕರಾವಳಿ ತೀರಕ್ಕೆ 30 ಅಡಿ ಎತ್ತರದ ಅಲೆಗಳು ಅಪ್ಪಳಿಸುತ್ತಿರುವುದರಿಂದ ನಿವಾಸಿಗಳು ಕರಾವಳಿ ಪ್ರದೇಶಗಳಿಂದ ದೂರವಿರಲು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಚೀನಾ: 17,000ಕ್ಕೂ ಹೆಚ್ಚು ಜನರ ಸ್ಥಳಾಂತರ

ಬವೀ ಚಂಡಮಾರುತ ಶನಿವಾರ ರಾತ್ರಿ ಶಾಂಘೈನ ದಕ್ಷಿಣದಲ್ಲಿರುವ ಫುಜಿಯಾನ್ ಮತ್ತು ಝೆಜಿಯಾಂಗ್ ಪ್ರಾಂತ್ಯಗಳ ಗಡಿಯ ಸಮೀಪ ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಝೆಜಿಯಾಂಗ್‍ನಲ್ಲಿ 17,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, 1,70,000 ರಕ್ಷಣಾ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಮೀನುಗಾರಿಕಾ ದೋಣಿಗಳು ತಕ್ಷಣ ಬಂದರಿಗೆ ಮರಳುವಂತೆ ಸೂಚಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News