171 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ; ದಿಲ್ಲಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಒಂದೇ ದಿನ ಎರಡು ಬಾರಿ ಆತಂಕ ಸೃಷ್ಟಿಸಿದ ಏರ್ ಇಂಡಿಯಾ ವಿಮಾನಗಳು!
ಏರ್ ಇಂಡಿಯಾ | Photo Credit : PTI
ಹೊಸದಿಲ್ಲಿ, ಮೇ 21: ಬೆಂಗಳೂರಿನಿಂದ ದಿಲ್ಲಿಗೆ ತೆರಳುತ್ತಿದ್ದ 171 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು.
AI2802 ವಿಮಾನವು ಲ್ಯಾಂಡಿಂಗ್ ಹಂತದಲ್ಲಿದ್ದ ವೇಳೆ ಪೈಲಟ್‌ಗಳು ಹೊಗೆಗೆ ಸಂಬಂಧಿಸಿದ ಸಮಸ್ಯೆಯನ್ನು ವರದಿ ಮಾಡಿದರು ಎಂದು ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ವಿಮಾನ ನಿಲ್ದಾಣ ಆಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಸೇವೆಗಳನ್ನು ಸಜ್ಜುಗೊಳಿಸಿತು.
ರಾತ್ರಿ ಸುಮಾರು 10.18ರ ವೇಳೆಗೆ ರನ್‌ವೇ 29Rನಲ್ಲಿ ಘಟನೆ ಸಂಭವಿಸಿತು. ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ಬಳಿಕ ಪರಿಶೀಲನೆಗಾಗಿ ರನ್‌ವೇಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಯಿತು.
ಘಟನೆಯ ಹೊರತಾಗಿಯೂ ವಿಮಾನ ಸುರಕ್ಷಿತವಾಗಿ ಇಳಿದಿದ್ದು, ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘AI2802 ವಿಮಾನಕ್ಕೆ ಸಂಬಂಧಿಸಿದ ಘಟನೆಯ ಬಗ್ಗೆ ಮಾಹಿತಿ ಇದೆ. ವಿಮಾನ ಸುರಕ್ಷಿತವಾಗಿ ಇಳಿದಿದ್ದು, ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ’ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
‘ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಹೆಚ್ಚಿನ ವಿವರಗಳನ್ನು ನಂತರ ಹಂಚಿಕೊಳ್ಳಲಾಗುವುದು’ ಎಂದು ಸಂಸ್ಥೆ ಹೇಳಿದೆ.
ವಿಮಾನ ಸುರಕ್ಷತೆಗೆ ಸಂಭಾವ್ಯ ಅಪಾಯ ಉಂಟಾದ ಸಂದರ್ಭಗಳಲ್ಲಿ ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗುತ್ತದೆ. ಈ ವೇಳೆ ಅಗ್ನಿಶಾಮಕ ದಳ, ವೈದ್ಯಕೀಯ ತಂಡಗಳು ಹಾಗೂ ರಕ್ಷಣಾ ಸಿಬ್ಬಂದಿಯನ್ನು ಮುಂಚಿತವಾಗಿ ನಿಯೋಜಿಸಲಾಗುತ್ತದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೊಂದು ಘಟನೆ
ಇದಕ್ಕೂ ಮುನ್ನ ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವು ಬುಧವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ‘ಟೇಲ್ ಸ್ಟ್ರೈಕ್’ ಘಟನೆಗೆ ಒಳಗಾಗಿತ್ತು.
AI2651 ವಿಮಾನವು ಲ್ಯಾಂಡಿಂಗ್ ಹಂತದಲ್ಲಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ವಿಮಾನ ಸುರಕ್ಷಿತವಾಗಿ ಇಳಿದಿದ್ದು, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ವಿಮಾನದಿಂದ ಇಳಿದಿದ್ದಾರೆ ಎಂದು ಸಂಸ್ಥೆ ಹೇಳಿದೆ.
ಮೂಲಗಳ ಪ್ರಕಾರ, ಸಮೀಪದಲ್ಲಿದ್ದ ಬೃಹದಾಕಾರದ ಮತ್ತೊಂದು ವಿಮಾನ ಟೇಕ್‌ಆಫ್ ಆದ ಪರಿಣಾಮ ಉಂಟಾದ ‘ವೇಕ್ ಟರ್ಬುಲೆನ್ಸ್’ಗೆ ವಿಮಾನ ಒಳಗಾಗಿತ್ತು. ಪ್ರಕ್ಷುಬ್ಧತೆಯ ನಡುವೆ ಪೈಲಟ್ ಮುನ್ನೆಚ್ಚರಿಕಾ ಕ್ರಮ ಕೈಗೊಂಡಾಗ ವಿಮಾನದ ಹಿಂಭಾಗ ರನ್‌ವೇಗೆ ತಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆ ಆರಂಭಿಸಿದೆ. ವಿಮಾನವನ್ನು ತಾಂತ್ರಿಕ ಪರಿಶೀಲನೆಗಾಗಿ ತಾತ್ಕಾಲಿಕವಾಗಿ ಸೇವೆಯಿಂದ ಹಿಂತೆಗೆದು ಟರ್ಮಿನಲ್ ನಲ್ಲಿಯೇ ಇರಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.