ಗಾಝಾಗೆ ಮಾನವೀಯ ನೆರವು ಸಾಗಿಸುತ್ತಿದ್ದ ಫ್ಲೋಟಿಲ್ಲಾ ಕಾರ್ಯಕರ್ತರ ಮೇಲೆ ಇಸ್ರೇಲ್ ನಿಂದ ಅಮಾನವೀಯ ವರ್ತನೆ; ವಿಶ್ವದ ಹಲವು ರಾಷ್ಟ್ರಗಳಿಂದ ಆಕ್ರೋಶ
ಹಲವು ದೇಶಗಳಿಂದ ಇಸ್ರೇಲ್ ರಾಯಭಾರಿಗಳಿಗೆ ಸಮನ್ಸ್
photo credit : x@itamarbengvir
ಜೆರುಸಲೇಮ್/ಅಂಕಾರಾ, ಮೇ 21: ಗಾಝಾಗೆ ಮಾನವೀಯ ನೆರವು ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದ ‘ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ’ ಕಾರ್ಯಕರ್ತರನ್ನು ಇಸ್ರೇಲ್ ಬಂಧಿಸಿ ಅಮಾನವೀಯವಾಗಿ ನಡೆಸಿಕೊಂಡಿರುವ ಘಟನೆಗೆ ವಿಶ್ವದ ಹಲವು ರಾಷ್ಟ್ರಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕಾರ್ಯಕರ್ತರನ್ನು ಬೆನ್ನಿನ ಹಿಂದೆ ಕೈಕಟ್ಟಿ ಮಂಡಿಯೂರಿಸಿರುವ ವೀಡಿಯೊವನ್ನು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ ಗ್ವಿರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಬಳಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗಳು ವ್ಯಕ್ತವಾಗಿವೆ ಎಂದು trtworld.com ವರದಿ ಮಾಡಿದೆ.
“ಇಸ್ರೇಲ್‌ಗೆ ಸ್ವಾಗತ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದ ವೀಡಿಯೊದಲ್ಲಿ, ಇಸ್ರೇಲ್ ರಾಷ್ಟ್ರಗೀತೆ ಮೊಳಗುತ್ತಿರುವ ವೇಳೆ ಡಝನ್ ಗಟ್ಟಲೆ ಕಾರ್ಯಕರ್ತರು ಮಿಲಿಟರಿ ದೋಣಿಯ ಡೆಕ್‌ನಲ್ಲಿ ಮಂಡಿಯೂರಿರುವುದು ಕಾಣಿಸಿಕೊಂಡಿದೆ. ವೀಡಿಯೊದಲ್ಲಿ ಬೆನ್ ಗ್ವಿರ್ ಇಸ್ರೇಲ್ ಧ್ವಜ ಬೀಸುತ್ತಿರುವ ದೃಶ್ಯವೂ ಇದೆ.
ಗಾಝಾಗೆ ಮಾನವೀಯ ನೆರವು ತಲುಪಿಸುವ ಉದ್ದೇಶದಿಂದ 44 ದೇಶಗಳ 428 ಮಂದಿ ಕಾರ್ಯಕರ್ತರು ತುರ್ಕಿಯೆಯ ಮರ್ಮರಿಸ್ ಬಂದರಿನಿಂದ ಫ್ಲೋಟಿಲ್ಲಾದ ಮೂಲಕ ಪ್ರಯಾಣ ಆರಂಭಿಸಿದ್ದರು. 2007ರಿಂದ ಗಾಝಾ ಮೇಲಿನ ಇಸ್ರೇಲ್ ದಿಗ್ಬಂಧನವನ್ನು ಮುರಿಯುವ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗಿತ್ತು. ಆದರೆ ಮಂಗಳವಾರ ಇಸ್ರೇಲ್ ತನ್ನ ಬೆಂಗಾವಲು ಪಡೆ ಮೂಲಕ ಫ್ಲೋಟಿಲ್ಲಾದ ಎಲ್ಲ ಹಡಗುಗಳನ್ನು ವಶಪಡಿಸಿಕೊಂಡಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಬೆಳವಣಿಗೆಯ ನಂತರ ಹಲವು ದೇಶಗಳು ತಮ್ಮ ದೇಶದಲ್ಲಿರುವ ಇಸ್ರೇಲ್ ರಾಯಭಾರಿಗಳನ್ನು ಕರೆಸಿ ಆಕ್ಷೇಪ ವ್ಯಕ್ತಪಡಿಸಿವೆ.
ತುರ್ಕಿಯೆ
ಅಂತರರಾಷ್ಟ್ರೀಯ ನೀರಿನಲ್ಲಿ ಫ್ಲೋಟಿಲ್ಲಾವನ್ನು ತಡೆದು ಕಾರ್ಯಕರ್ತರ ವಿರುದ್ಧ ಮೌಖಿಕ ಹಾಗೂ ದೈಹಿಕ ಹಿಂಸಾಚಾರ ನಡೆಸಲಾಗಿದೆ ಎಂದು ತುರ್ಕಿಯೆ ಆರೋಪಿಸಿದೆ.
“ಗಾಝಾದಲ್ಲಿ ನಡೆಯುತ್ತಿರುವ ನರಮೇಧದ ಪ್ರಮುಖ ಪಾತ್ರಧಾರಿಗಳಲ್ಲೊಬ್ಬರಾದ ಸಚಿವ ಬೆನ್ ಗ್ವಿರ್, ನೆತನ್ಯಾಹು ಸರ್ಕಾರದ ಹಿಂಸಾತ್ಮಕ ಮತ್ತು ಅನಾಗರಿಕ ಮನೋಭಾವವನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದ್ದಾರೆ” ಎಂದು ತುರ್ಕಿಯ ವಿದೇಶಾಂಗ ಸಚಿವಾಲಯ ಹೇಳಿದೆ.
ಬಂಧಿತ ಟರ್ಕಿಶ್ ನಾಗರಿಕರು ಮತ್ತು ಇತರ ಕಾರ್ಯಕರ್ತರ ಸುರಕ್ಷಿತ ಬಿಡುಗಡೆಗಾಗಿ ಹಲವು ರಾಷ್ಟ್ರಗಳೊಂದಿಗೆ ಸಂಯುಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ತಿಳಿಸಿದೆ.
ತುರ್ಕಿಯ ಸಂವಹನ ನಿರ್ದೇಶಕ ಬುರ್ಹಾನೆಟಿನ್ ಡುರಾನ್, “ಅಂತರರಾಷ್ಟ್ರೀಯ ನೀರಿನಲ್ಲಿ ಮಾನವೀಯ ನೆರವು ಹೊತ್ತೊಯ್ಯುತ್ತಿದ್ದ ಫ್ಲೋಟಿಲ್ಲಾ ವಿರುದ್ಧ ನಡೆಸಿದ ಹಸ್ತಕ್ಷೇಪ ಮತ್ತು ಕಾರ್ಯಕರ್ತರ ಮೇಲಿನ ಆಕ್ರಮಣಕಾರಿ ವರ್ತನೆಯನ್ನು ಬಲವಾಗಿ ಖಂಡಿಸುತ್ತೇನೆ” ಎಂದು ಹೇಳಿದ್ದಾರೆ.
ಬೆಲ್ಜಿಯಂ
ಕಾರ್ಯಕರ್ತರನ್ನು ಬಂಧಿಸಿ, ಕೈಕಟ್ಟಿ, ಮುಖ ಕೆಳಗೆ ಮಾಡಿ ನಡೆಸಿಕೊಂಡಿರುವುದು “ತೀವ್ರ ಕಳವಳಕಾರಿ” ಮತ್ತು “ಸ್ವೀಕಾರಾರ್ಹವಲ್ಲ” ಎಂದು ಬೆಲ್ಜಿಯಂ ಹೇಳಿದೆ.
“ಸರ್ಕಾರದ ಸಚಿವರೊಬ್ಬರು ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ಮತ್ತಷ್ಟು ಬೇಸರ ಮೂಡಿಸಿದೆ” ಎಂದು ವಿದೇಶಾಂಗ ಸಚಿವೆ ಮ್ಯಾಕ್ಸಿಮ್ ಪ್ರೀವೋಟ್ ಹೇಳಿದ್ದಾರೆ.
ಕಾರ್ಯಕರ್ತರ ತಕ್ಷಣದ ಬಿಡುಗಡೆಗೆ ಒತ್ತಾಯಿಸಿ ಇಸ್ರೇಲ್ ರಾಯಭಾರಿಯನ್ನು ಬೆಲ್ಜಿಯಂ ಕರೆಸಿದೆ.
ಕೆನಡಾ
ಫ್ಲೋಟಿಲ್ಲಾದಲ್ಲಿದ್ದ ನಾಗರಿಕರನ್ನು ನಡೆಸಿಕೊಂಡಿರುವ ರೀತಿಗೆ ಕೆನಡಾ ಆಕ್ಷೇಪ ವ್ಯಕ್ತಪಡಿಸಿದೆ.
“ನಾಗರಿಕರ ಮೇಲಿನ ದೌರ್ಜನ್ಯ ಕುರಿತು ಸ್ಪಷ್ಟನೆ ಪಡೆಯಲು ಇಸ್ರೇಲ್ ರಾಯಭಾರಿಯನ್ನು ಕರೆಸಲಾಗಿದೆ” ಎಂದು ವಿದೇಶಾಂಗ ಸಚಿವೆ ಅನಿತಾ ಆನಂದ್ ಹೇಳಿದ್ದಾರೆ.
ಯುನೈಟೆಡ್ ಕಿಂಗ್‌ಡಮ್
ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಯೆವೆಟ್ ಕೂಪರ್, “ಕಾರ್ಯಕರ್ತರನ್ನು ಅವಮಾನಿಸುವ ರೀತಿಯ ವೀಡಿಯೊ ದಿಗಿಲು ಮೂಡಿಸಿದೆ” ಎಂದು ಹೇಳಿದ್ದಾರೆ.
ಈ ಕುರಿತು ಟೆಲ್ ಅವಿವ್‌ನಿಂದ ವಿವರಣೆ ಕೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಐರ್ಲೆಂಡ್
ಐರ್ಲೆಂಡ್ ಪ್ರಧಾನಿ ಮೈಕೆಲ್ ಮಾರ್ಟಿನ್, “ಅಕ್ರಮವಾಗಿ ಬಂಧಿಸಲ್ಪಟ್ಟ ಕಾರ್ಯಕರ್ತರ ವಿರುದ್ಧದ ವರ್ತನೆ ಆಘಾತಕಾರಿ” ಎಂದು ಹೇಳಿದ್ದಾರೆ.
ಇಸ್ರೇಲ್‌ನ ಕ್ರಮಗಳು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿವೆ ಎಂದು ಅವರು ಆರೋಪಿಸಿದ್ದಾರೆ.
ನೆದರ್ಲ್ಯಾಂಡ್ಸ್
ಫ್ಲೋಟಿಲ್ಲಾ ಕಾರ್ಯಕರ್ತರ ಮೇಲಿನ ವರ್ತನೆ “ಆಘಾತಕಾರಿ ಮತ್ತು ಸಂಪೂರ್ಣ ಸ್ವೀಕಾರಾರ್ಹವಲ್ಲ” ಎಂದು ನೆದರ್ಲ್ಯಾಂಡ್ಸ್ ವಿದೇಶಾಂಗ ಸಚಿವರು ಹೇಳಿದ್ದಾರೆ.
ಈ ಕುರಿತು ಇಸ್ರೇಲ್ ರಾಯಭಾರಿಯನ್ನು ಕರೆಸುವುದಾಗಿ ಅವರು ತಿಳಿಸಿದ್ದಾರೆ.
ಸ್ಲೊವೇನಿಯಾ
ಕಾರ್ಯಕರ್ತರ ಮೇಲಿನ ವರ್ತನೆಯನ್ನು ಸ್ಲೊವೇನಿಯಾ “ಭಯಾನಕ, ಆಘಾತಕಾರಿ ಮತ್ತು ಸಂಪೂರ್ಣ ಅಸ್ವೀಕಾರಾರ್ಹ” ಎಂದು ಕರೆದಿದೆ.
ಸ್ಪೇನ್
ಸ್ಪೇನ್ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬಾರೆಸ್, “ಫ್ಲೋಟಿಲ್ಲಾ ಸದಸ್ಯರನ್ನು ಅಮಾನವೀಯ ಹಾಗೂ ಅವಮಾನಕರವಾಗಿ ನಡೆಸಿಕೊಂಡಿರುವ ವೀಡಿಯೊ ನೋಡಿ ಬೆಚ್ಚಿಬಿದ್ದಿದ್ದೇನೆ” ಎಂದು ಹೇಳಿದ್ದಾರೆ.
ಈ ಕುರಿತು ಇಸ್ರೇಲ್‌ನ ಚಾರ್ಜ್ ಡಿ’ಅಫೇರ್ಸ್‌ಗೆ ಸ್ಪೇನ್ ಕರೆ ನೀಡಿದೆ.
ಫ್ರಾನ್ಸ್
ಫ್ರಾನ್ಸ್ ವಿದೇಶಾಂಗ ಸಚಿವ ಜೀನ್–ನೋಯೆಲ್ ಬ್ಯಾರಟ್ ಘಟನೆಯ ಕುರಿತು “ತೀವ್ರ ಆಕ್ರೋಶ” ವ್ಯಕ್ತಪಡಿಸಿದ್ದಾರೆ.
ವಿವರಣೆ ಪಡೆಯಲು ಇಸ್ರೇಲ್ ರಾಯಭಾರಿಯನ್ನು ಕರೆಸಲಾಗಿದೆ ಎಂದು ತಿಳಿಸಿದ್ದಾರೆ.
ಪೋರ್ಚುಗಲ್
ಇಸ್ರೇಲಿ ಸಚಿವ ಬೆನ್ ಗ್ವಿರ್ ಅವರ “ಅಸಹನೀಯ ನಡವಳಿಕೆ” ಮತ್ತು ಕಾರ್ಯಕರ್ತರ ಮೇಲಿನ ವರ್ತನೆ “ಮಾನವ ಘನತೆಗೆ ಅವಮಾನ” ಎಂದು ಪೋರ್ಚುಗಲ್ ಹೇಳಿದೆ.
ಜರ್ಮನಿ
ಬಂಧಿತ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ “ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಎಂದು ಜರ್ಮನಿಯ ಇಸ್ರೇಲ್ ರಾಯಭಾರಿ ಹೇಳಿದ್ದಾರೆ.
ಗ್ರೀಸ್
“ಫ್ಲೋಟಿಲ್ಲಾದ ನಾಗರಿಕರನ್ನು ಗುರಿಯಾಗಿಸಿಕೊಂಡ ಇಸ್ರೇಲಿ ರಾಷ್ಟ್ರೀಯ ಭದ್ರತಾ ಸಚಿವರ ವರ್ತನೆ ಸಂಪೂರ್ಣ ಖಂಡನೀಯ” ಎಂದು ಗ್ರೀಸ್ ವಿದೇಶಾಂಗ ಸಚಿವಾಲಯ ಹೇಳಿದೆ.
ಹಮಾಸ್ ಪ್ರತಿಕ್ರಿಯೆ
ಇಸ್ರೇಲ್ ಸಚಿವ ಬಿಡುಗಡೆ ಮಾಡಿದ ದೃಶ್ಯಗಳು “ಇಸ್ರೇಲ್ ನಾಯಕತ್ವದ ನೈತಿಕ ಅಧಃಪತನ ಮತ್ತು ಕ್ರೌರ್ಯದ ಪ್ರತಿಬಿಂಬ” ಎಂದು ಹಮಾಸ್ ಹೇಳಿದೆ.
ಇದೇ ಮೊದಲ ಘಟನೆ ಅಲ್ಲ
ಫ್ಲೋಟಿಲ್ಲಾ ವಿರುದ್ಧ ಇಸ್ರೇಲ್ ಕೈಗೊಂಡ ಕ್ರಮ ಇದೇ ಮೊದಲಲ್ಲ. ಎಪ್ರಿಲ್ ಅಂತ್ಯದಲ್ಲೂ ಗ್ರೀಕ್ ದ್ವೀಪ ಕ್ರೀಟ್ ಸಮೀಪ ಅಂತರರಾಷ್ಟ್ರೀಯ ನೀರಿನಲ್ಲಿ ಫ್ಲೋಟಿಲ್ಲಾ ದೋಣಿಗಳ ಮೇಲೆ ಇಸ್ರೇಲಿ ಪಡೆ ದಾಳಿ ನಡೆಸಿತ್ತು. ಆಗ 39 ದೇಶಗಳ 345 ಮಂದಿ ಕಾರ್ಯಕರ್ತರು ಬೆಂಗಾವಲು ಪಡೆಯಲ್ಲಿ ಭಾಗವಹಿಸಿದ್ದರು.
2007ರಿಂದ ಗಾಝಾದ ಮೇಲೆ ಇಸ್ರೇಲ್ ದಿಗ್ಬಂಧನ ಮುಂದುವರಿದಿದ್ದು, ಸುಮಾರು 2.4 ಮಿಲಿಯನ್ ಜನರು ತೀವ್ರ ಆಹಾರ ಕೊರತೆ ಮತ್ತು ಮಾನವೀಯ ಸಂಕಷ್ಟ ಎದುರಿಸುತ್ತಿದ್ದಾರೆ.