ವಿಲಿಯಂ ರುಟೊ |Photo Credit : indiatoday.in 

ನೈರೋಬಿ: ಕೀನ್ಯಾದ ಕಜಿಯಾಡೊ ಕೌಂಟಿಯ ಲೇಕ್ ಮಾಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟಾಟಾ ಕೆಮಿಕಲ್ಸ್‌ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಆದೇಶಿಸಿದ್ದಾರೆ.

ಟಾಟಾ ಕೆಮಿಕಲ್ಸ್‌ ಒಂದು ಶತಮಾನಕ್ಕೂ ಹೆಚ್ಚು ಕಾಲ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕಜಿಯಾಡೊದಲ್ಲಿ ಸಾಕಷ್ಟು ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಕೊಡುಗೆ ನೀಡಿಲ್ಲ ಎಂದು ರುಟೊ ಆರೋಪಿಸಿದ್ದಾರೆ.

ದಕ್ಷಿಣ ಕೀನ್ಯಾದ ಕಜಿಯಾಡೊದಲ್ಲಿ ಗುರುವಾರ ನಡೆದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಟಾಟಾ ಕೆಮಿಕಲ್ಸ್‌ ಬದಲಿಗೆ ಹೊಸ ಹೂಡಿಕೆದಾರರನ್ನು ಕರೆತರಲಾಗುವುದು. ಕಜಿಯಾಡೊದಲ್ಲಿ ದೊಡ್ಡ ಗಾಜಿನ ಕಾರ್ಖಾನೆ ಸ್ಥಾಪಿಸುವುದರ ಜತೆಗೆ ರಾಸಾಯನಿಕಗಳ ತಯಾರಿಕೆಗೂ ಅವಕಾಶ ಕಲ್ಪಿಸಲಾಗುವುದು ಎಂದರು.

‘ಟಾಟಾ ಕಂಪೆನಿ 100 ವರ್ಷಗಳಿಂದ ಆ ಒಪ್ಪಂದವನ್ನು ಹೊಂದಿದೆ. ಆದರೆ ಕಜಿಯಾಡೊದಲ್ಲಿ ಅವರು ಏನನ್ನೂ ನಿರ್ಮಿಸಿಲ್ಲ. ಯಾವುದೇ ಕಾರ್ಖಾನೆಯನ್ನೂ ಸ್ಥಾಪಿಸಿಲ್ಲ’ ಎಂದು ರುಟೊ ಹೇಳಿದರು.

‘ನಾವು ಹೊಸ ಕಂಪೆನಿಯನ್ನು ಕರೆತರುತ್ತೇವೆ. ಅದು ಇಲ್ಲಿ ದೊಡ್ಡ ಗಾಜಿನ ಕಂಪೆನಿ ಸ್ಥಾಪಿಸಬೇಕು. ಮತ್ತೊಂದು ಕಂಪೆನಿ ಕಜಿಯಾಡೊದಲ್ಲೇ ರಾಸಾಯನಿಕಗಳನ್ನು ತಯಾರಿಸಬೇಕು. ನಾವು ಇತರ ಜನರಿಗೆ ಗುಲಾಮರೇ?’ ಎಂದು ಅವರು ಪ್ರಶ್ನಿಸಿದರು.

ಸ್ಥಳೀಯರಿಗೇ ಸಂಪನ್ಮೂಲದ ಲಾಭ

ಕೀನ್ಯಾದ ನೈಸರ್ಗಿಕ ಸಂಪನ್ಮೂಲಗಳಿಂದ ಮೊದಲು ಕೀನ್ಯಾದವರಿಗೇ ಪ್ರಯೋಜನವಾಗಬೇಕು ಎಂದು ರುಟೊ ಹೇಳಿದರು. ಸಂಪನ್ಮೂಲಗಳನ್ನು ಹೊರತೆಗೆದು ಸಂಸ್ಕರಣೆಗಾಗಿ ಬೇರೆಡೆಗೆ ಕಳುಹಿಸುವ ಬದಲು, ಅವುಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ದೇಶದಲ್ಲೇ ನಡೆಯಬೇಕು ಎಂದರು.

ಸ್ಥಳೀಯ ಸಮುದಾಯಗಳಿಗೆ ಉದ್ಯೋಗ, ಹೂಡಿಕೆ ಮತ್ತು ಇತರ ಆರ್ಥಿಕ ಅವಕಾಶಗಳು ದೊರೆಯಬೇಕು. ಸಂಪನ್ಮೂಲ ಅಭಿವೃದ್ಧಿಯು ಕೈಗಾರಿಕೀಕರಣ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾಗಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ಅವರು ಹೇಳಿದರು.

ಕೀನ್ಯಾದ ‘ದಿ ಸ್ಟಾರ್’ ವರದಿ ಪ್ರಕಾರ, ಟಾಟಾ ಕೆಮಿಕಲ್ಸ್‌ ನಿಂದ ಅಸಮರ್ಪಕ ಸ್ಥಳೀಯ ಹೂಡಿಕೆ ಮತ್ತು ಕಜಿಯಾಡೊದಲ್ಲಿ ಮೌಲ್ಯವರ್ಧನೆಯ ಕೊರತೆಯೇ ಈ ನಿರ್ಧಾರಕ್ಕೆ ಕಾರಣ ಎಂದು ರುಟೊ ಹೇಳಿದ್ದಾರೆ.

ಲೇಕ್ ಮಾಗಡಿ ಹಾಗೂ ಕಜಿಯಾಡೊ ಕೌಂಟಿಯ ಇತರ ಸಂಪನ್ಮೂಲಗಳನ್ನು ಸ್ಥಳೀಯವಾಗಿಯೇ ಸಂಸ್ಕರಿಸಿದರೆ ಹೆಚ್ಚಿನ ಆರ್ಥಿಕ ಮೌಲ್ಯವನ್ನು ಕೀನ್ಯಾದಲ್ಲೇ ಉಳಿಸಿಕೊಳ್ಳಬಹುದು. ಉದ್ಯೋಗ, ಉತ್ಪಾದನೆ, ತೆರಿಗೆ ಆದಾಯ ಸೇರಿದಂತೆ ಸ್ಥಳೀಯರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ರುಟೊ ವಿರುದ್ಧ ವಿರೋಧ ಪಕ್ಷದ ಆರೋಪ

ಟಾಟಾ ಕೆಮಿಕಲ್ಸ್‌ ಕಾರ್ಯಾಚರಣೆ ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರವನ್ನು ಕೀನ್ಯಾದ ಡೆಮಾಕ್ರಸಿ ಫಾರ್ ದಿ ಸಿಟಿಜನ್ಸ್ ಪಾರ್ಟಿ (ಡಿಸಿಪಿ) ವಿರೋಧಿಸಿದೆ. ಈ ಕ್ರಮವು ರುಟೊ ಅವರ ಪ್ರದೇಶದಲ್ಲಿನ ವ್ಯಾಪಾರ ಹಿತಾಸಕ್ತಿಗಳಿಗೆ ಸಂಬಂಧಿಸಿದೆ ಎಂದು ಪಕ್ಷ ಆರೋಪಿಸಿದೆ.

‘ಸಿಟಿಜನ್ ಡಿಜಿಟಲ್’ ವರದಿ ಪ್ರಕಾರ, ಡಿಸಿಪಿ ಈ ನಿರ್ಧಾರವನ್ನು ‘ರಾಜ್ಯ ಪ್ರಾಯೋಜಿತ ಆರ್ಥಿಕ ವಿಧ್ವಂಸಕ ಕೃತ್ಯ’ ಎಂದು ಕರೆದಿದೆ. ಇದರಿಂದ ಮಾಗಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ 1 ಲಕ್ಷಕ್ಕೂ ಅಧಿಕ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು ಎಂದು ಪಕ್ಷ ಹೇಳಿದೆ.

ಮಾಗಡಿ ಪ್ರದೇಶದ ಕೆಳಗೆ ಟ್ರಿಲಿಯನ್‌ ಗಟ್ಟಲೆ ಕೀನ್ಯಾ ಶಿಲ್ಲಿಂಗ್‌ ಗಳಷ್ಟು ಮೌಲ್ಯದ ಲಿಥಿಯಂ ನಿಕ್ಷೇಪಗಳಿವೆ. ಟಾಟಾ ಕೆಮಿಕಲ್ಸ್‌ ಕಾರ್ಯನಿರ್ವಹಿಸುವ ಪ್ರದೇಶದ ಸುತ್ತಮುತ್ತ ಬೃಹತ್ ತೈಲ ನಿಕ್ಷೇಪಗಳೂ ಇವೆ ಎಂದು ಡಿಸಿಪಿ ಆರೋಪಿಸಿದೆ.

‘ಮಾಗಡಿ ಪ್ರದೇಶದ ಕೆಳಗೆ ಟ್ರಿಲಿಯನ್‌ ಗಟ್ಟಲೆ ಶಿಲ್ಲಿಂಗ್‌ಗಳಷ್ಟು ಮೌಲ್ಯದ ಲಿಥಿಯಂ ಲೋಹಗಳ ಬೃಹತ್ ನಿಕ್ಷೇಪಗಳಿವೆ. ಅಲ್ಲದೆ, ಟಾಟಾ ಕೆಮಿಕಲ್ಸ್‌ ಲಿಮಿಟೆಡ್ ಕಾರ್ಯನಿರ್ವಹಿಸುವ ಅದೇ ಸುತ್ತಮುತ್ತಲ ಪ್ರದೇಶದಲ್ಲಿ ಬೃಹತ್ ತೈಲ ನಿಕ್ಷೇಪಗಳಿವೆ’ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.

ಇತರ ಹಿತಾಸಕ್ತಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಟಾಟಾ ಕೆಮಿಕಲ್ಸ್‌ ಅನ್ನು ಹೊರಹಾಕಲು ರುಟೊ ಪ್ರಯತ್ನಿಸುತ್ತಿದ್ದಾರೆ ಎಂದು ಡಿಸಿಪಿ ಆರೋಪಿಸಿದೆ.

ಮುಚ್ಚುವ ಆದೇಶವನ್ನು ಹಿಂಪಡೆಯಬೇಕು ಎಂದು ಪಕ್ಷ ಒತ್ತಾಯಿಸಿದೆ. ನಿರ್ಧಾರದಿಂದ ಉದ್ಯೋಗ ನಷ್ಟವಾಗುವುದಲ್ಲದೆ, ಮೂಲಸೌಕರ್ಯ ಮತ್ತು ಅಗತ್ಯ ಸೇವೆಗಳ ಮೇಲೂ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.

ನೀರಿನ ಸಂಸ್ಕರಣೆಯಲ್ಲಿ ಬಳಸುವ ಸೋಡಾ ಬೂದಿಯ ಪೂರೈಕೆಯ ಬಗ್ಗೆಯೂ ಪಕ್ಷ ಕಳವಳ ವ್ಯಕ್ತಪಡಿಸಿದೆ. ಪೂರೈಕೆಯಲ್ಲಿ ದೀರ್ಘಕಾಲ ವ್ಯತ್ಯಯ ಉಂಟಾದರೆ ನೈರೋಬಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೂ ಪರಿಣಾಮ ಬೀರಬಹುದು ಎಂದು ಅದು ಹೇಳಿದೆ.

‘ವರ್ಷಗಳಿಂದ ಮಾತುಕತೆ ನಡೆಸಿದ್ದೇವೆ’

ಕೀನ್ಯಾದ ಗಣಿಗಾರಿಕೆ ಸಚಿವ ಸಂಪುಟ ಕಾರ್ಯದರ್ಶಿ ಹಸನ್ ಜೊಹೊ, ಟಾಟಾ ಕೆಮಿಕಲ್ಸ್‌ ಜತೆ ಹಲವು ವರ್ಷಗಳಿಂದ ಮಾತುಕತೆ ನಡೆಸಲು ಸಚಿವಾಲಯ ಪ್ರಯತ್ನಿಸುತ್ತಿದೆ. ಆದರೆ ಕಂಪೆನಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಲೇಕ್ ಮಾಗಡಿಯಲ್ಲಿ ಗಣಿಗಾರಿಕೆ ಕಾರ್ಯಾಚರಣೆಗಳನ್ನು ಪುನರಾರಂಭಿಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೀನ್ಯಾದ ಹೈಕೋರ್ಟ್ ನವೆಂಬರ್ 18ರಂದು ನಡೆಸಲಿದೆ.

1911ರಿಂದ ಕಾರ್ಯಾಚರಣೆ

‘ಸಿಟಿಜನ್ ಡಿಜಿಟಲ್’ ವರದಿ ಪ್ರಕಾರ, ಜುಲೈ ಅಂತ್ಯದಲ್ಲಿ ಕೀನ್ಯಾ ಸರ್ಕಾರ ಟಾಟಾ ಕೆಮಿಕಲ್ಸ್‌ನ ಕೀನ್ಯಾ ಘಟಕಕ್ಕೆ ಮಾಗಡಿ ಸೋಡಾ ಕಾರ್ಖಾನೆಯ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಹಾಗೂ ಸೋಡಾ ಬೂದಿ ರಫ್ತು ನಿಲ್ಲಿಸುವಂತೆ ನಿರ್ದೇಶಿಸಿತ್ತು.

ಟಾಟಾ ಕೆಮಿಕಲ್ಸ್‌ 1911ರಿಂದ ಲೇಕ್ ಮಾಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಗ ಅದು ಮಾಗಡಿ ಸೋಡಾ ಕಂಪೆನಿ ಹೆಸರಿನಲ್ಲಿ ಕಾರ್ಯಾರಂಭ ಮಾಡಿತ್ತು. ಟಾಟಾ ಕೆಮಿಕಲ್ಸ್‌ 2005ರಲ್ಲಿ ಇದರ ಮಾಲೀಕತ್ವ ಪಡೆದುಕೊಂಡಿತು.

ಕಂಪೆನಿಯು ಲೇಕ್ ಮಾಗಡಿಯಿಂದ ಟ್ರೋನಾವನ್ನು ಹೊರತೆಗೆದು ಸಂಸ್ಕರಿಸುವ ಮೂಲಕ ನೈಸರ್ಗಿಕ ಸೋಡಾ ಬೂದಿ ಅಥವಾ ಸೋಡಿಯಂ ಕಾರ್ಬೋನೇಟ್ ಉತ್ಪಾದಿಸುತ್ತದೆ. ಗಾಜು, ಡಿಟರ್ಜೆಂಟ್‌ ಗಳು ಮತ್ತು ರಾಸಾಯನಿಕಗಳ ತಯಾರಿಕೆ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಹಾಗೂ ನೀರಿನ ಸಂಸ್ಕರಣೆಯಲ್ಲಿ ಸೋಡಾ ಬೂದಿಯನ್ನು ಬಳಸಲಾಗುತ್ತದೆ.

ಈ ಘಟಕ ಕೀನ್ಯಾದ ಪ್ರಮುಖ ರಫ್ತು ಉದ್ಯಮಗಳಲ್ಲೊಂದಾಗಿದೆ. ಭಾರತ, ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ವಿವಿಧ ಮಾರುಕಟ್ಟೆಗಳಿಗೆ ವರ್ಷಕ್ಕೆ 3.5 ಲಕ್ಷ ಟನ್‌ ಗಳಿಗೂ ಅಧಿಕ ಸೋಡಾ ಬೂದಿಯನ್ನು ರಫ್ತು ಮಾಡಲಾಗುತ್ತದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor