Photo Credit : PTI

ಕಠ್ಮಂಡು, ಸೆ. 2: ದಿಢೀರ್ ಪ್ರವಾಹದಿಂದ ತತ್ತರಿಸಿರುವ ನೇಪಾಳದ ವಿವಿಧೆಡೆ ಬುಧವಾರ ವ್ಯಾಪಕ ಮಳೆಯಾಗುತ್ತಿದ್ದು, ಮೂರು ಪ್ರಮುಖ ನದಿಗಳಲ್ಲಿ ನೀರು ಅಪಾಯದ ಮಟ್ಟವನ್ನು ಸಮೀಪಿಸುತ್ತಿರುವುದರಿಂದ ಅಧಿಕಾರಿಗಳು ತೀರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಿದ್ದಾರೆ.

ಸಿಂಧೂಲಿ ಜಿಲ್ಲೆಯಲ್ಲಿ ಸುನ್ ಕೋಶಿ, ಗೋರ್ಖಾ ಜಿಲ್ಲೆಯಲ್ಲಿ ಗಂಡಕಿ ಹಾಗೂ ದಾದೆಲ್ಧುರಾದಲ್ಲಿ ಮಹಾಕಾಳಿ ನದಿಯು ಬುಧವಾರ ಮುಂಜಾನೆ 6 ಗಂಟೆಯ ವೇಳೆಗೆ ಅಪಾಯದ ಮಟ್ಟವನ್ನು ಸಮೀಪಿಸುತ್ತಿದೆ ಎಂದು ನೇಪಾಳದ ಜಲಶಾಸ್ತ್ರ ಹಾಗೂ ಹವಾಮಾನ ಇಲಾಖೆಯ ಪ್ರವಾಹ ಮುನ್ಸೂಚನೆ ವಿಭಾಗವು ತಿಳಿಸಿದೆ.

ಲಾಮ್ ಜುಂಗ್ ಜಿಲ್ಲೆಯಲ್ಲಿ ಭುಕಬೆಬ್ಸಿ ನದಿಯ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಕಟ್ಟೆಚ್ಚರದಲ್ಲಿರುವಂತೆ ರಾಷ್ಟ್ರೀಯ ವಿಪತ್ತು ಶಮನ ಹಾಗೂ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ತಗ್ಗು ಪ್ರದೇಶಗಳಲ್ಲಿ ವಾಸವಾಗಿರುವ ಜನರು ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಅವರು ಆಗ್ರಹಿಸಿದ್ದಾರೆ.

ದಿಢೀರ್ ಪ್ರವಾಹಕ್ಕೆ ಸಂಬಂಧಿಸಿ ನೇಪಾಳಕ್ಕೆ ನೀಡುವ ನೆರವು ದಾನವಾಗಿರುವುದಿಲ್ಲ. ಅದು ಕಾನೂನುಬದ್ಧ ಹಾಗೂ ನೈತಿಕ ಬಾಧ್ಯತೆಯಾಗಿದೆ. ಜಗತ್ತಿನ ಅತಿ ದೊಡ್ಡ ಇಂಗಾಲಾಮ್ಲ ಹೊರಸೂಸುವ ದೇಶವಾದ ಚೀನಾ, ಎರಡನೇ ಸ್ಥಾನದಲ್ಲಿರುವ ಅಮೆರಿಕ ಮತ್ತು ತೃತೀಯ ಸ್ಥಾನದಲ್ಲಿರುವ ಭಾರತದಂತಹ ದೇಶಗಳು, ನೇಪಾಳದಂತಹ ಪಾರಿಸಾರಿಕವಾಗಿ ದುರ್ಬಲವಾದ ದೇಶಗಳಿಗೆ ಪರಿಹಾರ ನೀಡಬೇಕಾದಂತಹ ಐತಿಹಾಸಿಕ ಹೊಣೆಗಾರಿಕೆಯಿದೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಕನಾಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor