ನೇಪಾಳ | ಪ್ರವಾಹ ಪೀಡಿತ ಪ್ರದೇಶ ತಲುಪಲು ವಿಶ್ವಸಂಸ್ಥೆ ಕಸರತ್ತು: ಸರಕು ಡ್ರೋನ್‍ಗಳು, ಹಿಮಾಲಯನ್ ಪೋರ್ಟರ್ ಗಳ ಮೊರೆ
Photo Credit : PTI
ಕಠ್ಮಂಡು: ಧ್ವಂಸಗೊಂಡ ರಸ್ತೆಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ನೇಪಾಳದ ಪ್ರವಾಹ ಸಂತ್ರಸ್ತರನ್ನು ತಲುಪುವುದು ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಪ್ರತ್ಯೇಕಿಸಲ್ಪಟ್ಟ ಹಿಮಾಲಯನ್ ಪ್ರದೇಶಗಳನ್ನು ತಲುಪಲು ಸರಕು ಡ್ರೋನ್‍ಗಳು ಮತ್ತು ಪೋರ್ಟರ್‌ಗಳನ್ನು (ಹೊರೆ ಹೊರುವವರನ್ನು) ಬಳಸಲು ಚಿಂತಿಸುತ್ತಿರುವುದಾಗಿ ವಿಶ್ವಸಂಸ್ಥೆ ಗುರುವಾರ ತಿಳಿಸಿದೆ.
`ಈ ದುರಂತದ ಪ್ರಮಾಣ ಮತ್ತು ವಿನಾಶದ ತೀವ್ರತೆ ನಿಜಕ್ಕೂ ನಂಬಲಾಗದಂತಿದೆ' ಎಂದು ನೇಪಾಳದಲ್ಲಿ ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕಿ ಲೀಲಾ ಪೀಟರ್ಸ್ ಯಹಿಯಾ ಸುದ್ದಿಗಾರರಿಗೆ ತಿಳಿಸಿದರು.
ವಿಶ್ವಸಂಸ್ಥೆಯ ಸಹಸಂಸ್ಥೆಗಳು ನೀರು, ನೈರ್ಮಲ್ಯ ಕಿಟ್‍ಗಳು, ಆಹಾರ ಮತ್ತು ಔಷಧಿಗಳನ್ನು ತಲುಪಿಸಿವೆ. ನೆರವು ತಲುಪಿಸಲು ಹೆಲಿಕಾಪ್ಟರ್‌ಗಳು ಮತ್ತು ಸರಕು ಡ್ರೋನ್‍ಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ನಾವು ಸರಕಾರದೊಂದಿಗೆ ಚರ್ಚಿಸುತ್ತಿದ್ದೇವೆ. ಚಾರಣ ಮತ್ತು ಪರ್ವತಾರೋಹಣದ ಸಮಯದಲ್ಲಿ ಕಠಿಣ ಪರ್ವತ ಶ್ರೇಣಿಗಳಲ್ಲಿ ಭಾರಿ ಹೊರೆಯನ್ನು ಹೊರಲು ರೂಢಿಸಿಕೊಂಡಿರುವ ನೇಪಾಳದ ಪೋರ್ಟರ್‌ಗಳ ನೆರವನ್ನು ಸಹ ಪಡೆಯಲಾಗುವುದು ಎಂದು ಲೀಲಾ ಯಹಿಯಾ ಹೇಳಿದರು.
ನೇಪಾಳ ಮತ್ತು ಚೀನಾದ ಟಿಬೆಟ್ ಎರಡೂ ಪ್ರದೇಶಗಳಲ್ಲಿ ಪ್ರವಾಸಿಗರು ಮತ್ತು ಯಾತ್ರಿಕರು ಸೇರಿದಂತೆ ಕನಿಷ್ಠ 34 ದೇಶಗಳ 800ಕ್ಕೂ ಹೆಚ್ಚು ವಿದೇಶಿಯರು ನಾಪತ್ತೆಯಾಗಿದ್ದಾರೆ. ದುರಂತದ ಕೇಂದ್ರಬಿಂದುವಿನ ಬಳಿ ಇರುವ ಸಮುದಾಯಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ವಿಶ್ವಸಂಸ್ಥೆಯು ನೇಪಾಳ ಸರಕಾರದೊಂದಿಗೆ ಕೈಜೋಡಿಸಿ ಸಂಕಷ್ಟದಲ್ಲಿರುವ ಪ್ರದೇಶಗಳಿಗೆ ತುರ್ತು ಸರಬರಾಜು ತಲುಪಿಸಲು ಕೆಲಸ ಮಾಡುತ್ತಿದೆ.
ಮೃತರನ್ನು ಗುರುತಿಸಲು ಮತ್ತು ಸ್ಥಳಾಂತರಿಸಲು ಹೆವಿ-ಲಿಫ್ಟ್ ಡ್ರೋನ್‍ಗಳು, ತಾತ್ಕಾಲಿಕ ಸೇತುವೆಗಳು ಮತ್ತು ಡಿಎನ್‍ಎ ಪರೀಕ್ಷಾ ಕಿಟ್‍ಗಳು ಸೇರಿದಂತೆ ನೇಪಾಳಕ್ಕೆ ವಿಶೇಷ ಅಂತರಾಷ್ಟ್ರೀಯ ನೆರವಿನ ಅಗತ್ಯವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲೋಕ್ ಬಹದ್ದೂರ್ ಪೌಡೆಲ್ ಛೇತ್ರಿ ಹೇಳಿದ್ದಾರೆ. 21,000 ಕ್ಕೂ ಹೆಚ್ಚು ನೇಪಾಳಿ ಭದ್ರತಾ ಸಿಬ್ಬಂದಿ ಶೋಧ, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸಾವಿನ ಸಂಖ್ಯೆ 1,252 ಕ್ಕೆ ಏರಿಕೆ; ಸತತ ಮಳೆಯಿಂದಾಗಿ ಮತ್ತೆ ಪ್ರವಾಹದ ಭೀತಿ
ಹಾನಿಗೊಳಗಾದ ಪ್ರದೇಶಗಳಿಂದ ಇನ್ನಷ್ಟು ಮೃತದೇಹಗಳನ್ನು ಹೊರತೆಗೆಯಲಾಗಿದ್ದು ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹಕ್ಕೆ ಮೃತರ ಸಂಖ್ಯೆ ಗುರುವಾರ 1,252 ಕ್ಕೆ ಏರಿಕೆಯಾಗಿದೆ. ಈ ಮಧ್ಯೆ, ಭೋಟೇಕೋಶಿ ನದಿಯ ಮೇಲ್ಭಾಗದ ಪ್ರದೇಶಗಳಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಮತ್ತೆ ಹೊಸದಾಗಿ ಪ್ರವಾಹ ಬರುವ ಅಪಾಯ ಎದುರಾಗಿದೆ.
ಭೋಟೇಕೋಶಿ ನದಿಯ ಮೇಲ್ಭಾಗದ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ, ಭೋಟೇಕೋಶಿ ಮತ್ತು ತ್ರಿಶೂಲಿ ನದಿಗಳು ಸೇರಿದಂತೆ ರಸುವಾ ಮತ್ತು ನುವಾಕೋಟ್ ಜಿಲ್ಲೆಗಳ ಮೂಲಕ ಹರಿಯುವ ಸಣ್ಣ ನದಿಗಳು ಹಾಗೂ ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.