ಉಕ್ರೇನ್ ಗೆ ಫಿರಂಗಿ ಗುಂಡು ಪೂರೈಕೆ ಒಪ್ಪಂದ ವಿವಾದ: ಎಸ್ಟೋನಿಯಾ ರಕ್ಷಣಾ ಸಚಿವ ರಾಜೀನಾಮೆ
ಫಿರಂಗಿ ಗುಂಡು ತಯಾರಿಕೆ ಅನುಭವವಿಲ್ಲದ ಭಾರತದ ಮೂಲದ ಕಂಪೆನಿಗೆ 70 ದಶಲಕ್ಷ ಯೂರೋ ಮುಂಗಡ ಪಾವತಿ!
Photo Credit : indiatoday.in
ಟ್ಯಾಲಿನ್: ಉಕ್ರೇನ್ ಗೆ ಫಿರಂಗಿ ಗುಂಡುಗಳನ್ನು ಪೂರೈಸಲು ಭಾರತ ಮೂಲದ ಕಂಪೆನಿ ಒಡೆತನದ ಇಟಲಿ ನೋಂದಾಯಿತ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಸುಮಾರು 70 ದಶಲಕ್ಷ ಯೂರೊ (768.50 ಕೋಟಿ ರೂ.) ಮೌಲ್ಯದ ಒಪ್ಪಂದದಲ್ಲಿ ಉಂಟಾದ ಗಂಭೀರ ಲೋಪಗಳ ನೈತಿಕ ಹಾಗೂ ರಾಜಕೀಯ ಹೊಣೆ ಹೊತ್ತು ಎಸ್ಟೋನಿಯಾ ರಕ್ಷಣಾ ಸಚಿವ ಹ್ಯಾನೊ ಪೆವ್ಕೂರ್ ಬುಧವಾರ ರಾಜೀನಾಮೆ ನೀಡಿದ್ದಾರೆ.
ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಗೆ ಅಗತ್ಯವಿದ್ದ ಫಿರಂಗಿ ಗುಂಡುಗಳನ್ನು ಒದಗಿಸುವ ಉದ್ದೇಶದಿಂದ ಎಸ್ಟೋನಿಯಾದ ರಕ್ಷಣಾ ಹೂಡಿಕೆ ಕೇಂದ್ರ (RKIK) ಈ ಒಪ್ಪಂದಗಳನ್ನು ಮಾಡಿಕೊಂಡಿತ್ತು. ಆದರೆ ಒಪ್ಪಂದದಂತೆ ಶಸ್ತ್ರಾಸ್ತ್ರಗಳ ಪೂರೈಕೆ ಆಗಲಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣ ಇದೀಗ ನ್ಯಾಯಾಲಯ ಮತ್ತು ಅಂತರರಾಷ್ಟ್ರೀಯ ಮಧ್ಯಸ್ಥಿಕೆಗೆ ತಲುಪಿದೆ.
2022ರಿಂದ ರಕ್ಷಣಾ ಸಚಿವರಾಗಿರುವ ಪೆವ್ಕೂರ್, ಎಸ್ಟೋನಿಯಾದ ರಾಷ್ಟ್ರೀಯ ಲೆಕ್ಕಪರಿಶೋಧನಾ ಕಚೇರಿಯ ಪರಿಶೀಲನೆ ಹಾಗೂ ರಕ್ಷಣಾ ಖರೀದಿ ವಿವಾದದ ಹಿನ್ನೆಲೆಯಲ್ಲಿ ರಾಜಕೀಯ ಹೊಣೆಗಾರಿಕೆಯನ್ನು ಸ್ವೀಕರಿಸಿ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಅವರು, ಎಸ್ಟೋನಿಯಾದ ಭದ್ರತೆ ಏಕವ್ಯಕ್ತಿಯ ಯೋಜನೆಯಲ್ಲ; ಅದು ಜಂಟಿ ಹೊಣೆಗಾರಿಕೆ. ಹೀಗಾಗಿ ಇಡೀ ರಕ್ಷಣಾ ವಲಯದ ಪರವಾಗಿ ರಾಜಕೀಯ ಹೊಣೆಗಾರಿಕೆಯನ್ನು ತಾನು ಹೊರಬೇಕಿದೆ ಹಾಗೂ ಸೂಕ್ತ ಸಮಯದಲ್ಲಿ ಪ್ರಧಾನಿಗೆ ರಕ್ಷಣಾ ಸಚಿವರ ಹೊಣೆಗಾರಿಕೆಯನ್ನು ಹಸ್ತಾಂತರಿಸಬೇಕಿದೆ ಎಂದು ಹೇಳಿದ್ದಾರೆ.
ನಾಲ್ಕು ಒಪ್ಪಂದ
ವಿವಾದದ ಕೇಂದ್ರದಲ್ಲಿರುವ ದಾಟಾಸೆಲ್ SRL ಇಟಲಿಯಲ್ಲಿ ನೋಂದಣಿಯಾಗಿರುವ ಕಂಪೆನಿ. ಇದನ್ನು ಭಾರತ ಮೂಲದ ನೆಕೊ ಡಿಫೆನ್ಸ್ ಮ್ಯುನಿಷನ್ಸ್ 2024ರ ಮಾರ್ಚ್ ನಲ್ಲಿ ಖರೀದಿಸಿತ್ತು. ನಂತರ ಎಸ್ಟೋನಿಯಾದ ರಕ್ಷಣಾ ಹೂಡಿಕೆ ಕೇಂದ್ರವು ದಾಟಾಸೆಲ್ ನೊಂದಿಗೆ 2024ರಲ್ಲಿ ಒಟ್ಟು ನಾಲ್ಕು ಒಪ್ಪಂದಗಳನ್ನು ಮಾಡಿಕೊಂಡಿತ್ತು.
ಈ ಒಪ್ಪಂದಗಳ ಉದ್ದೇಶ ಉಕ್ರೇನ್ ಗೆ ಫಿರಂಗಿ ಗುಂಡುಗಳನ್ನು ಪೂರೈಸುವುದಾಗಿತ್ತು. ಆದರೆ ದಾಟಾಸೆಲ್ ಹಾಗೂ ಅದರ ಮಾಲೀಕ ಸಂಸ್ಥೆ ನೆಕೊ ಡಿಫೆನ್ಸ್ ಮ್ಯುನಿಷನ್ಸ್ ಎರಡೂ ಈ ಹಿಂದೆ ಫಿರಂಗಿ ಗುಂಡುಗಳನ್ನು ಉತ್ಪಾದಿಸಿದ ಅಥವಾ ಮಾರಾಟ ಮಾಡಿದ ದಾಖಲೆ ಹೊಂದಿರಲಿಲ್ಲ ಎಂದು ಎಸ್ಟೋನಿಯಾದ ಮಾಧ್ಯಮಗಳು ವರದಿ ಮಾಡಿವೆ.
70 ದಶಲಕ್ಷ ಯೂರೋ ಮುಂಗಡ
2024ರ ಆಗಸ್ಟ್ ನಲ್ಲಿ ಮೊದಲ ಒಪ್ಪಂದಕ್ಕೆ ಸಹಿ ಮಾಡಲಾಗಿದ್ದು, ಆಗ 15 ದಶಲಕ್ಷ ಯೂರೊಗಳನ್ನು ಮುಂಗಡವಾಗಿ ಪಾವತಿಸಲಾಗಿತ್ತು. ಅಕ್ಟೋಬರ್ ನಲ್ಲಿ ಮತ್ತೊಂದು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅದರಡಿ 10 ದಶಲಕ್ಷ ಯೂರೊ ಮುಂಗಡ ನೀಡಲಾಗಿತ್ತು. ಬಳಿಕ ಇನ್ನೆರಡು ಒಪ್ಪಂದಗಳಿಗೂ ಹಣ ಪಾವತಿಸಲಾಗಿದ್ದು, ನಾಲ್ಕು ಒಪ್ಪಂದಗಳಿಗೆ ನೀಡಿದ ಒಟ್ಟು ಮುಂಗಡ ಸುಮಾರು 70 ದಶಲಕ್ಷ ಯೂರೊಗೆ ತಲುಪಿತ್ತು.
ಈ ಹಣದ ಒಂದು ಭಾಗವು ಉಕ್ರೇನ್ ಗೆ ಸೇನಾ ನೆರವು ಒದಗಿಸಲು ಯೂರೋಪಿಯನ್ ಒಕ್ಕೂಟ ಸ್ಥಾಪಿಸಿರುವ ಯೂರೋಪಿಯನ್ ಶಾಂತಿ ಸೌಲಭ್ಯದಿಂದ ಬಂದಿತ್ತು. ಈ ಹಣವನ್ನು ಎಸ್ಟೋನಿಯಾ ವಾಪಸ್ ಪಾವತಿಸಬೇಕೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಯೂರೋಪಿಯನ್ ಕಮಿಷನ್ ತಿಳಿಸಿದೆ.
ಪೂರೈಕೆ ಬಗ್ಗೆ ಭಿನ್ನ ಹೇಳಿಕೆ
ಒಪ್ಪಂದದ ಪ್ರಕಾರ ಕೆಲವೇ ತಿಂಗಳಲ್ಲಿ ಫಿರಂಗಿ ಗುಂಡುಗಳು ಉಕ್ರೇನ್ ತಲುಪಬೇಕಿತ್ತು. ಆದರೆ ಪೂರೈಕೆ ವಿಳಂಬವಾಯಿತು. ಎಸ್ಟೋನಿಯಾದ ಪ್ರಕಾರ ಒಪ್ಪಂದದ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಶಸ್ತ್ರಾಸ್ತ್ರಗಳು ಬಂದಿಲ್ಲ.
ಎಸ್ಟೋನಿಯಾ ಒಪ್ಪಂದವನ್ನು ರದ್ದುಗೊಳಿಸಿ ಕಂಪೆನಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ. ಎಸ್ಟೋನಿಯಾದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಹಣದ ವಿಷಯ ಅಂತರರಾಷ್ಟ್ರೀಯ ಮಧ್ಯಸ್ಥಿಕೆಗೂ ತಲುಪಿದೆ.
ಆದರೆ ದಾಟಾಸೆಲ್ ಇದನ್ನು ಒಪ್ಪುತ್ತಿಲ್ಲ. ಕಂಪನಿಯು ತಾನು ಸುಮಾರು 59 ದಶಲಕ್ಷ ಯೂರೊ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಸಿರುವುದಾಗಿ ಹೇಳಿದೆ. ಎಸ್ಟೋನಿಯಾ ಒಪ್ಪಂದವನ್ನು ಕೊನೆಗೊಳಿಸದಿದ್ದರೆ ಉಳಿದ ಬದ್ಧತೆಗಳನ್ನೂ ಪೂರೈಸಬಹುದಾಗಿತ್ತು ಎಂದು ಕಂಪನಿ ವಾದಿಸಿದೆ.
ಎಸ್ಟೋನಿಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಬಂದಿದ್ದ ಸಾಮಗ್ರಿಗಳಲ್ಲಿ ಗುಣಮಟ್ಟ ಹಾಗೂ ಪೂರ್ಣತೆಯ ಸಮಸ್ಯೆಗಳಿದ್ದವು. ಸಚಿವ ಪೆವ್ಕೂರ್ ಕೂಡ ಅವು ಸಂಪೂರ್ಣವಾಗಿ ನಿರುಪಯುಕ್ತವಾಗಿರಲಿಲ್ಲ, ಆದರೆ ಗುಣಮಟ್ಟ ಕಡಿಮೆಯಾಗಿತ್ತು ಎಂದು ಹೇಳಿದ್ದಾರೆ.
ರಾಜಕೀಯ ಹೊಣೆಗಾರಿಕೆ
ರಕ್ಷಣಾ ಖರೀದಿ ಪ್ರಕ್ರಿಯೆ, ಮುಂಗಡವಾಗಿ ದೊಡ್ಡ ಮೊತ್ತದ ಹಣ ಪಾವತಿಸಿರುವುದು ಹಾಗೂ ಪೂರೈಕೆಯಲ್ಲಿ ಉಂಟಾದ ಸಮಸ್ಯೆಗಳ ಕುರಿತು ರಾಷ್ಟ್ರೀಯ ಲೆಕ್ಕಪರಿಶೋಧನಾ ಕಚೇರಿ ಸೇರಿದಂತೆ ವಿವಿಧ ಸಂಸ್ಥೆಗಳ ಪರಿಶೀಲನೆಯ ಬಳಿಕ ಸಚಿವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು.
ಪೆವ್ಕೂರ್ ವೈಯಕ್ತಿಕವಾಗಿ ಎಲ್ಲ ನಿರ್ಧಾರಗಳ ಹೊಣೆ ಹೊತ್ತಿರುವುದಾಗಿ ಹೇಳದೆ, ರಾಜಕೀಯ ಹೊಣೆಗಾರಿಕೆಯನ್ನು ಸ್ವೀಕರಿಸಿ ಸಚಿವ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಈ ಪ್ರಕರಣದಿಂದ ಎಸ್ಟೋನಿಯಾ ಸರ್ಕಾರಕ್ಕೆ ಉಕ್ರೇನ್ ಗಾಗಿ ಖರೀದಿಸಿದ್ದ ಶಸ್ತ್ರಾಸ್ತ್ರಗಳ ಹಣದ ಕುರಿತು ಅನಿಶ್ಚಿತತೆ ಎದುರಾಗಿದೆ. ಯೂರೋಪಿಯನ್ ಶಾಂತಿ ಸೌಲಭ್ಯದಿಂದ ಪಡೆದ ಹಣವನ್ನು ವಾಪಸ್ ನೀಡಬೇಕಾದ ಪರಿಸ್ಥಿತಿ ಎದುರಾಗಬಹುದೇ ಎಂಬುದರ ಕುರಿತು ಯೂರೋಪಿಯನ್ ಕಮಿಷನ್ ಎಸ್ಟೋನಿಯಾ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸುತ್ತಿದೆ.