ಸಂಭಾವ್ಯ ಹಿಂಸಾಚಾರ ತಡೆಯಲು ನೇಪಾಳದಾದ್ಯಂತ ಕರ್ಫ್ಯೂ ವಿಧಿಸಿದ ಸೇನೆ
Photo: PTI
ಕಠ್ಮಂಡು: ಸಂಭಾವ್ಯ ಹಿಂಸಾಚಾರವನ್ನು ತಡೆಯಲು ನೇಪಾಳ ಸೇನೆ ದೇಶಾದ್ಯಂತ ಕರ್ಫ್ಯೂ ವಿಧಿಸಿದ್ದು, ಬಿಗಿ ಭದ್ರತಾ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಪ್ರತಿಭಟನೆಯ ನೆಪದಲ್ಲಿ ಸಂಭಾವ್ಯ ಹಿಂಸಾಚಾರವನ್ನು ಹತ್ತಿಕ್ಕಲು ನೇಪಾಳ ಸೇನೆ ಬುಧವಾರ ದೇಶವ್ಯಾಪ್ತಿ ಕರ್ಫ್ಯೂ ವಿಧಿಸಿದೆ. ಅದರಂತೆ ಬುಧವಾರ ಬೆಳಗ್ಗೆಯಿಂದ ಸಂಜೆ 5 ಗಂಟೆಯವರೆಗೆ ಈ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬಳಿಕ ಗುರುವಾರ ಬೆಳಗ್ಗೆ 6 ಗಂಟೆಯಿಂದ ಕರ್ಫ್ಯೂ ಮತ್ತೆ ಜಾರಿಗೆ ಬರಲಿದೆ" ನೇಪಾಳ ಸೇನೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ನೇಪಾಳದ ರಾಜಧಾನಿ ಕಠ್ಮಂಡು ಸೇರಿದಂತೆ ಪ್ರಮುಖ ನಗರಗಳಲ್ಲಿ ಸೇನಾ ಪಡೆ ಮೊಕ್ಕಾಂ ಹೂಡಿದ್ದು, ಪ್ರತಿಭಟನಾಕಾರರ ಮೇಲೆ ತೀವ್ರ ನಿಗಾ ವಹಿಸಿದೆ ಎಂದು ಮೂಲಗಳು ಹೇಳಿವೆ.
ಮಂಗಳವಾರ ರಾತ್ರಿ 10 ಗಂಟೆಯಿಂದ ನೇಪಾಳ ಸೇನೆ ಭದ್ರತಾ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಂಡಿದ್ದು, ನಿರ್ಬಂಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು, ವಿಧ್ವಂಸದ ಕೃತ್ಯಗಳು, ಬೆಂಕಿ ಹಚ್ಚುವುದು, ವ್ಯಕ್ತಿಗಳು ಅಥವಾ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸುವುದನ್ನು ಕ್ರಿಮಿನಲ್ ಕೃತ್ಯಗಳೆಂದು ಪರಿಗಣಿಸಿ, ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.